1857ರ ಬಂಡಾಯದ ಎಲೆಮರೆಯ ಹೀರೊ ಮೌಲವಿ ಲಿಯಾಕತ್ ಅಲಿ

Update: 2022-05-14 05:35 GMT

ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ ಹೆಚ್ಚಿನವರು ಹೊರಜಗತ್ತಿನ ಗಮನಕ್ಕೆ ಬಂದಿಲ್ಲ. ಅಂಥವರ ಪೈಕಿ ಒಬ್ಬರು ಉತ್ತರಪ್ರದೇಶದ ಅಲಹಾಬಾದ್‌ನ ಮೌಲವಿ ಲಿಯಾಕತ್ ಅಲಿ.ಬಂಡಾಯದ ವೇಳೆ, ಮೌಲವಿ ಲಿಯಾಕತ್ ಅಲಿ ಅಲಹಾಬಾದ್‌ನಲ್ಲಿ ಬಂಡಾಯದ ನೇತೃತ್ವವನ್ನು ವಹಿಸಿದರು ಹಾಗೂ 1857 ಜೂನ್ 6ರಿಂದ 1857 ಜೂನ್ 16ರವರೆಗೆ ಬ್ರಿಟಿಷ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

1857ರಲ್ಲಿ ಆರಂಭಗೊಂಡ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಂಗಲ್ ಪಾಂಡೆ, ನಾನಾ ಸಾಹೇಬ್, ತಾತ್ಯಾ ಟೋಪೆ, ರಾಣಿ ಲಕ್ಷ್ಮೀಬಾಯಿ ಮತ್ತು ವೀರ ಕುನ್ವರ್ ಸಿಂಗ್ ಮುಂತಾದವರು ಪ್ರಸಿದ್ಧಿಗೆ ಬಂದರು.

ಆದರೆ, ಆ ಬೃಹತ್ ಸಂಗ್ರಾಮದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ ಹೆಚ್ಚಿನವರು ಹೊರಜಗತ್ತಿನ ಗಮನಕ್ಕೆ ಬಂದಿಲ್ಲ. ಅಂಥವರ ಪೈಕಿ ಒಬ್ಬರು ಉತ್ತರಪ್ರದೇಶದ ಅಲಹಾಬಾದ್‌ನ ಮೌಲವಿ ಲಿಯಾಕತ್ ಅಲಿ.

ಬಂಡಾಯದ ವೇಳೆ, ಮೌಲವಿ ಲಿಯಾಕತ್ ಅಲಿ ಅಲಹಾಬಾದ್‌ನಲ್ಲಿ ಬಂಡಾಯದ ನೇತೃತ್ವವನ್ನು ವಹಿಸಿದರು ಹಾಗೂ 1857 ಜೂನ್ 6ರಿಂದ 1857 ಜೂನ್ 16ರವರೆಗೆ ಬ್ರಿಟಿಷ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ಅಲಿ ಅಲಹಾಬಾದ್‌ನ ಚಾಲಿ ಪರ್ಗಾನದ ಮಹಗಾಂವ್ ಎಂಬ ಗ್ರಾಮದಲ್ಲಿ ರೈತ ಕುಟುಂಬವೊಂದರಲ್ಲಿ ಅಂದಾಜು 1823ರಲ್ಲಿ ಜನಿಸಿದರು.

ಅವರ ತಂದೆಯ ಹೆಸರು ಶೇಖ್ ಮೆಹರ್. ಅವರ ಚಿಕ್ಕಪ್ಪದಯಮ್ ಅಲಿ ಝಾನ್ಸಿಯಲ್ಲಿರುವ ಕಂಪೆನಿ ಬಹಾದುರ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಸ್ವಲ್ಪಸಮಯ ಅಲಿ ಕೂಡ ತನ್ನ ಚಿಕ್ಕಪ್ಪನೊಂದಿಗೆ ಕಂಪೆನಿ ಬಹಾದುರ್‌ನಲ್ಲಿ ಕೆಲಸ ಮಾಡಿದರು. ಆದರೆ, ಅವರು ಬ್ರಿಟಿಷ್ ಅಧಿಕಾರಿಗಳು ಸ್ಥಳೀಯ ಸೈನಿಕರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಪ್ರತಿಭಟಿಸಿದರು. ಹಾಗಾಗಿ, ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು.

ಮೌಲವಿ ಲಿಯಾಕತ್ ಅಲಿ ಶ್ರೇಷ್ಠ ಇಸ್ಲಾಮಿಕ್ ವಿದ್ವಾಂಸರೂ ಆಗಿದ್ದರು. ಅವರ ಊರಿನಲ್ಲಿ ಅವರಿಗೆ ಭಾರೀ ಗೌರವವಿತ್ತು. ಅವರು ಟೋಂಕ್‌ನಲ್ಲಿ ಸೈಯದ್ ಅಹ್ಮದ್ ಶಹೀದಿ ಎಂಬವರನ್ನು ಭೇಟಿಯಾದರು. ಶಹೀದಿ ಆಗಲೇ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ನಡೆಸುತ್ತಿದ್ದರು. ಇದು ಬಹುಷಃ ಅವರನ್ನು ಸಶಸ್ತ್ರ ಸಂಘರ್ಷದತ್ತ ಸೆಳೆಯಿತು.

ಅವರು ತನ್ನ ಗ್ರಾಮದಲ್ಲಿ ಮದ್ರಸವೊಂದನ್ನು ಸ್ಥಾಪಿಸಿ ಮಕ್ಕಳಿಗೆ ಕಲಿಸಿದರು.

ಅಲಹಾಬಾದ್ ಕದನ

ಮೇ 10ರಂದು ಮೀರತ್‌ನಲ್ಲಿ ಬಂಡಾಯ ನಡೆದ ಸುದ್ದಿ ಮತ್ತು ಮೇ 12ರಂದು ಬಂಡುಕೋರ ಸೇನೆಯು ದಿಲ್ಲಿಯನ್ನು ವಶಪಡಿಸಿಕೊಂಡ ಸುದ್ದಿ ಹರಡುತ್ತಿದ್ದಂತೆಯೇ, ಬ್ರಿಟಿಷ್ ಸೇನೆಯು ಅಲಹಾಬಾದ್‌ನಲ್ಲೂ ಎಚ್ಚರ ಘೋಷಿಸಿತು. ಅಲ್ಲಿಗೆ ಸೈನಿಕರನ್ನು ಕಳುಹಿಸಿತು.

ಈ ನಡುವೆ ಮೌಲವಿ ಲಿಯಾಕತ್ ಅಲಿ ಸಾಮಾನ್ಯ ಜನರನ್ನು ಯುದ್ಧಕ್ಕಾಗಿ ಸಿದ್ಧಗೊಳಿಸುತ್ತಿದ್ದರು. ಅಲಹಾಬಾದ್‌ನ ಎಲ್ಲ ಜಮೀನುದಾರರು ಅವರಿಗೆ ಬೆಂಬಲ ನೀಡಿದರು.

ಜೂನ್ 5ರಂದು ಅಪಾಯವನ್ನು ಗ್ರಹಿಸಿದ ಬ್ರಿಟಿಷ್ ಸೇನೆಯು ಬ್ರಿಟಿಷ್ ನಾಗರಿಕರನ್ನು ಕೋಟೆಯ ಒಳಗೆ ಕರೆಯಿತು. ಆರನೇ ರೆಜಿಮೆಂಟ್‌ನ ಎರಡು ಕಂಪೆನಿಗಳು ಮತ್ತು ತರ್ಡ್ ಅವದ್‌ನಿಂದ 10 ಕಾಲಾಳುಗಳನ್ನು ಅಲ್ಲಿ ನಿಯೋಜಿಸಲಾಯಿತು.

ಜೂನ್ 5ರಂದು ಮೆವಾತಿಯ 8 ಮುಸ್ಲಿಮ್ ಗ್ರಾಮಗಳ ಸಭೆ ಶಮಾಬಾದ್‌ನ ಮೌಜದಲ್ಲಿರುವ ಸೈಫ್ ಖಾನ್‌ರ ಮನೆಯಲ್ಲಿ ನಡೆಯಿತು. ಸಭೆಯನ್ನು ಏರ್ಪಡಿಸಿದ ಸೈಫ್ ಖಾನ್‌ರನ್ನು ಹೊರತುಪಡಿಸಿ ಅವರೆಲ್ಲರೂ ಅದೇ ದಿನ ಹೋರಾಟದಲ್ಲಿ ಸೇರಿಕೊಂಡರು.

ಜೂನ್ 6ರ ರಾತ್ರಿ 9:20ಕ್ಕೆ ಗಂಗಾ ನದಿಯ ಸೇತುವೆಯನ್ನು ಕಾಯುವುದಕ್ಕಾಗಿ ದರಗಂಜ್‌ನಲ್ಲಿ ನಿಯೋಜಿಸಲ್ಪಟ್ಟಿದ್ದ ಭಾರತೀಯ ಸೈನಿಕರು ಬಂಡಾಯ ಎದ್ದರು. ಬಂಡುಕೋರ ಸೈನಿಕರು ಲೆಫ್ಟಿನೆಂಟ್ ಅಲೆಕ್ಸಾಂಡರ್‌ನನ್ನು ಕೊಂದರು. ಬೆಟಾಲಿಯನ್‌ನ ಅಧಿಕಾರಿ ಲೆಫ್ಟಿನೆಂಟ್ ಹಾರ್ವರ್ಡ್ ತಪ್ಪಿಸಿಕೊಂಡನು.

ರಾತ್ರಿ 10 ಗಂಟೆಯ ಹೊತ್ತಿಗೆ ಭಾರತೀಯ ಸೈನಿಕರು ನಗರದಲ್ಲಿದ್ದ ಎಲ್ಲ ಬ್ರಿಟಿಷರನ್ನು ಕೊಂದರು ಹಾಗೂ ಖಜಾನೆಯನ್ನು ದೋಚಿದರು. ಮಾರನೇ ದಿನ ಬೆಳಗ್ಗೆ 3,000 ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು.

ಜೂನ್ 7ರಂದು ಮೌಲವಿ ಲಿಯಾಕತ್ ಅಲಿ ಅಲಹಾಬಾದ್ ಸ್ವತಂತ್ರಗೊಂಡಿದೆ ಎಂಬುದಾಗಿ ಘೋಷಿಸಿದರು. ಅವರು ಐತಿಹಾಸಿಕ ಖುಸ್ರೊ ಬಾಗನ್ನು ತನ್ನ ಕೇಂದ್ರಸ್ಥಾನವನ್ನಾಗಿ ಮಾಡಿದರು. ಎರಡು ದಿನಗಳಿಂದ ನಡೆಯುತ್ತಿದ್ದ ಗಲಭೆಯನ್ನು ಶಮನಗೊಳಿಸುವುದಕ್ಕಾಗಿ ಮೌಲವಿ ಲಿಯಾಕತ್ ಅಲಿ ಸೈನಿಕರು ಮತ್ತು ಬಂಡುಕೋರರೊಂದಿಗೆ ನಗರದಲ್ಲಿ ಸುತ್ತಾಡಿದರು. ಅಲ್ಲಲ್ಲಿ ಅವರು ಭಾಷಣಗಳನ್ನು ಮಾಡಿದರು ಮತ್ತು ಕೊತ್ವಾಲಿ ನಗರದಲ್ಲಿ ರಾಜನ ಧ್ವಜವನ್ನು ಹಾರಿಸಿದರು.

ಜೂನ್ 8ರಂದು, ಮೌಲವಿ ಲಿಯಾಕತ್ ಅಲಿಯನ್ನು ಅಲಹಾಬಾದ್‌ನ ಗವರ್ನರ್ ಆಗಿ ನೇಮಿಸುವ ಆದೇಶಕ್ಕೆ ಬಹಾದುರ್ ಶಾ ಸಹಿ ಹಾಕಿದರು. ಅದೇ ದಿನ, ನಗರದ ವ್ಯವಹಾರಗಳನ್ನು ನಿಭಾಯಿಸುವುದಕ್ಕಾಗಿ ಸಮಿತಿಗಳು ಮತ್ತು ಅಧಿಕಾರಿಗಳನ್ನು ನೇಮಿಸಿದರು.

ಮೌಲವಿಗೆ ಎಲ್ಲ ಸಮುದಾಯಗಳ ಜನರ ಬೆಂಬಲವಿತ್ತು. ಆದರೆ, ಅಂದಿನ ದೊಡ್ಡ ರಾಜ್ಯಗಳಾದ ರಾಜಾ ಮಂಡ, ರಾಜಾ ದಹಿಯಬಾರ ಮತ್ತು ರಾಜಾ ಕರ್ಚಾನ ಬ್ರಿಟಿಷರ ಪರವಾಗಿ ನಿಂತರು.

ಆಂಗ್ಲೋ-ಇಂಡಿಯನ್ನರ ಮೇಲೆ ದಾಳಿ ನಡೆಸುವುದನ್ನು ಮತ್ತು ಅಂಗಡಿಗಳಿಂದ ಹಣ ಕೊಡದೆ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸುವುದು ಮುಂತಾದ ಹಲವು ಆದೇಶಗಳನ್ನು ಅವರು ಜಾರಿಗೆ ತಂದರು. ಅವುಗಳು ಅವರ ಮಾನವೀಯ ಮುಖವನ್ನು ತೋರಿಸುತ್ತವೆ.

ಜೂನ್ 10ರ ವೇಳೆಗೆ ಕೋಟೆಯನ್ನು ವಶಪಡಿಸಿಕೊಳ್ಳಲು ಮೌಲವಿ ಮತ್ತು ಅವರ ಸೈನಿಕರು ಪ್ರಯತ್ನಗಳನ್ನು ಆರಂಭಿಸಿದರು. ಮತ್ತೊಂದೆಡೆ, ಜೂನ್ 11ರಂದು ಕರ್ನಲ್ ನೀಲ್ ಗಂಗಾ ನದಿಯ ಇನ್ನೊಂದು ದಂಡೆಯ ಮೂಲಕ ಅಲಹಾಬಾದ್ ತಲುಪಿದನು. ಅವನೊಂದಿಗೆ ಬೃಹತ್ ಸೇನೆಯೂ ಬಂದಿತ್ತು.

ಕೋಟೆಯ ಒಳಗೆ ಇದ್ದ ಸಿಖ್ ರೆಜಿಮೆಂಟ್‌ನ 400 ಸೈನಿಕರ ಬೆಂಬಲವನ್ನು ಪಡೆಯುವ ನಿರೀಕ್ಷೆಯನ್ನು ಮೌಲವಿ ಹೊಂದಿದ್ದರು. ಆದರೆ, ಆ ಸೈನಿಕರು ಕೊನೆಯವರೆಗೂ ಬ್ರಿಟಿಷರಿಗೆ ನಿಷ್ಠರಾಗಿ ಉಳಿದರು.

ಜೂನ್ 15ರಂದು ಮೌಲವಿ ಸೇನೆ ಮತ್ತು ಬ್ರಿಟಿಷ್ ಸೇನೆಯ ನಡುವೆ ಕೋಟೆಯ ಹೊರಗೆ ಭೀಕರ ಕಾಳಗ ನಡೆಯಿತು. ಮೌಲವಿಯ ಬಳಿ ಹೆಚ್ಚು ಸೈನಿಕರಿದ್ದರು. ಆದರೆ ಅವರ ಶಸ್ತ್ರಗಳು ಹಳೆಯದು ಮತ್ತು ಸೈನಿಕರಿಗೆ ಸರಿಯಾಗಿ ತರಬೇತಿಯೂ ಸಿಕ್ಕಿರಲಿಲ್ಲ. ಹಾಗಾಗಿ, ಮೌಲವಿ ಹಿಂದೆ ಸರಿಯಬೇಕಾಯಿತು. ಅವರ ತುಂಬಾ ಸೈನಿಕರು ಯುದ್ಧದಲ್ಲಿ ಸಾವಿಗೀಡಾಗಿದ್ದರು ಅಥವಾ ಗಾಯಗೊಂಡಿದ್ದರು.

ಮೌಲವಿ ಖುಸ್ರೊ ಬಾಗ್‌ಗೆ ಹಿಂದಿರುಗಿದರು. ಜೂನ್ 16ರಂದು ಅಲ್ಲಿಗೆ ಕರ್ನಲ್ ನೀಲ್‌ನ ಸೇನೆ ಮುತ್ತಿಗೆ ಹಾಕಿತು. ಜೂನ್ 17ರಂದು ಮೌಲವಿ ತನ್ನ 3,000 ಜನರೊಂದಿಗೆ ಅಲ್ಲಿಂದ ತಪ್ಪಿಸಿಕೊಂಡು ಕಾನ್ಪುರಕ್ಕೆ ಹೋಗಿ ನಾನಾ ಸಾಹೇಬ್‌ರನ್ನು ಭೇಟಿಯಾದರು. ಜೂನ್ 18ರಂದು ಮೆವಾತಿ ಮುಸ್ಲಿಮರ 8 ಗ್ರಾಮಗಳನ್ನು ಸುಟ್ಟು ಹಾಕಲಾಯಿತು. ಯಾರಾದರೂ ತಪ್ಪಿಸಿಕೊಳ್ಳಲು ಯತ್ನಿಸಿದರೆ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಬಂಡಾಯದಲ್ಲಿ ಅಲಹಾಬಾದ್‌ನ ಸುಮಾರು 6,000 ಜನರು ಹತರಾದರು.

ಇಷ್ಟೆಲ್ಲಾ ಆದರೂ, ಮೌಲವಿ ತನ್ನ ಹೋರಾಟವನ್ನು ನಿಲ್ಲಿಸಲಿಲ್ಲ. 1858ರವರೆಗೂ ಗಂಗಾ ನದಿಯ ಇನ್ನೊಂದು ದಂಡೆಯಲ್ಲಿದ್ದ ಪ್ರದೇಶದ ಮೇಲೆ ಅವರು ನಿಯಂತ್ರಣವನ್ನು ಹೊಂದಿದ್ದರು. 1858ರಲ್ಲಿ ಮೇಜರ್ ಬರ್ಕಲೆ ವಿರುದ್ಧ ಮೌಲವಿ ತನ್ನ ಕೊನೆಯ ಯುದ್ಧವನ್ನು ಮಾಡಿದರು. ಅಲ್ಲಿಂದಲೂ ಅವರು ತಪ್ಪಿಸಿಕೊಂಡು ಹೋದರು.

ಬಂಡಾಯ ವಿಫಲವಾದ ಬಳಿಕ ಮೌಲವಿ ಗುಜರಾತ್‌ನ ಸೂರತ್ ಸಮೀಪದ ಲಾಜ್‌ಪುರ್‌ನಲ್ಲಿ ಭೂಗತರಾಗಿ ವಾಸಿಸಿದರು. ಬಳಿಕ ಮುಂಬೈಗೆ ಹೋದರು. ಅಲ್ಲಿ ಮಸೀದಿಯೊಂದರಲ್ಲಿ ಅವರು ಉಪನ್ಯಾಸ ನೀಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅವರನ್ನು ಗುರುತಿಸಿದರು ಹಾಗೂ ಬ್ರಿಟಿಷರಿಗೆ ಮಾಹಿತಿ ನೀಡಿದರು.

ಅವರನ್ನು 1871ರಲ್ಲಿ ಜುಲೈ 7ರಂದು ಬಂಧಿಸಲಾಯಿತು. ಅದನ್ನು ‘ನ್ಯೂಯಾರ್ಕ್ ಟೈಮ್ಸ್’, ‘ಟೈಮ್ಸ್ ಲಂಡನ್’ ಮತ್ತು ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಪತ್ರಿಕೆಗಳು ವರದಿ ಮಾಡಿದವು.

ಕಾನ್ಪುರ ಬಂಡಾಯದಲ್ಲಿ ಬದುಕುಳಿದಿದ್ದ ಏಕೈಕ ಇಂಗ್ಲಿಷ್ ಮಹಿಳೆ ಆ್ಯಮಿ ಹಾರ್ನಿ ಅಲಹಾಬಾದ್‌ಗೆ ಆಗಮಿಸಿ ಮೌಲವಿ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದರು. ಕಾನ್ಪುರ ಬಂಡಾಯ ನಡೆದಾಗ ಆಕೆಗೆ 17 ವರ್ಷ. ಮೌಲವಿ ತನ್ನನ್ನು ರಕ್ಷಿಸಿದ್ದು ಮಾತ್ರವಲ್ಲ, ತನ್ನ ಕುಟುಂಬಕ್ಕೆ ಸುರಕ್ಷಿತವಾಗಿ ಹಸ್ತಾಂತರಿಸಿದರು ಎಂಬುದಾಗಿ ಮಹಿಳೆ ಹೇಳಿದರು.

ಆಗ ನ್ಯಾಯಾಧೀಶ ಪೊಲಾಕ್, ಮೌಲವಿಯ ಮರಣ ದಂಡನೆಯನ್ನು ‘ಕಾಲಾಪಾನಿ’ ಶಿಕ್ಷೆಗೆ ಇಳಿಸಿದರು. ಅವರನ್ನು ಪೋರ್ಟ್‌ಬ್ಲೇರ್‌ಗೆ ಕರೆದೊಯ್ಯಲಾಯಿತು. ಅವರು 1892ರಲ್ಲಿ ನಿಧನರಾದರು.

ಕೃಪೆ:thewire.in

Writer - ಕೆ.ಕೆ. ಪಾಂಡೆ

contributor

Editor - ಕೆ.ಕೆ. ಪಾಂಡೆ

contributor

Similar News