ದೇಶದ್ರೋಹ ಕಾನೂನು: ಸರ್ವೋಚ್ಚ ನ್ಯಾಯಾಲಯದ ಆದೇಶದ ಬಗ್ಗೆ ತಜ್ಞರೇಕೆ ಎಚ್ಚರಿಕೆ ನೀಡುತ್ತಿದ್ದಾರೆ?

Update: 2022-05-13 15:04 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಸರಕಾರದಿಂದ ದೇಶದ್ರೋಹ ಕಾನೂನಿನ (ಐಪಿಸಿಯ ಕಲಂ 124ಎ) ಪುನರ್ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ವಿವಾದಾತ್ಮಕ ಕಾನೂನಿನಡಿ ವಿಚಾರಣೆಗಳನ್ನು ತಡೆಹಿಡಿಯಬೇಕು ಮತ್ತು ಅದರಡಿ ಹೊಸ ಪ್ರಕರಣಗಳನ್ನು ದಾಖಲಿಸುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೂರವಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ತನ್ನ ತೀರ್ಪಿನಲ್ಲಿ ಆದೇಶಿಸಿದೆ.

1860ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ದೇಶದ್ರೋಹ ಕಾನೂನನ್ನು ಸ್ವಾತಂತ್ರಾನಂತರದ ಸರಕಾರಗಳು ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯಗಳನ್ನು ದಮನಿಸಲು ಬಳಸುತ್ತಿವೆ.

ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಆರಂಭದಲ್ಲಿ ಉತ್ಸಾಹಭರಿತ ಪ್ರತಿಕ್ರಿಯೆ ದೊರಕಿದ್ದರೂ ಎಲ್ಲರೂ ನಿರೀಕ್ಷಿಸಿರುವ ದೂರಗಾಮಿ ಪರಿಣಾಮವನ್ನು ಅದು ಹೊಂದಿಲ್ಲದಿರಬಹುದು ಎಂದು ಬೆಟ್ಟು ಮಾಡಿರುವ ತಜ್ಞರು ಅದರ ಬಗ್ಗೆ ಎಚ್ಚರಿಕೆಯ ಸಂಕೇತಗಳನ್ನು ನೀಡಿದ್ದಾರೆ.

ತಪ್ಪಿದ ಅವಕಾಶ
'ಆರ್ಟಿಕಲ್ 14' ಜಾಲತಾಣದಲ್ಲಿಯ ತನ್ನ ಲೇಖನದಲ್ಲಿ ಎಲ್.ರಂಗರಾಜನ್ ಅವರು ಸರ್ವೋಚ್ಚ ನ್ಯಾಯಾಲಯವು ದೇಶದ್ರೋಹ ಕಾನೂನಿನ ನಿಬಂಧನೆಗಳ ಪುನರ್ಪರಿಶೀಲನೆಯನ್ನು ಸರಕಾರಕ್ಕೇ ಬಿಟ್ಟಿದೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದರಡಿ ಎಫ್ಐಆರ್ ಗಳನ್ನು ದಾಖಲಿಸುವುದರಿಂದ ದೂರವಿರುತ್ತವೆ ಎಂಬ ಆಶಯವನ್ನು ವ್ಯಕ್ತಪಡಿಸಿದೆ, ತನ್ಮೂಲಕ ಕಾನೂನಿನ ವ್ಯಾಪಕ ದುರುಪಯೋಗವನ್ನು ಗಂಭೀರವಾಗಿ ಪುನರ್ಪರಿಶೀಲಿಸುವ ಅವಕಾಶವನ್ನು ಕಳೆದುಕೊಂಡಿದೆ ಎಂದು ಬೆಟ್ಟು ಮಾಡಿದ್ದಾರೆ. ಅಲ್ಲದೆ ಹೊಸ ಪ್ರಕರಣಗಳನ್ನು ದಾಖಲಿಸುವ ಕುರಿತು ನ್ಯಾಯಾಲಯವು ಸ್ಪಷ್ಟ ನಿರ್ದೇಶಗಳನ್ನು ನೀಡಿಲ್ಲ ಎಂದೂ ಅವರು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ಕಲಮ್ ನಂತಹ ನಿಬಂಧನೆಗಳನ್ನು ಸರ್ವೋಚ್ಚ ನ್ಯಾಯಾಲಯವು ಸಂಪೂರ್ಣವಾಗಿ ರದ್ದುಗೊಳಿಸಿದ್ದರೂ ಅವುಗಳ ಬಳಕೆ ಮುಂದುವರಿದಿದೆ ಎನ್ನುವುದನ್ನು ಹಿಂದಿನ ಅನುಭವವು ತೋರಿಸಿದೆ ಎಂಬ ಆರ್ಟಿಕಲ್ 14ರ ಸಂಪಾದಕೀಯ ಮಂಡಳಿಯ ಸದಸ್ಯೆ ಅಪರ್ಣಾ ಚಂದ್ರ ಅವರ ಅಭಿಪ್ರಾಯವನ್ನೂ ರಂಗರಾಜನ್ ಉಲ್ಲೇಖಿಸಿದ್ದಾರೆ.

ಸುಲಭದ ಪರಿಹಾರ
ಕಾನೂನನ್ನು ಸ್ಥಗಿತಗೊಳಿಸಿರುವಾಗ ಹೊಸ ಪ್ರಕರಣಗಳನ್ನು ದಾಖಲಿಸಬಹುದೇ ಎನ್ನುವುದರ ಕುರಿತು ಆದೇಶದಲ್ಲಿಯ ಅಂಶಗಳನ್ನು ಮನು ಸೆಬಾಸ್ಟಿಯನ್ ಅವರು ‘ಲೈವ್ ಲಾ’ದಲ್ಲಿ ಬಿಚ್ಚಿಟ್ಟಿದ್ದಾರೆ.

ದೇಶದ್ರೋಹಕ್ಕಾಗಿ ಯಾವುದೇ ಪ್ರಕರಣ ದಾಖಲಾದರೆ ಆರೋಪಿಯು ಜಾಮೀನು ಅಥವಾ ತನ್ನ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸುವ ಅರ್ಜಿಗಳನ್ನು ನ್ಯಾಯಾಲಯಗಳು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಮತ್ತು ಈ ಕಾನೂನು ವಸಾಹತುಶಾಹಿ ಯುಗದ್ದಾಗಿದೆ ಮತ್ತು ಪುನರ್ಪರಿಶೀಲನೆಯ ಅಗತ್ಯವಿದೆ ಎಂಬ ಭಾರತ ಸರಕಾರದ ಸ್ಪಷ್ಟ ನಿಲುವನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿಸಬೇಕು ಎನ್ನುವುದು ಸುಪ್ರೀಂ ಕೋರ್ಟ್ ನಿರ್ದೇಶನಗಳ ಸಾರಾಂಶವಾಗಿದೆ ಎಂದು ಹೇಳಿರುವ ಸೆಬಾಸ್ಟಿಯನ್,ಈ ಆದೇಶದ ಬಳಿಕವೂ ದೇಶದ್ರೋಹಕ್ಕಾಗಿ ಎಫ್ಐಆರ್ಗಳ ದಾಖಲಿಸುವಿಕೆ ತಾಂತ್ರಿಕವಾಗಿ ಸಾಧ್ಯವಿದ್ದರೂ,ಬಲವಂತದ ಕ್ರಮಗಳ ವಿರುದ್ಧ ಸುಲಭದ ಪರಿಹಾರವನ್ನು ಪಡೆಯಲು ಆರೋಪಿಗೆ ಸಾಧ್ಯವಾಗಬೇಕು ಎಂಬ ತನ್ನ ಉದ್ದೇಶವನ್ನು ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ. ಅಲ್ಲದೆ ಈ ಆದೇಶದ ಬಳಿಕ ಈ ನಿಬಂಧನೆಗೆ ಸಂಬಂಧಿಸಿದಂತೆ ಆರೋಪ ರೂಪಿಸುವಿಕೆ ಅಥವಾ ವಿಚಾರಣೆ ಅಥವಾ ಮೇಲ್ಮನವಿಯನ್ನು ಮುಂದುವರಿಸುವಂತಿಲ್ಲ.

ಇತರ ಕರಾಳ ಕಾನೂನುಗಳು
ತೀರ್ಪು ‘ಸಣ್ಣ ಗೆಲುವು’ ಆಗಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ನಲ್ಲಿಯ ತನ್ನ ಲೇಖನದಲ್ಲಿ ಬರೆದಿರುವ ಚಿತ್ರಾಂಶುಲ ಸಿನ್ಹಾ ಅವರು, ದೇಶದ್ರೋಹ ಕಾನೂನನ್ನು ಅನ್ವಯಿಸಲಾಗದಿದ್ದರೆ ಭಿನ್ನಾಭಿಪ್ರಾಯಗಳು ಮತ್ತು ಟೀಕಾಕಾರರನ್ನು ದಮನಿಸಲು ಸರಕಾರದ ಬಳಿ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಂತಹ ಇತರ ಕರಾಳ ಕಾನೂನುಗಳ ಅಸ್ತ್ರಗಳು ಇದ್ದೇ ಇರುತ್ತವೆ ಎಂದಿದ್ದಾರೆ.

ಅಲ್ಲದೆ,ಐಪಿಸಿಯ 124 ಎ ಕಲಮ್ನಲ್ಲಿಯ ಭಾಷೆಯು ಯುಎಪಿಎ ಅಡಿ ಕಾನೂನುಬಾಹಿರ ಚಟುವಟಿಕೆಗಳ ವ್ಯಾಖ್ಯೆಯಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ. 124 ಎ ಕಲಮ್ ಬದಲು ಸರಕಾರವು ಯುಎಪಿಎ ಅನ್ನು ಬಳಸಿದರೆ ಅದನ್ಯಾರೂ ತಡೆಯಲು ಸಾಧ್ಯವಿಲ್ಲ. ಯುಎಪಿಎ ಅಡಿ ಜಾಮೀನಿಗೆ ಸಂಬಂಧಿಸಿದ ನಿಬಂಧನೆಗಳು ಎಷ್ಟೊಂದು ಕಠಿಣವಾಗಿವೆ ಎಂದರೆ ಜಾಮೀನು ಪಡೆಯುವುದೇ ಹೆಚ್ಚುಕಡಿಮೆ ಅಸಾಧ್ಯವಾಗಿದೆ. ಜೊತೆಗೆ ಅದು ದೇಶದ್ರೋಹ ಅಪರಾಧವನ್ನು ಒಕ್ಕೂಟ ಅಪರಾಧದ ಮಟ್ಟಕ್ಕೆ ಹೆಚ್ಚಿಸುತ್ತದೆ ಹಾಗೂ ಇಂತಹ ಅಪರಾಧಗಳ ತನಿಖೆ ನಡೆಸುವ ಮತ್ತು ಕಾನೂನು ಕ್ರಮದ ಅಧಿಕಾರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ನೀಡುತ್ತದೆ ಎಂದೂ ಸಿನ್ಹಾ ಬೆಟ್ಟು ಮಾಡಿದ್ದಾರೆ.

ಕಾಶ್ಮೀರಿಗಳನ್ನು ಕೇಳಿ
ಭಾರತವು ‘ಅಭಿವ್ಯಕ್ತಿ ಸ್ವಾತಂತ್ರದ ಸುವರ್ಣ ಯುಗ’ವನ್ನು ಪ್ರವೇಶಿಸಲಿದೆ ಎಂದು ಈಗಲೇ ನಿರ್ಧರಿಸುವುದು ಅವಸರವಾಗುತ್ತದೆ ಎಂದು ಬಿಝಿನೆಸ್ ಸ್ಟಾಂಡರ್ಡ್ನಲ್ಲಿ ಬರೆದಿರುವ ಕನಿಕಾ ದತ್ತಾ ಅವರು, ಅಂತಹ ಸ್ವರ್ಗವನ್ನು ಸಾಧಿಸುವುದು ರಾಜಕೀಯ ವಾತಾವರಣ ಮತ್ತು ಕಾನೂನು ಜಾರಿ ಮತ್ತು ಕಾನೂನು ವ್ಯವಸ್ಥೆಗಳ ವಿಶ್ವಾಸಾರ್ಹತೆಯನ್ನು ಅವಲಂಬಿಸಿರುತ್ತದೆ. ಜನಪ್ರಿಯ ನಾಯಕರು ಬಹಿಷ್ಕಾರ ಸಿದ್ಧಾಂತ ಅಥವಾ ಸಹಿಸ್ಣುತೆಯ ಅನುಪಸ್ಥಿತಿ ಅಥವಾ ಇವೆರಡರ ಆಧಾರದಲ್ಲಿ ತಮ್ಮ ಜನಪ್ರಿಯತೆಯನ್ನು ರೂಪಿಸಿಕೊಂಡಾಗ ಹಿಂಬಾಲಕರೂ ಅದೇ ಪ್ರವೃತ್ತಿಯನ್ನು ಅನುಸರಿಸುತ್ತಾರೆ. ಟೀಕೆಗಳನ್ನು ಸಹಿಸದ ಕೇಂದ್ರ ಮತ್ತು ರಾಜ್ಯಗಳಲ್ಲಿಯ ಯಾವುದೇ ಆಡಳಿತ ಮತ್ತು ಅದರ ಸ್ವತಂತ್ರ ಪೋಷಕರು ಭಿನ್ನಾಭಿಪ್ರಾಯಗಳ ಧ್ವನಿಯನ್ನಡಗಿಸಲು ದೇಶದ್ರೋಹ ಕಾನೂನಿಗಿಂತ ಕಡಿಮೆ ಕರಾಳವಲ್ಲದ ಹಲವಾರು ಕಾನೂನುಗಳನ್ನು ತರಬಹುದು. 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಹೇಬಿಯಸ್ ಕಾರ್ಪಸ್ ಸೌಲಭ್ಯವೂ ಇಲ್ಲದೆ ಬಂಧನದಲ್ಲಿರುವ ಸಾವಿರಾರು ಕಾಶ್ಮೀರಿಗಳನ್ನು ಕೇಳಿ ಎಂದು ಹೇಳಿದ್ದಾರೆ.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News