ಬಣ್ಣಬಣ್ಣಗಳ ಬೆಳ್ಳಿ ಕಲಾವಿದ ಮೇಘನಾಥ ಬೆಳ್ಳಿ

Update: 2022-05-10 06:29 GMT

ತನ್ನ ಸುತ್ತಲಿನ ಪ್ರಕೃತಿ, ಅಲ್ಲಿಯ ಮನುಷ್ಯನ ಸಹಜ ಜೀವನ, ಬದುಕಿನ ರೀತಿಗಳನ್ನು ನೈಜವಾಗಿ ಚಿತ್ರಿಸುವ ಕಲಾವಿದ ಮೇಘನಾಥ ಅಬ್ರಾಹಂ ಬೆಳ್ಳಿ. ಸುಮಾರು ಮೂರು ದಶಕಗಳನ್ನು ಸಗರನಾಡಿನ ಪರಿಸರದಲ್ಲಿ ತಮ್ಮ ಬಣ್ಣ, ಕುಂಚ, ಕ್ಯಾನ್ವಾಸ್‌ಗಳಿಂದ ಬೆಳ್ಳಿ ಎಂದೇ ಖ್ಯಾತರಾದ ಮೇಘನಾಥ ಅಬ್ರಹಾಂ ಬೆಳ್ಳಿ ಅವರನ್ನು ಭೇಟಿಯಾಗಿ ಅವರ ಕಲಾಕೃತಿಗಳನ್ನು ನೋಡಿದಾಗ ಹೇಗೆ ಒಬ್ಬ ಕಲಾವಿದ ತನ್ನ ಸುತ್ತಲಿನ ಪರಿಸರ, ಸಮಾಜ, ಸಮುದಾಯದ ಆಗುಹೋಗುಗಳಿಗೆ ಸಾಕ್ಷಿಪ್ರಜ್ಞೆಯಾಗಿರುತ್ತಾನೆ, ತನ್ನ ಮಿತಿಯೊಳಗೆ ತನ್ನಲ್ಲಿರುವ ಕಲೆ, ಸಾಹಿತ್ಯದಿಂದ ತನ್ನ ಅಭಿವ್ಯಕ್ತಿ ಮಾಧ್ಯಮದಿಂದ ಹೇಗೆ ದಾಖಲಿಸುತ್ತಾನೆ ಎಂಬ ಅರಿವು ಮೂಡುತ್ತದೆ. ಹೀಗೆ ಅವರ ಅಪಾರ ಕಲಾಕೃತಿಗಳ ಪರಿಚಯವಾಯಿತು. ಅವರನ್ನು ಮಾತನಾಡಿಸಿದಾಗ....

► ನೀವು ಈ ಭಾಗದಲ್ಲಿ ಬೆಳ್ಳಿ ಕಲಾವಿದ ಎಂದೇ ಪ್ರಸಿದ್ಧರಾಗಿದ್ದೀರಿ, ಈ ಬೆಳ್ಳಿಗೆ ಬಣ್ಣದ ನಂಟು ಹೇಗೆ ಬಂತು?

ಬೆಳ್ಳಿ: ನಮ್ಮ ಭಾಗದಲ್ಲಿ ಕಲೆಗೆ ಸಂಬಂಧಪಟ್ಟ ಚಟುವಟಿಕೆಗಳು ಕಡಿಮೆಯೇ, ನಮ್ಮ ಭಾಗದಲ್ಲಿ ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನ ಚಿತ್ರ ಕಲಾವಿದರಿದ್ದಾರೆ. ನಮ್ಮ ಕುಟುಂಬದಲ್ಲಿ ಯಾರೂ ಚಿತ್ರ ಕಲಾವಿದರಿಲ್ಲ, ನನ್ನ ತಂದೆ-ತಾಯಿ ಮತ್ತು ಕುಟುಂಬದ ಎಲ್ಲರೂ ಸಾಹಿತ್ಯಾಸಕ್ತರು, ಸಂಗೀತಾಸಕ್ತರು ಹೀಗಾಗಿ ಕುಟುಂಬದಲ್ಲಿರುವ ವಾತಾವರಣ ನನ್ನನ್ನು ಕಲಾವಿದನಾಗಿ ರೂಪಿಸಿತು. ದೊಡ್ಡಣ್ಣ ಸಾಹಿತ್ಯದ ಕುರಿತು ಕಲೆಯ ಕುರಿತು ಸದಾ ಮಾತಾಡುತ್ತಿದ್ದ, ನನ್ನ ಎರಡನೇ ಅಣ್ಣ ಚಿತ್ರ ರಚಿಸುತ್ತಿದ್ದ. ನನ್ನ ತಂದೆ ಮನೆಯಲ್ಲಿ ಕನ್ನಡ, ಇಂಗ್ಲಿಷ್ ಭಾಷೆಯ ದಿನಪತ್ರಿಕೆ, ವಾರಪತ್ರಿಕೆಗಳು ಮಾಸಪತ್ರಿಕೆಗಳು ಅಲ್ಲದೆ ಮಕ್ಕಳಿಗಾಗಿ ಚಂದಮಾಮ ವಿಸ್ಡಮ್ ಮಾಸಿಕಗಳನ್ನು ತರಿಸುತ್ತಿದ್ದರು. ಇದರಿಂದ ನನಗೆ ಸಾಹಿತ್ಯ ಮತ್ತು ಚಿತ್ರಕಲೆಯ ಕುರಿತು ವಿಶೇಷ ಆಸ್ಥೆ ಬೆಳೆಯಿತು. ಪತ್ರಿಕೆಗಳ ಹಲವು ಕಲಾವಿದರು ನನಗೆ ಮಾನಸ ಗುರುಗಳು. ಮನೆಯಲ್ಲಿ ನನ್ನ ಅಭಿರುಚಿಗೆ ತಕ್ಕಂತೆ ನನ್ನ ಅಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು. ಮೊದಲಿಗೆ ಗಲ್ಬರ್ಗಾದ ದಿ ಐಡಿಯಲ್ ಫೈನ್ ಆರ್ಟ್ಸ್ ನಲ್ಲಿ ಚಿತ್ರಕಲಾ ಶಿಕ್ಷಕ ತರಬೇತಿ ಮಾಡಿದೆ, ನಂತರ ಡಿಪ್ಲೊಮಾ ಇನ್ ಫೈನ್ ಆರ್ಟ್ಸ್ ಮುಗಿಸಿ, ಆರ್ಟ್ ಮಾಸ್ಟರ್ ಕೋರ್ಸ್ ಮಾಡಿದೆ. ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಮಾಡಿಕೊಂಡು ನಂತರ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಸ್ನಾತಕೋತ್ತರ ಮಾಡಿಕೊಂಡೆ.

► ನಿಮ್ಮ ಈ ಚಿತ್ರಗಳನ್ನು ನೋಡಿದಾಗ ಇಲ್ಲಿ ನೀವು ವಾಟರ್ ಕಲರ್ ಆಕ್ರಿಲಿಕ್ ಮಾಧ್ಯಮದಲ್ಲಿಯೇ ಹೆಚ್ಚಾಗಿ ಕಲಾಕೃತಿಗಳನ್ನು ರಚಿಸಿದ್ದೀರಿ, ಅವು ನಿಮ್ಮ ಕಲ್ಪನಾ ಚಿತ್ರಗಳಿಗೆ ಹೇಗೆ ಸಹಾಯ ಮಾಡಿವೆ?

ಬೆಳ್ಳಿ: ನಾನು ಹಲವು ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ರಚಿಸಿದ್ದೇನೆ. ಮೊದಲು ಪೋಸ್ಟರ್ ಕಲರ್ಸ್‌, ತೈಲ ವರ್ಣಗಳಲ್ಲಿ (ಆಯಿಲ್ ಕಲರ್) ಮಾಡುತ್ತಿದ್ದೆ. ನಂತರ ಆಕ್ರಿಲಿಕ್ ವರ್ಣಗಳು ನನಗೆ ನನ್ನ ಕಲ್ಪನೆಗೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಾಯಿತು. ಆಕ್ರಿಲಿಕ್ ವರ್ಣಗಳ ಹ್ಯಾಂಡ್ಲಿಂಗ್ ಹಾಗೂ ಕ್ಯಾನ್ವಾಸ್ ಮೇಲೆ ನನ್ನ ಕಲ್ಪನೆಗಳನ್ನು, ಅಭಿವ್ಯಕ್ತಿಸಲು ಸುಲಭವಾಗಿದೆ. ಆದುದರಿಂದ ನಾನು ಆಕ್ರಿಲಿಕ್ ವರ್ಣಗಳಿಗೆ ಆತು ಕೊಂಡಿದ್ದೇನೆ. ಬಳಸುವ ವಿಧಾನವೂ ಸುಲಭ, ತೈಲವರ್ಣಗಳು ಆರಲು ಸಮಯ ಬೇಕು ಆದರೆ ಆಕ್ರಿಲಿಕ್‌ನಲ್ಲಿ ಕೃತಿ ರಚಿಸಲು ಕಡಿಮೆ ಅವಧಿ ಸಾಕು.

► ನಿಮ್ಮ ಚಿತ್ರಗಳು ಹೆಚ್ಚಾಗಿ ಜಾನಪದ ಜನಜೀವನ ಬಗ್ಗೆ ಹಾಗೂ ಗ್ರಾಮೀಣ ಜನರ ಕುಶಲಕಲೆ, ಗ್ರಾಮೀಣ ಜನರ ನಂಬಿಕೆಗಳು, ನೃತ್ಯಗಳು ಇಂಥವುಗಳನ್ನು ಹೆಚ್ಚು ರಚಿಸಿದ್ದೀರಿ ಅಲ್ಲವೇ?

ಬೆಳ್ಳಿ: ನಾನು ಹುಟ್ಟಿದ್ದು ಬೆಳೆದಿದ್ದು ಮೂಲತಃ ಗ್ರಾಮೀಣ ಪ್ರದೇಶದಲ್ಲಿ. ವ್ಯಾಸಂಗಕ್ಕಾಗಿ ಕಲಬುರಗಿ, ಬೆಳಗಾವಿಯಲ್ಲಿದ್ದೆ. ಹೈದರಾಬಾದ್, ಬೆಂಗಳೂರು ಮತ್ತು ಬೇರೆ ಮಹಾನಗರಗಳಲ್ಲಿ ಬದುಕಲು ಅವಕಾಶ ಇದ್ದರೂ ಅಲ್ಲಿನ ಜನಜೀವನ ಎಂದೂ ನನ್ನದಾಗಲಿಲ್ಲ. ನಮ್ಮ ಭಾಗದ ಗ್ರಾಮೀಣ ಜನರ ನಂಬಿಕೆಗಳು, ಹಾದಿ,ಬೀದಿಗಳಲ್ಲಿ ಕಾಣಿಸುವ ಪುರುಷರು, ಸ್ತ್ರೀಯರು, ಜೋಗಿಯರು, ರೈತರು ಹಾಗೂ ಗ್ರಾಮೀಣ ಜನರು, ಹಬ್ಬ, ಜಾತ್ರೆ ಇತ್ಯಾದಿ ನನ್ನ ಕೃತಿಯ ವಿಷಯ ವಸ್ತುಗಳಾಗಿವೆ. ಪ್ರತಿಯೊಂದು ನಂಬಿಕೆಗೂ ಅದರದ್ದೇ ಆದ ಒಂದು ಕಥೆ ಇರುತ್ತದೆ ಅವೆಲ್ಲವೂ ನನಗೆ ಸ್ಪೂರ್ತಿದಾಯಕ. ಉದಾಹರಣೆಗೆ ಹಳ್ಳಿಗಳಲ್ಲಿ ಬಳಸುವ ಕೌದಿಗಳು, ಕೌದಿಯಲ್ಲಿ ಹಚ್ಚುವ ತೇಪೆಗಳಿಗೆ ಅವರದ್ದೆ ಆದ ಕಥೆ ವಿವರಣೆ ಇರುತ್ತದೆ. ಇವೆಲ್ಲವೂ ನನಗೆ ಅದ್ಭುತಗಳು. ನಾನು ಚಿಕ್ಕವನಿದ್ದಾಗಿನಿಂದ ಬೆರಗಿನಿಂದ ನೋಡುತ್ತಿದ್ದೆ ಮುಂದೆ ನನ್ನ ಕೃತಿಗಳಿಗೆ ಇವುಗಳೇ ನನ್ನ ವಿಷಯ ವಸ್ತುಗಳಾಗಿವೆ.

► ನಿಮ್ಮ ಸೃಜನಶೀಲತೆಗೆ ಮುಖ್ಯಕಾರಣ ಯಾವುದು? ನೀವಿರುವ ನಿಮ್ಮ ಸುತ್ತಲಿನ ಪರಿಸರವೇ? ನಿಮ್ಮ ಕಲಾ ಪ್ರಕಾರದ ಕುರಿತು ಹೇಳಿ.

ಬೆಳ್ಳಿ: ನನ್ನ ಸುತ್ತಲೂ ನಡೆಯುವ ಘಟನೆಗಳು, ನಾನು ನೋಡುವ ಘಟನಾವಳಿಗಳೇ ನನಗೆ ಕೃತಿ ರಚಿಸಲು ಪ್ರೇರೇಪಿಸುತ್ತವೆ. ಆದರೆ ಕೃತಿರಚಿಸಲು ಅದೊಂದು ತರಹದ ತುಡಿತ ಇದ್ದೇ ಇರುತ್ತದೆ. ಆ ತುಡಿತವೇ ಕೃತಿ ರಚಿಸುತ್ತದೆ. ಅದು ನನ್ನನ್ನು ಕಾಡುತ್ತಿರುತ್ತದೆ. ಅದೊಂದು ತರದ ಪ್ರಸವ ವೇದನೆ. ಎಲ್ಲಾ ಕಲಾವಿದರಿಗೂ ತುಡಿತ ಇದ್ದೇ ಇರುತ್ತದೆ. ಪ್ರತಿ ಕಲಾವಿದರು ತಮ್ಮದೇ ಆದ ಒಂದು ಶೈಲಿ ರೂಢಿಸಿಕೊಂಡಿರುತ್ತಾರೆ. ಅದೇ ರೀತಿಯಾಗಿ ನಾನು ನನ್ನದೇ ಆದ ಶೈಲಿಯಲ್ಲಿ ಕೃತಿ ರಚಿಸುತ್ತೇನೆ. ಪ್ರಾಥಮಿಕ ಬಣ್ಣಗಳೇ ನನ್ನ ವೈಶಿಷ್ಟ್ಯ. ಕೆಲವೊಂದು ಕೃತಿ ಕೆಲವೊಂದು ಬಣ್ಣಗಳನ್ನು, ಶೈಲಿಯನ್ನು ಡಿಮಾಂಡ್ ಮಾಡುತ್ತದೆ. ನನಗೂ ನಾನು ಹೇಳಬೇಕಾಗಿರುವುದು ಹೇಳಲು(ತೋರಿಸಲು) ಶೈಲಿ, ವರ್ಣಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇನೆ. ಯಾವುದೇ ಕಲಾ ಪ್ರಕಾರದಲ್ಲಿ ಉಳಿದುಹೋಗಿಲ್ಲ. ನನಗಿರುವ ತುಡಿತ, ನನ್ನಲ್ಲಿರುವ ಸಾಮಾಗ್ರಿ, ಕೃತಿ ನನ್ನಿಂದ ನಿರೀಕ್ಷಿಸುವುದನ್ನು ನೀಡಲು ಬದ್ಧನಾಗಿರುತ್ತೇನೆ. ಕೃತಿ ಪೂರ್ಣವಾದಾಗ ಅದು ನೀಡುವ ಸಮಾಧಾನ, ತೃಪ್ತಿ ಇದೆಯಲ್ಲ ಅದು ಬಲು ಮುಖ್ಯವಾದದ್ದು. ಜನಮನ್ನಣೆಗೆ ನಾನು ಬದಲಾಗಿಲ್ಲ.

► ನೀವೊಬ್ಬ ಸರಕಾರಿ ನೌಕರರಾಗಿದ್ದೀರಿ. ಅದರಲ್ಲೂ ಪ್ರವಾಸೋದ್ಯಮ ಇಲಾಖೆಯಲ್ಲಿ. ನಿಮ್ಮ ಸೃಜನಶೀಲತೆಗೆ ನಿಮ್ಮ ಸರಕಾರಿ ನೌಕರಿ ಏನಾದರೂ ಅಡ್ಡಿಯಾಗುತ್ತದೆಯೇ ನಿಮ್ಮ ಕಲೆಗೆ ನಿಮ್ಮ ವಿಭಾಗ ಪ್ರೋತ್ಸಾಹ ನೀಡುತ್ತಿದೆಯೇ?

ಬೆಳ್ಳಿ: ಮೂಲತಃ ನಾನು ಸರಕಾರಿ ಪ್ರೌಢಶಾಲಾ ಶಿಕ್ಷಕ, ಉದರಕೃತಂ ನಾನು ಈ ಮೊದಲು ಕಲಿತ ಫೋಟೊಗ್ರಫಿ, ವೀಡಿಯೊಗ್ರಫಿ, ಫೋಟೊ ಎಡಿಟಿಂಗ್, ಮಿಕ್ಸಿಂಗ್, ಆಡಿಯೊ ಎಡಿಟಿಂಗ್, ವೀಡಿಯೊ ಸಾಕ್ಷಚಿತ್ರಗಳನ್ನು ಮಾಡುತ್ತೇನೆ. ಯಾದಗಿರಿ ನೂತನವಾಗಿ ಜಿಲ್ಲೆಯಾದಾಗ ಸಾಕಷ್ಟು ಸವಾಲುಗಳಿದ್ದವು. ರಾಜ್ಯಕ್ಕೆ, ರಾಷ್ಟ್ರಕ್ಕೆ, ಪ್ರಪಂಚಕ್ಕೆ ಯಾದಗಿರಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ದೂರದೃಷ್ಟಿಯುಳ್ಳ ಅಂದಿನ ಜಿಲ್ಲಾಧಿಕಾರಿ ಮನೋಜ್ ಜೈನ್ ಯಾದಗಿರಿ ಪ್ರವಾಸಿತಾಣಗಳ ಬ್ರೋಚರ್ಸ್, ವೀಡಿಯೊ ಸಾಕ್ಷ್ಯಚಿತ್ರ, ವೆಬ್‌ಸೈಟ್ ಮಾಡಲು ನನ್ನನ್ನು ನಿಯೋಜನೆ ಮೇಲೆ ಇಲಾಖೆಗೆ ಕರೆದುಕೊಂಡರು. ಅಂದಿನಿಂದ ಇಲ್ಲಿ ಜಿಲ್ಲೆಗೆ ನನ್ನ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ.

ನೌಕರಿಯ ಹೊರತಾದ ಸಮಯದಲ್ಲಿಯೇ ನಾನು ನನ್ನ ಕಲಾಭ್ಯಾಸ, ಕೃತಿ ರಚನೆ ಮಾಡುತ್ತೇನೆ.

Writer - ಜಿ. ಎಂ. ಶಿರಹಟ್ಟಿ

contributor

Editor - ಜಿ. ಎಂ. ಶಿರಹಟ್ಟಿ

contributor

Similar News