ಅಲ್ಪಸಂಖ್ಯಾತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ;ಪ್ರಧಾನಿ ಮೋದಿ ವಿರುದ್ಧ ಸೋನಿಯಾ ವಾಗ್ದಾಳಿ

Update: 2022-05-13 16:38 GMT

ಉದಯಪುರ(ರಾಜಸ್ಥಾನ),ಮೇ 13: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಶುಕ್ರವಾರ ಇಲ್ಲಿ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು,ದೇಶವನ್ನು ಶಾಶ್ವತವಾಗಿ ಧ್ರುವೀಕರಣದ ಸ್ಥಿತಿಯಲ್ಲಿರಿಸುವುದು,ಅಲ್ಪಸಂಖ್ಯಾತರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಮತ್ತು ರಾಜಕೀಯ ಎದುರಾಳಿಗಳಿಗೆ ಬೆದರಿಕೆಯನ್ನು ಒಡ್ಡುವುದು ಮೋದಿಯವರ ‘ಕನಿಷ್ಠ ಸರಕಾರ,ಗರಿಷ್ಠ ಆಡಳಿತ ’ನೀತಿಯ ಅರ್ಥವಾಗಿದೆ ಎನ್ನುವುದು ಸ್ಪಷ್ಟವಾಗಿದೆ ಮತ್ತು ಇದು ನೋವನ್ನುಂಟು ಮಾಡಿದೆ ಎಂದು ಹೇಳಿದರು. ‘ಮೋದಿಯವರ ಸಾಂತ್ವನ ಸ್ಪರ್ಶ ಅಗತ್ಯವಾಗಿರುವ ಈ ಸಮಯದಲ್ಲಿ ನಮ್ಮ ಮಾತುಗಾರ ಪ್ರಧಾನಿ ಮೌನವಾಗಿದ್ದಾರೆ ’ ಎಂದು ಕುಟುಕಿದರು.

ಶುಕ್ರವಾರ ಅಪರಾಹ್ನ ಇಲ್ಲಿ ಆರಂಭಗೊಂಡ ಕಾಂಗ್ರೆಸ್‌ನ ‘ಚಿಂತನ ಶಿಬಿರ ’ದಲ್ಲಿ ಮಾತನಾಡಿದ ಸೋನಿಯಾ,‘‘ಮೋದಿ ಮತ್ತು ಅವರ ಪಕ್ಷ ‘ಕನಿಷ್ಠ ಸರಕಾರ ಗರಿಷ್ಠ ಆಡಳಿತ’ದ ಕರೆಗಳನ್ನು ನೀಡುತ್ತಿರುತ್ತಾರೆ. ದೇಶವನ್ನು ಶಾಶ್ವತವಾಗಿ ಧ್ರುವೀಕರಣ ಸ್ಥಿತಿಯಲ್ಲಿರಿಸುವುದು,ಜನರು ನಿರಂತರವಾಗಿ ಭಯ ಮತ್ತು ಅಭದ್ರತೆಯ ಭಾವನೆಯೊಂದಿಗೆ ಬದುಕುವಂತೆ ಮಾಡುವುದು,ನಮ್ಮ ಸಮಾಜದ ಅವಿಭಾಜ್ಯ ಅಂಗ ಮತ್ತು ನಮ್ಮ ಗಣರಾಜ್ಯದ ಸಮಾನ ಪ್ರಜೆಗಳಾಗಿರುವ ಅಲ್ಪಸಂಖ್ಯಾತರನ್ನು ಬಲಿಪಶುಗಳನ್ನಾಗಿಸುವುದು ಮತ್ತು ಕ್ರೂರವಾಗಿ ನಡೆಸಿಕೊಳ್ಳುವುದು ಈ ನೀತಿಯ ಅರ್ಥವಾಗಿದೆ. ನಮ್ಮ ಸಮಾಜದ ಶತಮಾನಗಳಷ್ಟು ಹಳೆಯದಾದ ಬಹುತ್ವವನ್ನು ನಮ್ಮಲ್ಲಿ ಒಡಕನ್ನು ಸೃಷ್ಟಿಸಲು ಬಳಸುವುದು,ಕಾಳಜಿಯಿಂದ ಪೋಷಿಸಲಾಗಿರುವ ಏಕತೆ ಮತ್ತು ವೈವಿಧ್ಯತೆಯ ಪರಿಕಲ್ಪನೆಗಳನ್ನು ಬುಡಮೇಲುಗೊಳಿಸುವುದು, ರಾಜಕೀಯ ಎದುರಾಳಿಗಳಿಗೆ ಬೆದರಿಕೆ ಮತ್ತು ಭೀತಿಯನ್ನು ಒಡ್ಡುವದು,ಅವರ ಪ್ರತಿಷ್ಠೆಗೆ ಕಳಂಕ ತರುವುದು ಮತ್ತು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸಿನಿಮೀಯ ನೆಪಗಳನ್ನೊಡ್ಡಿ ಅವರನ್ನು ಜೈಲಿಗೆ ಕಳುಹಿಸುವುದು ಈ ನೀತಿಯ ಅರ್ಥವಾಗಿದೆ ’’ ಎಂದು ಕಿಡಿಕಾರಿದರು. ಮಹಾತ್ಮಾ ಗಾಂಧಿಯವರ ಹಂತಕರನ್ನು ವೈಭವೀಕರಿಸಲಾಗುತ್ತಿದೆ ಮತ್ತು ಜವಾಹರಲಾಲ ನೆಹರೂರಂತಹ ನಾಯಕರ ಸಾಧನೆಗಳನ್ನು ಇತಿಹಾಸದ ಪುಟಗಳಿಂದ ಅಳಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತಿದೆ. ವಿಭಜನಕಾರಿ ತಂತ್ರಗಳ ಬಳಕೆ, ಪ್ರಧಾನಿಯವರ ಸಾಂತ್ವನ ಸ್ಪರ್ಶದ ಅತ್ಯಂತ ಅಗತ್ಯವಿರುವಾಗ ಅವರುಮೌನವಾಗಿರುವುದು,ಸಮಾಜವನ್ನು ಒಡೆಯುವುದು ಮತ್ತು ಶತಮಾನಗಳಷ್ಟು ಹಳೆಯದಾದ ಸಮಾಜದ ಬಹುತ್ವ ಹಾಗೂ ಏಕತೆಯನ್ನು ದುರ್ಬಲಗೊಳಿಸುವುದು;ಇವೆಲ್ಲ ‘ಕನಿಷ್ಠ ಸರಕಾರ ಗರಿಷ್ಠ ಆಡಳಿತ ’ ಘೋಷಣೆಯ ಅರ್ಥಗಳಾಗಿವೆ ಎಂದರು.

ಮುಕ್ತ ಮನಸ್ಸಿನಿಂದ ಚರ್ಚಿಸುವಂತೆ ಮತ್ತು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವಂತೆ ಪಕ್ಷದ ನಾಯಕರನ್ನು ಆಗ್ರಹಿಸಿದ ಸೋನಿಯಾ,ಕಾಂಗ್ರೆಸ್ ಸಂಘಟನೆಯಲ್ಲಿ ಬದಲಾವಣೆಗಳು ಈಗಿನ ಅಗತ್ಯಗಳಾಗಿವೆ. ಈ ಶಿಬಿರವು ರಾಷ್ಟ್ರೀಯ ವಿಷಯಗಳ ಬಗ್ಗೆ ಚಿಂತನೆಯ ಜೊತೆಗೆ ಸಂಘಟನೆಯ ಬಗ್ಗೆ ಅರ್ಥಪೂರ್ಣ ಆತ್ಮಚಿಂತನೆಯ ಕುರಿತೂ ಆಗಿದೆ. ಆದರೆ ಪ್ರಬಲ ಪಕ್ಷದ ಮತ್ತು ಏಕತೆಯ ಸಂದೇಶ ದೇಶಕ್ಕೆ ರವಾನೆಯಾಗಬೇಕು ಎಂದರು.

‘ಸಂಘಟನೆಯು ನಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ಮಿಗಿಲಾಗಿದೆ ’ ಎಂದ ಅವರು,‘ಪಕ್ಷವು ನಮಗೆ ಬಹಳಷ್ಟನ್ನು ನೀಡಿದೆ ಮತ್ತು ಇದು ಅದಕ್ಕೆ ಮರಳಿ ನೀಡುವ ಸಮಯವಾಗಿದೆ ’ ಎಂದರು.ರಾಹುಲ್ ಗಾಂಧಿ,ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ 400ಕ್ಕೂ ಅಧಿಕ ಕಾಂಗ್ರೆಸ್ ನಾಯಕರು ಚಿಂತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News