ವಾರಣಾಸಿ ಜ್ಞಾನವ್ಯಾಪಿ ಮಸೀದಿಯ ವೀಡಿಯೊ ಸರ್ವೇ ಮುಂದುವರಿಸುವಂತೆ ಕೋರ್ಟ್‌ ಆದೇಶ

Update: 2022-05-13 05:37 GMT

ವಾರಣಾಸಿ,ಮೇ 12: ಇಲ್ಲಿಯ ಜ್ಞಾನವಾಪಿ ಮಸೀದಿಯ ವೀಡಿಯೊ ಸರ್ವೆ ಕಾರ್ಯ ಮುಂದುವರಿಯಲಿದೆ ಎಂದು ಸ್ಥಳೀಯ ನ್ಯಾಯಾಲಯವು ಗುರುವಾರ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಮುಂದಿನ ವಿಚಾರಣಾ ದಿನಾಂಕವಾದ ಮೇ 17ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿ ವಿವರವಾದ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಆದೇಶಿಸಿದೆ ಎಂದು ಅರ್ಜಿದಾರರಲ್ಲೋರ್ವರ ಪರ ವಕೀಲ ಸುಭಾಶ್ ನಂದನ್ ಚತುರ್ವೇದಿ ತಿಳಿಸಿದರು.
ಜ್ಞಾನವಾಪಿ ಮಸೀದಿಯ ಸಮೀಕ್ಷೆಗಾಗಿ ನೇಮಕಗೊಂಡಿರುವ ಅಡ್ವೊಕೇಟ್ ಕಮಿಷನರ್ ಅಜಯ್ ಕುಮಾರ್ ಅವರನ್ನು ಬದಲಿಸಲು ನ್ಯಾಯಾಲಯವು ನಿರಾಕರಿಸಿದೆ. ಅದು ಸರ್ವೆ ಆಯೋಗಕ್ಕೆ ಇನ್ನೂ ಇಬ್ಬರು ಕಮಿಷನರ್‌ಗಳನ್ನು ನೇಮಕಗೊಳಿಸಿದೆ.

ಎ.8ರಂದು ಅಡ್ವೊಕೇಟ್ ಕಮಿಷನರ್ ಆಗಿ ಅಜಯ ಕುಮಾರ್ ಅವರನ್ನು ನೇಮಕಗೊಳಿಸಿದ್ದ ನ್ಯಾಯಾಲಯವು, ವೀಡಿಯೊ ಚಿತ್ರೀಕರಣದೊಂದಿಗೆ ಮಸೀದಿಯ ಸರ್ವೆ ಕಾರ್ಯವನ್ನು ನಡೆಸುವಂತೆ ನಿರ್ದೇಶ ನೀಡಿತ್ತು. ಮಸೀದಿಯ ಪಶ್ಚಿಮ ಗೋಡೆಯ ಹಿಂದೆ ಶೃಂಗಾರ ಗೌರಿಯ ಚಿತ್ರವಿದೆ ಎಂದು ತಿಳಿಸಿರುವ ಐವರು ಮಹಿಳಾ ಅರ್ಜಿದಾರರು,ನಿವೇಶನದಲ್ಲಿ ನಿತ್ಯಪೂಜೆಯನ್ನು ಸಲ್ಲಿಸಲು ಮತ್ತು ಇತರ ಹಿಂದು ಧಾರ್ಮಿಕ ಆಚರಣೆಗಳಿಗೆ ತಮಗೆ ಅವಕಾಶ ನೀಡುವಂತೆ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

ಮೇ 6ರಂದು ಮಸೀದಿ ನಿವೇಶನದಲ್ಲಿ ಸರ್ವೆ ಕಾರ್ಯವನ್ನು ನಡೆಸಲಾಗಿತ್ತಾದರೂ ಮಸೀದಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಅಂಜುಮಾನ್ ಇಂತೆಝಾಮಿಯಾ ಮಸ್ಜಿದ್ ಸಮಿತಿಯು ತಡೆಯೊಡ್ಡಿದ್ದರಿಂದ ಮರುದಿನ ಸರ್ವೆಯನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಅಜಯ ಕುಮಾರ್ ಹಿಂದು ಅರ್ಜಿದಾರರ ಪರ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಸಮಿತಿಯು ಆರೋಪಿಸಿದೆ. ಕುಮಾರ್ ಬದಲಾವಣೆಯನ್ನು ಕೋರಿ ಅದು ಮೇ 7ರಂದು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.

ಗುರುವಾರದ ನ್ಯಾಯಾಲಯದ ಆದೇಶಕ್ಕೆ ಮುನ್ನ ಶಿವಸೇನೆ ನಾಯಕ ಸಂಜಯ ರಾವುತ್ ಅವರು,ಇದೆಲ್ಲ ರಾಜಕೀಯ ಲಾಭಗಳಿಕೆಗಾಗಿ ನಡೆಯುತ್ತಿದೆ. ಈ ಸಮಸ್ಯೆಗಳು ದೇಶವನ್ನು ಒಡೆಯುತ್ತವೆ. ರಾಮ ಮಂದಿರದ ಬಳಿಕ ಶಾಂತಿಯ ಅಗತ್ಯವಿದೆ ಎಂದು ಹೇಳಿಕೆ ನೀಡಿದ್ದರು.
ದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸುವ ತೀರ್ಪನ್ನು ನೀಡದಂತೆ ಎಸ್ಪಿ ವರಿಷ್ಠ ಅಖಿಲೇಶ ಯಾದವ ಅವರು ಬುಧವಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News