×
Ad

ಮಂಗಳೂರು; ‘ದಯಾಮರಣ’ಕ್ಕೆ ಅವಕಾಶ ಕೋರಿದ ನಿರುದ್ಯೋಗಿಗಳು: ಕೈಗಾರಿಕಾ ಸಚಿವರಿಗೆ ಮನವಿ

Update: 2022-05-12 20:24 IST

ಮಂಗಳೂರು : ಮಂಗಳೂರು ವಿಶೇಷ ಆರ್ಥಿಕ ವಲಯ ವ್ಯಾಪ್ತಿಯಲ್ಲಿದ್ದ ಜೆಬಿಎಫ್ ಪೆಟ್ರೋ ಕೆಮಿಕಲ್ಸ್ ಪ್ರೈ. ಲಿ. ಮುಚ್ಚಲ್ಪಟ್ಟಿರುವುದರಿಂದ ನಾವು ಸುಮಾರು 76 ಮಂದಿ ನಿರುದ್ಯೋಗಿಗಳಾಗಿದ್ದೇವೆ. ಈಗಾಗಲೇ ಎರಡು ವರ್ಷ ಉದ್ಯೋಗಕ್ಕಾಗಿ ಕಾದಿದ್ದೇವೆ. ಇನ್ನು ಕಾಯುವ ವ್ಯವಧಾನ ನಮಗಿಲ್ಲ. ನಮ್ಮ ಭೂಮಿಯನ್ನು ಕೈಗಾರಿಕೆಗೆ ನೀಡಿದ್ದೇವೆ. ನಮ್ಮಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಹಾಗಾಗಿ ಕೈಗಾರಿಕಾ ಸಚಿವರು ಒಂದೋ ನಮಗೆ ಉದ್ಯೋಗ ಕೊಡಿಸಲಿ. ಇಲ್ಲವೇ ನಮಗೆ ದಯಾಮರಣಕ್ಕೆ ಅವಕಾಶ ಮಾಡಿಕೊಡಲಿ ಎಂದು ಜೆಬಿಎಫ್ ಉದ್ಯೋಗ ನಿರ್ವಸಿತರಾದ ಪ್ರಶಾಂತ್ ಕುಮಾರ್, ಕೃಷ್ಣರಾಜ್ ಮತ್ತಿತರರು ಮಾಧ್ಯಮ ಪ್ರತಿನಿಧಿಗಳ ಸಮ್ಮುಖ ಭಿನ್ನವಿಸಿದ ಘಟನೆ ಗುರುವಾರ ನಗರದಲ್ಲಿ ನಡೆದಿದೆ.

‘ಉದ್ಯಮಿಯಾಗು, ಉದ್ಯೋಗ ಕೊಡು’ ಕಾರ್ಯಕ್ರಮ ಉದ್ಘಾಟಿಸಲು ಮಂಗಳೂರಿಗೆ ಆಗಮಿಸಿದ್ದ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್.ನಿರಾಣಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸುತ್ತಿದ್ದ ವೇಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಜೆಬಿಎಫ್ ಪೆಟ್ರೋ ಕೆಮಿಕಲ್ಸ್ ಪ್ರೈ. ಲಿ.ನ ನಿರ್ವಸಿತರು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಅಳಲು ತೋಡಿಕೊಂಡರು.

ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ, ಎಂಆರ್‌ಪಿಎಲ್‌ನಲ್ಲಿ ತಾತ್ಕಾಲಿಕ ಉದ್ಯೋಗ ಕೊಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಆದರೆ ನಮಗೆ ಭರವಸೆಯ ಬದಲು ಉದ್ಯೋಗ ಕೊಡಿಸಲಿ. ಇಲ್ಲವೇ ದಯಾಮರಣಕ್ಕೆ ಅವಕಾಶ ಮಾಡಿಕೊಡಲಿ ಎಂದು ಭಿನ್ನವಿಸಿಕೊಂಡರು.

ಉದ್ಯೋಗ ಸಂತ್ರಸ್ತ ಕೃಷ್ಣರಾಜ್ ಮಾತನಾಡಿ, ಜೆಬಿಎಫ್ ಮುಚ್ಚಿದ್ದರಿಂದ 76 ಮಂದಿ ನಿರುದ್ಯೋಗಿಗಳಾಗಿದ್ದಾರೆ. ನಮಗೆ ಎಂಆರ್‌ಪಿಎಲ್‌ನಲ್ಲಿ ಮತ್ತು ಮುಂದೆ ಜೆಬಿಎಫ್ ಪುನಾರಂಭಗೊಂಡರೆ ಅದರಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಈ ಪ್ರಕ್ರಿಯೆಯನ್ನು ಶೀಘ್ರ ಮುಗಿಸಬೇಕು. ನಾವು ಎರಡು ವರ್ಷದಿಂದ ನಿರುದ್ಯೋಗಿಗಳಾ ಗಿದ್ದೇವೆ ಎಂದರು.

ಸೋಫಿಯಾ ಎಂಬವರು ಮಾತನಾಡಿ, ನಾವು ನಮ್ಮ ಎಕರೆಗಟ್ಟಲೆ ಜಮೀನನ್ನು ಎಂಆರ್‌ಪಿಎಲ್- ಒಎಂಪಿಎಲ್‌ಗೆ ಕೊಟ್ಟಿದ್ದರೂ ನಮಗೆ ಖಾಸಗಿ ಕಂಪನಿಯಲ್ಲಿ ಕೆಲಸ ಕೊಟ್ಟು ವಂಚನೆ ಮಾಡಲಾಗಿತ್ತು. ನಮ್ಮ ನಂತರ ಜಾಗ ಕೊಟ್ಟವರಿಗೆ ಎಂಆರ್‌ಪಿಎಲ್‌ನಲ್ಲೇ ಕೆಲಸ ಕೊಡಲಾಗಿದೆ. ನಾವು ಸಂಕಷ್ಟದಲ್ಲಿದ್ದೇವೆ. ಆದಷ್ಟು ಬೇಗ ಉದ್ಯೋಗ ಕೊಡಿಸಿ ಎಂದು ಮನವಿ ಮಾಡಿಕೊಂಡರು.

ನಿರ್ವಸಿತರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಮಂಗಳೂರು ವಿಶೇಷ ಆರ್ಥಿಕ ವಲಯ ವ್ಯಾಪ್ತಿಯಲ್ಲಿ ಮುಚ್ಚಿರುವ ಜೆಬಿಎಫ್ ಪೆಟ್ರೋ ಕೆಮಿಕಲ್ಸ್ ಪ್ರೈ. ಲಿ.ನಿಂದ ನಿರ್ವಸಿತರಾಗಿರುವವರಿಗೆ ಎಂಆರ್‌ಪಿಎಲ್‌ನಲ್ಲಿ ಪರೋಕ್ಷ ಉದ್ಯೋಗ ನೀಡಲು ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್, ಎಂಎಸ್‌ಇಝೆಡ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News