ದ.ಕ.ಜಿಲ್ಲೆಯಲ್ಲಿ ಉತ್ತಮ ಮಳೆ
ಮಂಗಳೂರು : ಪೂರ್ವ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಅಸನಿ ಚಂಡಮಾರುತದ ಪರಿಣಾಮ ದ.ಕ.ಜಿಲ್ಲೆಯ ಬಹುತೇಕ ಕಡೆ ಬುಧವಾರ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ನಿರಂತರವಾಗಿ ಸುರಿದ ಮಳೆಯು ಅಪರಾಹ್ನದ ಬಳಿಕ ಬಿರುಸು ಪಡೆಯಿತು. ನಗರ ಮತ್ತು ಹೊರವಲಯದ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಮಳೆಯು ಯಾವುದೇ ಅಬ್ಬರ ತೋರಿಸಲಿಲ್ಲ. ಕೆಲವು ಕಡೆ, ಹನಿ ಇನ್ನು ಕೆಲವು ಕಡೆ ಸಾಧಾರಣ ಮಳೆಯಾಗಿದ್ದರೆ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಮಂಗಳವಾರ ಉರಿ ಬಿಸಿಲಿನ ವಾತಾವರಣ ಕಂಡುಬಂದಿದ್ದರೆ, ಬುಧವಾರ ಮೋಡ ಕವಿದಿತ್ತು. ತಾಪಮಾನದಲ್ಲೂ ಇಳಿಕೆಯಾಗಿ ತಂಪು ಕಂಡು ಬಂದಿತ್ತು. ಹಾಗಾಗಿ ಅವಧಿಗೆ ಮುನ್ನವೇ ಮುಂಗಾರು ಪ್ರವೇಶಿಸಿದಂತಹ ಅನುಭವವಾಗಿದೆ.
ಬಂಟ್ವಾಳದ ಕೆದಿಲದಲ್ಲಿ ಅತ್ಯಧಿಕ ೬೫.೫ ಮಿ.ಮೀ ಮಳೆಯಾಗಿದೆ. ಉಳಿದಂತೆ ಇಡ್ಕಿದು ೫೯.೫, ಅನಂತಾಡಿ ೪೯.೫, ಇರಾ ೪೮, ಸುಳ್ಯದ ಬಾಳಿಲ ೪೫ ಮಿ.ಮೀ. ಮಳೆಯಾಗಿದೆ. ಬಳ್ಪ, ಕಲ್ಮಡ್ಕ, ಬೆಳ್ಳಾರೆ, ಮಂಚಿ, ನರಿಕೊಂಬು, ಅಡ್ಯಾರ್, ಹರೇಕಳ, ಪಾವೂರು, ಬಳ್ನಾಡು ಮತ್ತಿತರ ಕಡೆಗಳಲ್ಲಿ ಅಧಿಕ ಮಳೆಯಾಗಿದೆ.
ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ ೨೮.೪ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ೨೬.೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆಯಿಂದಾಗಿ ಸಾಮಾನ್ಯಕ್ಕಿಂತ ಸುಮಾರು ೬ ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದೆ. ಗುರುವಾರವೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಅಲ್ಲದೆ ಗುರುವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.