×
Ad

ಮಂಗಳೂರು; ಪೊಲೀಸರ ಹೆಸರು ಹೇಳಿ ಹಣ ಸುಲಿಗೆ ಆರೋಪ: ಗ್ರಾಪಂ ಸದಸ್ಯನ ಸೆರೆ

Update: 2022-05-13 20:40 IST
ಅಬ್ದುಲ್ ಖಾದರ್ ರಿಝ್ವಾನ್

ಮಂಗಳೂರು : ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರ ಆರೋಪಿಯ ಹೆಸರನ್ನು ತೆಗೆಸುತ್ತೇನೆ ಎಂದು ಹೇಳಿ 2.95 ಲ.ರೂ.ವನ್ನು ಸುಲಿಗೆ ಮಾಡಿದ ಆರೋಪದ ಮೇರೆಗೆ ಗ್ರಾಪಂ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪಾವೂರು ಗ್ರಾಮದ ಮಲಾರ್ ನಿವಾಸಿ ಅಬ್ದುಲ್ ಖಾದರ್ ರಿಝ್ವಾನ್ (28) ಎಂದು ಗುರುತಿಸಲಾಗಿದೆ. 

ಆರೋಪಿಯು ಪೊಲೀಸರಲ್ಲಿ ಪ್ರಭಾವ ಬೀರಿ ಮಾತುಕತೆ ನಡೆಸಿ ಪ್ರಕರಣದಿಂದ ಹೆಸರನ್ನು ತೆಗೆಸುತ್ತೇನೆ ಎಂದು ಹೇಳಿ 2.95 ಲ.ರೂ,ವನ್ನು ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2021ರ ಡಿಸೆಂಬರ್‌ನಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿನ ಆರೋಪಿಯು ತಲೆಮರೆಸಿಕೊಂಡಿದ್ದ. ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.  ಈ ವೇಳೆ ಆತನನ್ನು ಸಂಪರ್ಕಿಸಿದ ಇಬ್ಬರು ಪ್ರಕರಣದಲ್ಲಿ ಹೆಸರನ್ನು ತೆಗೆಯಲು ಪೊಲೀಸರಿಗೆ ಹಣ ನೀಡಿ ಅವರ ಜೊತೆ ಪ್ರಭಾವ ಬೀರಿ ಮಾತುಕತೆ ನಡೆಸಿ ಕೇಸಿನಿಂದ ಹೆಸರನ್ನು ತೆಗೆಯುತ್ತೇವೆ ಎಂದು ಹೇಳಿಕೊಂಡು 3 ಲ.ರೂ.ಗೆ ಬೇಡಿಕೆ ಇಟ್ಟಿದ್ದರು. ಹಾಗೇ ಹಂತ ಹಂತವಾಗಿ 2.95 ಲಕ್ಷ ರೂ. ಪಡೆದುಕೊಂಡಿದ್ದರು. ಹಣವನ್ನು ಪಡೆದ ಬಳಿಕವೂ ಆರೋಪಿಯನ್ನು ಪೊಲೀಸರು ಹುಡುಕಾಡುತ್ತಿದ್ದ ವಿಚಾರವನ್ನು ತಿಳಿದ ಆತ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಣ ಪಡೆದುಕೊಂಡ ವ್ಯಕ್ತಿಗಳಿಂದ ಹಣ ವಾಪಸ್ ನೀಡುವಂತೆ ತಿಳಿಸಿದಾಗ ಹಣದ ವಿಚಾರದಲ್ಲಿ ಕರೆ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಲ್ಲದೆ 30 ಸಾವಿರ ರೂ.ವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಹಾಗಾಗಿ ಹಣವನ್ನು ಸುಲಿಗೆ ಮಾಡಿದ ಆರೋಪಿಗಳ ವಿರುದ್ಧ ಹಣವನ್ನು ಕಳೆದುಕೊಂಡ ವ್ಯಕ್ತಿಯು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಅಬ್ದುಲ್ ಖಾದರ್ ರಿಝ್ವಾನ್‌ನನ್ನು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News