ಯುಎಇ ಪ್ರಗತಿಗೆ ಅಸಾಧಾರಣ ಕೊಡುಗೆ ನೀಡಿದ್ದ ಶೇಖ್ ಖಲೀಫಾ ಬಿನ್ ಝಾಯೆದ್

Update: 2022-05-13 18:45 GMT

ಅಬುಧಾಬಿ, ಮೇ 13: ಶುಕ್ರವಾರ ನಿಧನರಾದ ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ಅಧ್ಯಕ್ಷ ಹಾಗೂ ಅಬುಧಾಬಿಯ ದೊರೆ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ (73 ವರ್ಷ) ಶೇಖ್ ಖಲೀಫಾ ಅವರು ಯುಎಇಯ 2ನೇ ಅಧ್ಯಕ್ಷ ಹಾಗೂ ಎಮಿರೇಟ್ಸ್ ಆಫ್ ಅಬುಧಾಬಿಯ 16ನೇ ದೊರೆಯಾಗಿದ್ದರು. ದಕ್ಷ ಹಾಗೂ ಸಮರ್ಥ ಆಡಳಿತಗಾರರಾಗಿ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಯುಎಇ ಸರ್ವಾಂಗೀಣ ಪ್ರಗತಿಗೆ ಅಸಾಧಾರಣ ಕೊಡುಗೆ ನೀಡಿದವರು.

ಈ ಹಿಂದಿನ ದೊರೆ ಶೇಖ್ ಝಾಯೆದ್ ಬಿನ್ ಸುಲ್ತಾನ್ ನಹ್ಯಾನ್‌ರ ಹಿರಿಯ ಪುತ್ರನಾಗಿರುವ ಖಲೀಫಾ ಅವರು 1948ರ ಸೆಪ್ಟಂಬರ್ 7ರಂದು ಅಲ್ ಅಯಿನ್‌ನ ಅಲ್ ಮುವೈಜಿ ಗ್ರಾಮದಲ್ಲಿ ಜನಿಸಿದ್ದರು. ಈ ಗ್ರಾಮವು ಬನಿ ಯಾಸ್ ಬುಡಕಟ್ಟು ಒಕ್ಕೂಟದ ಅಲ್ ಬು ಫಲಾಹ್ ಉಪವಿಭಾಗ ಮತ್ತು ಅಲ್ ನಹ್ಯಾನ್ ಆಡಳಿತ ಕುಟುಂಬದ ಪ್ರಭಾವದ ಕೇಂದ್ರವಾಗಿತ್ತು. ಅವರ ಪೂರ್ಣ ಹೆಸರು ಖಲೀಫಾ ಬಿನ್ ಝಾಯೆದ್ ಬಿನ್ ಸುಲ್ತಾನ್ ಬಿನ್ ಝಾಯೆದ್ ಬಿನ್ ಖಲೀಫಾ ಬಿನ್ ಶಖ್‌ಬೌಟ್ ಬಿನ್ ಥೆಯಬ್ ಬಿನ್ ಇಸ್ಸಾ ಬಿನ್ ನಹ್ಯಾನ್ ಬಿನ್ ಫಲಾಹ್ ಬಿನ್ ಯಾಸ್. ಅವರ ತಾಯಿ ಶೇಖಾ ಹೆಸಾ ಬಿಂತ್ ಮುಹಮ್ಮದ್ ಬಿನ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್. ಅಲ್ ಐನ್ ನಗರದಲ್ಲಿ ತಂದೆ ಸ್ಥಾಪಿಸಿದ್ದ ಪ್ರಪ್ರಥಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ತಂದೆಯಿಂದ ಪ್ರಭಾವಿತರಾಗಿದ್ದ ಶೇಖ್ ಖಲೀಫಾ ತನ್ನ ಬಾಲ್ಯಕಾಲವನ್ನು ಅಲ್ ಐನ್ ಮತ್ತು ಅಲ್ ಬುರೈಮಿಯಲ್ಲಿ ಕಳೆದರು. ಶೇಖ್ ಝಾಯೆದ್ ತನ್ನ ದೈನಂದಿನ ಚಟುವಟಿಕೆಯ ಸಂದರ್ಭ ಹಿರಿಯ ಪುತ್ರನನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರದೇಶಗಳ ಬುಡಕಟ್ಟು ಜೀವನವನ್ನು ಸುಧಾರಿಸುವ ಮತ್ತು ಸರಕಾರದ ಆಡಳಿತವನ್ನು ಸ್ಥಾಪಿಸುವ ಕಷ್ಟಕರ ಕಾರ್ಯದಲ್ಲಿ ತಂದೆಯೊಂದಿಗೆ ಜತೆಗಿದ್ದ ಶೇಖ್ ಖಲೀಫಾ ಜವಾಬ್ದಾರಿ, ನಂಬಿಕೆ, ನ್ಯಾಯ ಮತ್ತು ಹಕ್ಕುಗಳ ಅಗತ್ಯ ಮೌಲ್ಯಗಳನ್ನು ಕಲಿತುಕೊಂಡರು. ಅಂದಿನ ದಿನದಲ್ಲಿ ರಾಜಕೀಯ ನಾಯಕತ್ವದ ಕೌಶಲ್ಯಗಳನ್ನು ಕಲಿಸುವ ಅತ್ಯುತ್ತಮ ಶಾಲೆಗಳೆಂದು ಪರಿಗಣಿಸಲ್ಪಟ್ಟಿದ್ದ ಸಾರ್ವಜನಿಕ ಮಜ್ಲಿಸ್‌ನ ಶಿಕ್ಷಣ ಪಡೆಯುವ ಅವಕಾಶ ಅವರಿಗೆ ಲಭಿಸಿತು. ಮಜ್ಲಿಸ್ ಮೂಲಕ ಬುಡಕಟ್ಟು ಸಮುದಾಯದ ಸಂಸ್ಕತಿ ಕಲಿಯಲು, ಅವರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಣೆ ಹಾಗೂ ಸಂವಹನ ಕೌಶಲ್ಯಗಳನ್ನು ಗಳಿಸಿಕೊಳ್ಳಲು ನೆರವಾಯಿತು. ಮಜ್ಲಿಸ್ ಶಿಕ್ಷಣ ಮತ್ತು ಭೇಟಿಯ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದವರ ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ, ಅವರ ಭದ್ರತೆ ಮತ್ತು ಏಕತೆಯನ್ನು ಉಳಿಸಿಕೊಳ್ಳಲು, ಪರಿಸರ ಮತ್ತು ಜನರ ಪರಂಪರೆಯನ್ನು ಕಾಪಾಡಲು ತನ್ನ ತಂದೆ ನಿರ್ವಹಿಸಿದ್ದ ಸಮರ್ಪಣಾ ಕಾರ್ಯವನ್ನು ಕಣ್ಣಾರೆ ಕಂಡರು. ಓರ್ವ ಸಹಜ ನಾಯಕ ತನ್ನ ಜನತೆಯ ಯೋಗಕ್ಷೇಮದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾನೆ ಎಂಬುದನ್ನು ಕಲಿತುಕೊಂಡರು. ಶೇಖಾ ಶಮ್ಸಾ ತ್ ಸುಹೈಲ್ ಅಲ್ ಮರೆಝ್ರಿವಿಯನ್ನು ವಿವಾಹವಾಗಿದ್ದು ಇವರಿಗೆ 8 ಮಕ್ಕಳಿದ್ದಾರೆ(ಇಬ್ಬರು ಪುತ್ರರು, 6 ಪುತ್ರಿಯರು). ನವೆಂಬರ್ 2, 2004ರಂದು ತಂದೆ ನಿಧನರಾದ ಬಳಿಕ ಶೇಖ್ ಖಲೀಫಾ ಅಬುದಾಭಿಯ ದೊರೆಯಾಗಿ ಅಧಿಕಾರ ವಹಿಸಿಕೊಂಡರು.

ಯುಎಇ: 40 ದಿನಗಳ ಶೋಕಾಚರಣೆ; ಮೂರು ದಿನಗಳ ಕಾಲ ಸರಕಾರಿ ಕಚೇರಿಗಳು ಬಂದ್

ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲಿ ನಹ್ಯಾನ್ ಅವರ ನಿಧನದ ಹಿನ್ನೆಲೆಯಲ್ಲಿ ಮೇ 13 ಶುಕ್ರವಾರದಿಂದ ಮೊದಲ್ಗೊಂಡು ದೇಶಾದ್ಯಂತ 40 ದಿನಗಳ ಶೋಕಾಚರಣೆಯನ್ನು ಯುಎಇನ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ಘೋಷಿಸಿದೆ.

  ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ನಿಧನದ ಹಿನ್ನೆಲೆಯಲ್ಲಿ ಎಲ್ಲಾ ಕೇಂದ್ರೀಯ ಹಾಗೂ ಸ್ಥಳೀಯ ಸರಕಾರಿ ಇಲಾಖೆಗಳು ಮತ್ತು ಖಾಸಗಿ ಸಂಸ್ಥೆಗಳು ಶನಿವಾರದಿಂದ ಮೊದಲ್ಗೊಂಡು ಮೂರು ದಿನಗಳವರೆಗೆ ಕಾರ್ಯಾಚರಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News