ಅಝೀಂ ಖಾನ್ ಜಾಮೀನು ಅರ್ಜಿಗೆ ಉತ್ತರಿಸಿ: ಯೋಗಿ ಸರಕಾರಕ್ಕೆ ಸುಪ್ರೀಂ ನಿರ್ದೇಶ

Update: 2022-05-11 17:14 GMT

ಹೊಸದಿಲ್ಲಿ,ಮೇ 11: ಭೂ ಕಬಳಿಕೆ ಪ್ರಕರಣದಲ್ಲಿ ತನ್ನ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ವಿಳಂಬ ಕುರಿತು ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶ ನೀಡಿದೆ. ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಮೂರ್ತಿಎಂದು ಎಲ್.ನಾಗೇಶ್ವರ ರಾವ್,ಬಿ.ಆರ್.ಗವಾಯಿ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠವು ಪ್ರಕಟಿಸಿತು.

‘ಏನಿದು? ಅವರನ್ನೇಕೆ ಹೋಗಲು ಬಿಡಬಾರದು? ಅವರು ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಒಂದೆರಡು ಪ್ರಕರಣಗಳಾಗಿದ್ದರೆ ಪರವಾಗಿಲ್ಲ,ಆದರೆ ಅದು 89 ಪ್ರಕರಣಗಳಾಗಲು ಸಾಧ್ಯವಿಲ್ಲ. ಖಾನ್ ಜಾಮೀನು ಪಡೆದಾಗೆಲ್ಲ ಅವರನ್ನು ಇನ್ನೊಂದು ಪ್ರಕರಣದಲ್ಲಿ ವಾಪಸ್ ಜೈಲಿಗೆ ಕಳುಹಿಸಲಾಗುತ್ತಿದೆ. ನೀವು ಉತ್ತರವನ್ನು ಸಲ್ಲಿಸಿ,ನಾವು ಮಂಗಳವಾರ ವಿಚಾರಣೆಯನ್ನು ನಡೆಸುತ್ತೇವೆ ’ಎಂದು ಪೀಠವು ಹೇಳಿತು.

ಈ ಸರಣಿ ಹೀಗೆಯೇ ಮುಂದುವರಿಯುತ್ತದೆ ಮತ್ತು ಒಂದು ಪ್ರಕರಣದಲ್ಲಿ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರೆ ಇನ್ನೊಂದು ಎಫ್ಐಆರ್ನಲ್ಲಿ ಅವರನ್ನು ಸಿಲುಕಿಸಿ ಮತ್ತು ಅವರನ್ನು ಕಂಬಿಗಳ ಹಿಂದೆಯೇ ಇರಿಸಿ ಎಂದು ನ್ಯಾ.ಗವಾಯಿ ಕುಟುಕಿದರು.
ಇದೊಂದು ಕಳವಳಕಾರಿ ಪ್ರಕರಣವಾಗಿದ್ದು,ವಿವರವಾದ ವಿಚಾರಣೆಯ ಅಗತ್ಯವಿದೆ ಎಂದು ಖಾನ್ ಪರ ಹಿರಿಯ ನ್ಯಾಯವಾದಿ ಕಪಿಲ ಸಿಬಲ್ ಹೇಳಿದರು.
ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು,ತಪ್ಪು ಅಭಿಪ್ರಾಯವನ್ನು ಸೃಷ್ಟಿಸಲಾಗುತ್ತಿದೆ ಮತ್ತು ಖಾನ್ ವಿರುದ್ಧ ದಾಖಲಾಗಿರುವ ಪ್ರತಿಯೊಂದೂ ಪ್ರಕರಣದಲ್ಲಿ ಹುರುಳಿದೆ ಎಂದು ವಾದಿಸಿದರು.

ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ವಿಳಂಬದ ಕುರಿತು ಈ ಹಿಂದೆಯೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು,‘ಒಂದನ್ನು ಹೊರತುಪಡಿಸಿ ಇತರ ಎಲ್ಲ ಪ್ರಕರಣಗಳಲ್ಲಿಯೂ ಖಾನ್ ಜಾಮೀನು ಪಡೆದಿದ್ದಾರೆ. ಇದೊಂದು ದೀರ್ಘಕಾಲದಿಂದ ಬಾಕಿಯಿದೆ. ಇದು ನ್ಯಾಯದ ಅಪಹಾಸ್ಯವಾಗಿದೆ. ನಾವು ಹೆಚ್ಚಿಗೆ ಏನೂ ಹೇಳುವುದಿಲ್ಲ ’ಎಂದಿತ್ತು.

ಅಲಹಾಬಾದ್ ಉಚ್ಚ ನ್ಯಾಯಾಲಯವು ಮೇ 5ರಂದು ಭೂ ಕಬಳಿಕೆ ಪ್ರಕರಣದಲ್ಲಿ ಖಾನ್ ಜಾಮೀನು ಅರ್ಜಿಯ ಮೇಲೆ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಖಾನ್ ತನ್ನ ಮುಹಮ್ಮದ್ ಅಲಿ ಜೌಹಾರ್ ವಿವಿ ಯೋಜನೆಗಾಗಿ ಶತ್ರು ಆಸ್ತಿಯನ್ನು ಕಬಳಿಸಿದ್ದಾರೆ ಮತ್ತು ನೂರಾರು ಕೋ.ರೂ.ಸಾರ್ವಜನಿಕ ಹಣವನ್ನು ದುರುಪಯೋಗಿಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಭಜನೆಯ ಸಂದರ್ಭದಲ್ಲಿ ಇಮಾಮುದ್ದೀನ್ ಕುರೇಷಿ ಎನ್ನುವವರು ಪಾಕಿಸ್ತಾನಕ್ಕೆ ತೆರಳಿದ್ದರು ಮತ್ತು ಅವರ ಭೂಮಿಯನ್ನು ಶತ್ರು ಆಸ್ತಿ ಎಂದು ದಾಖಲಿಸಲಾಗಿತ್ತು,ಆದರೆ ಖಾನ್ ಇತರರೊಂದಿಗೆ ಶಾಮೀಲಾಗಿ 13.842 ಹೆಕ್ಟೇರ್ ವಿಸ್ತೀರ್ಣದ ನಿವೇಶನವನ್ನು ಕಬಳಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.

ಖಾನ್ ಸದ್ಯ ಸೀತಾಪುರ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News