ಮಣಿಪಾಲ: ಕ್ಯಾನ್ಸರ್ ಬಾಧಿತ ಮಕ್ಕಳ ಚಿಕಿತ್ಸೆಗೆ ನಿಧಿ ಸಂಗ್ರಹ ಕಾರ್ಯಕ್ರಮ
ಮಣಿಪಾಲ : ರೋಟರಿ ಕ್ಲಬ್ ಮಣಿಪಾಲ ಟೌನ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಸಹಯೋಗದೊಂದಿಗೆ ಕ್ಯಾನ್ಸರ್ ಬಾಧಿತ ಮಕ್ಕಳ ಚಿಕಿತ್ಸೆಗೆ ನಿಧಿ ಸಂಗ್ರಹಿಸಲು ‘ನವಚೇತನ’ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಇತ್ತೀಚೆಗೆ ಮಣಿಪಾಲದ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರ ಮೂರ್ತಿ ಹಾಗೂ ಡಾ.ಜಯಗೌರಿ ಅಲ್ಲದೇ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಮಾಹೆ ಕುಲಪತಿ ಲೆ.ಜ.ಡಾ.ಎಂ.ಡಿ. ವೆಂಕಟೇಶ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್, ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ನಿಧಿ ಸಂಗ್ರಹಿಸುವ ರೋಟರಿ ಕ್ಲಬ್ ಮಣಿಪಾಲ ಟೌನ್‌ನ ಸಂಕಲ್ಪವನ್ನು ಶ್ಲಾಘಿಸಿದರು. ಇದಕ್ಕಾಗಿ ರೋಟರಿ ಕ್ಲಬ್ ಒಂದು ಕೋಟಿ ರೂ.ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಅವರು ಸಂಗ್ರಹಿಸುವ ನಿಧಿಗೆ ಅಷ್ಟೇ ಮೊತ್ತವನ್ನು ಮಾಹೆ ನೀಡುವುದು ಎಂದು ಆಶ್ವಾಸನೆ ನೀಡಿದರು.
ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ರೋಟರಿ ಕ್ಲಬ್‌ನ ಇಂಛ ಪ್ರಯತ್ನ ಸಾವಿರಾರು ಕ್ಯಾನ್ಸರ್ ಬಾಧಿತ ಮಕ್ಕಳು ಹಾಗೂ ಅವರ ಹೆಚ್ಚವರಲ್ಲಿ ನಿರೀಕ್ಷೆಯ ಹೊಂಬೆಳಕು ಮೂಡಲು ಕಾರಣವಾಗುತ್ತದೆ. ಇಂಥ ಒಳ್ಳೆಯ ಪ್ರಯತ್ನಗಳಿಗೆ ಮಾಹೆ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ರಾಮಚಂದ್ರ ಮೂರ್ತಿ ಹಾಗೂ ಡಾ.ಜಯಗೌರಿ ಅವರೂ ಮಾತನಾಡಿ, ರೋಟರಿ ಕ್ಲಬ್‌ನ ಯೋಜನೆಗಳನ್ನು ವಿವರಿಸಿದರು. ರೋಟರಿ ಕ್ಲಬ್‌ನ ಅಧ್ಯಕ್ಷ ಗಣೇಶ್ ನಾಯಕ್ ಹಾಗೂ ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾರ್ಗವಿ ಗ್ರೂಪ್‌ನ ಹಂಸಿನಿ ಉಪಾಧ್ಯಾಯರಿಂದ ನೃತ್ಯಪ್ರದರ್ಶನ, ನೃತ್ಯ ಸ್ಪರ್ಧೆಗಳು ನಡೆದವು.