ದೇಶದ್ರೋಹ ಆರೋಪಗಳು ನಮ್ಮನ್ನು ಅಸ್ಪಶ್ಯರನ್ನಾಗಿಸಿವೆ: ಡಾ.ಕಫೀಲ್ ಖಾನ್

Update: 2022-05-12 16:57 GMT
Photo: PTI

ಹೊಸದಿಲ್ಲಿ,ಮೇ 12: ದೇಶದ್ರೋಹ ಕಾನೂನಿಗೆ ಸದ್ಯಕ್ಕೆ ವಿರಾಮ ನೀಡಿರುವ ಮತ್ತು ಅದರಡಿ ಎಲ್ಲ ವಿಚಾರಣೆಗಳನ್ನು ತಡೆಹಿಡಿಯುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿರುವ ಡಾ.ಕಫೀಲ್ ಖಾನ್,ಕಾನೂನನ್ನು ರದ್ದುಗೊಳಿಸುವಂತೆ ಕರೆ ನೀಡಿದ್ದಾರೆ. ಅಲಿಗಡ ಮುಸ್ಲಿಮ್ ವಿವಿಯಲ್ಲಿ ಪ್ರಚೋದನಾಕಾರಿ ಭಾಷಣವನ್ನು ಮಾಡಿದ್ದ ಆರೋಪದಲ್ಲಿ 2020ರಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಅದು ಬ್ರಿಟಿಷ್ ಸರಕಾರವು ಜಾರಿಗೊಳಿಸಿದ್ದ ವಸಾಹತುಶಾಹಿ ಯುಗದ ಕಾನೂನಾಗಿದೆ. ಅದನ್ನು ಪುನರ್ಪರಿಶೀಲಿಸದೆ ರದ್ದುಗೊಳಿಸಲು ಇದು ಸಕಾಲವಾಗಿದೆ ಎಂದು ಹೇಳಿದ ಡಾ.ಖಾನ್, ಸರಕಾರವು ನ್ಯಾಯಾಲಯದಲ್ಲಿ ಈ ಕಾನೂನಿನ ಕುರಿತು ತನ್ನ ನಿಲುವನ್ನು ಹೇಗೆ ಬದಲಿಸಿತು ಎನ್ನುವುದನ್ನು ಅದರ ಅಫಿಡವಿಟ್‌ಗಳು ಸ್ಪಷ್ಟವಾಗಿ ತೋರಿಸಿವೆ ಎಂದರು.

ಸರ್ವೋಚ್ಚ ನ್ಯಾಯಾಲಯದ ಆದೇಶದ ಬೆನ್ನಿಗೇ ಟ್ವಿಟರ್‌ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಶಾಸಕಾಂಗ ಮತ್ತು ನ್ಯಾಯಾಂಗ ಪರಸ್ಪರ ಗೌರವಿಸಬೇಕು,ಆದರೆ ಯಾರೂ ಲಕ್ಷಣ ರೇಖೆಯನ್ನು ದಾಟಬಾರದು ಎಂದು ಪ್ರತಿಪಾದಿಸಿದ್ದರು.

ರಿಜಿಜು ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಖಾನ್,‘ಕೇಂದ್ರ ಸಚಿವರ ಟ್ವೀಟ್ ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರದ ಎಚ್ಚರಿಕೆಯ ಸ್ಪಷ್ಟ ಸಂಕೇತವಾಗಿದೆ. ಆಗಾಗ್ಗೆ ಲಕ್ಷ್ಮಣ ರೇಖೆಯನ್ನು ದಾಟುತ್ತಿರುವುದು ಸರಕಾರವೇ ಎಂದು ನಾನು ನಂಬಿದ್ದೇನೆ. ಎಲ್ಲ ರಾಜಕೀಯ ಪಕ್ಷಗಳು ದೇಶದ್ರೋಹ ಕಾನೂನಿನ ದುರ್ಬಳಕೆಯನ್ನು ಮಾಡಿವೆ ಮತ್ತು ಕಳೆದ ಏಳು ವರ್ಷಗಳಿಂದ ಈ ಕಾನೂನಿನಡಿ ಶೋಷಣೆ ಹೆಚ್ಚುತ್ತಿದೆ ’ಎಂದರು.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನೂ ಹಿಂದೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.
ತನ್ನ ಸ್ವಂತ ಅನುಭವದ ಕುರಿತು ಮಾತನಾಡಿದ ಡಾ.ಖಾನ್, ‘ಆರೋಪಿಗಳನ್ನು ಜೈಲಿನಲ್ಲಿಡಲು ಈ ಕಾನೂನನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಎಲ್ಲ ಆರೋಪಗಳಿಂದ ಮುಕ್ತಗೊಂಡ ಎರಡು ವರ್ಷಗಳ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಎಲ್ಲೆಡೆಗಳಲ್ಲಿ ನನ್ನನ್ನು ಭಯೋತ್ಪಾದಕ ಮತ್ತು ದೇಶವಿರೋಧಿಯನ್ನಾಗಿ ಪ್ರಸ್ತಾಪಿಸಲಾಗುತ್ತಿದೆ. ನಾನು ಮತ್ತು ನನ್ನ ಕುಟುಂಬ ನಮ್ಮ ತವರೂರಿನಲ್ಲಿಯೇ ಅಸ್ಪಶ್ಯರಾಗಿದ್ದೇವೆ. ಜನರು ನಮ್ಮಿಡನೆ ಮಾತನಾಡಲೂ ಹೆದರುತ್ತಿದ್ದಾರೆ’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News