ಚೆನ್ನೈಗೆ ಸೋಲುಣಿಸಿ ಅಂಕಪಟ್ಟಿಯ ಅಗ್ರ-2ರಲ್ಲಿ ಸ್ಥಾನ ಭದ್ರಪಡಿಸಿದ ಗುಜರಾತ್ ಟೈಟಾನ್ಸ್

Update: 2022-05-15 15:58 GMT
Photo: Twitter/sportslab

 ಮುಂಬೈ, ಮೇ 15: ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿ ಹಾಗೂ ವೃದ್ಧಿಮಾನ್ ಸಹಾ ಆಕರ್ಷಕ ಬ್ಯಾಟಿಂಗ್(ಔಟಾಗದೆ 67 ರನ್)ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರವಿವಾರ ನಡೆದ 62ನೇ ಐಪಿಎಲ್ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ.

ಋತುರಾಜ್ ಗಾಯಕ್ವಾಡ್(53 ರನ್, 49 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಕೊಡುಗೆಯ ಹೊರತಾಗಿಯೂ ಗುಜರಾತ್ ಬೌಲರ್‌ಗಳು ಚೆನ್ನೈ ತಂಡವನ್ನು 5 ವಿಕೆಟ್ ನಷ್ಟಕ್ಕೆ 133 ರನ್‌ಗೆ ನಿಯಂತ್ರಿಸಿದರು. ಔಟಾಗದೆ 67 ರನ್ (57 ಎಸೆತ, 8 ಬೌಂಡರಿ, 1 ಸಿಕ್ಸರ್)ಗಳಿಸಿದ ಸಹಾ ಗುಜರಾತ್ ತಂಡ 19.1ನೇ ಓವರ್‌ನಲ್ಲಿ 3 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಲು ನೆರವಾದರು.
 
9ನೇ ಸೋಲು ಕಂಡಿರುವ ಚೆನ್ನೈ ಈಗಾಗಲೇ ಪ್ಲೇ-ಆಫ್ ಸ್ಪರ್ಧೆಯಿಂದ ಹೊರಗುಳಿದಿದೆ. 5 ವಿಕೆಟ್ ಜಯ ಸಾಧಿಸಿರುವ ಗುಜರಾತ್ 13 ಪಂದ್ಯಗಳಲ್ಲಿ 10ನೇ ಗೆಲುವು ದಾಖಲಿಸಿ ತನ್ನ ಮೊದಲ ಐಪಿಎಲ್‌ನಲ್ಲಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನವನ್ನು ಖಚಿತಪಡಿಸಿದೆ.

ಸಹಾ ಮೊದಲಿಗೆ ಶುಭಮನ್ ಗಿಲ್(18 ರನ್, 17 ಎಸೆತ, 3 ಬೌಂಡರಿ) ಅವರೊಂದಿಗೆ 7.1 ಓವರ್‌ಗಳಲ್ಲಿ 59 ರನ್ ಗಳಿಸಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಚೆೆನ್ನೈ ಮಧ್ಯಮ ಓವರ್‌ಗಳಲ್ಲಿ 2 ವಿಕೆಟ್ ಪಡೆದು ತಿರುಗೇಟು ನೀಡಲು ಯತ್ನಿಸಿತು. 21 ರನ್ ಗಳಿಸಿದ್ದಾಗ ಋತುರಾಜ್‌ರಿಂದ ಜೀವದಾನ ಪಡೆದಿದ್ದ ಸಹಾ ಪವರ್-ಪ್ಲೇ ವೇಳೆ ಹರಿತವಿಲ್ಲದ ಚೆನ್ನೈ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು.
 
ಸಿಎಸ್‌ಕೆ ಪರ ಚೊಚ್ಚಲ ಪಂದ್ಯವನ್ನಾಡಿದ ಮಥೀಶ ಪಥಿರನ(2-24) ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ(7 ರನ್)ವಿಕೆಟ್ ಪಡೆದರು. ಡೇವಿಡ್ ಮಿಲ್ಲರ್(ಔಟಾಗದೆ 15,20 ಎಸೆತ)ಹಾಗೂ ಸಹಾ ಗೆಲುವಿನ ವಿಧಿವಿಧಾನ ಪೂರೈಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು ಇನಿಂಗ್ಸ್‌ನ 3ನೇ ಓವರ್‌ನಲ್ಲಿ ಡೆವೊನ್ ಕಾನ್ವೇ(5 ರನ್)ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಮುಹಮ್ಮದ್ ಶಮಿ(2-19)ಗುಜರಾತ್‌ಗೆ ಆರಂಭಿಕ ಮೇಲುಗೈ ಒದಗಿಸಿದರು.

ಮೊಯಿನ್ ಅಲಿ(21 ರನ್)ಅವರೊಂದಿಗೆ 2ನೇ ವಿಕೆಟ್‌ಗೆ 57 ರನ್ ಸೇರಿಸಿದ ಗಾಯಕ್ವಾಡ್(53 ರನ್)ನಾರಾಯಣ್ ಜಗದೀಶನ್ (ಔಟಾಗದೆ 39) ಜೊತೆಗೂಡಿ 3ನೇ ವಿಕೆಟ್‌ಗೆ 48 ರನ್ ಸೇರಿಸಿದರು. ಆದಾಗ್ಯೂ ಚೆನ್ನೈ ಮಧ್ಯಮ ಕ್ರಮಾಂಕದ ಕುಸಿತಕ್ಕೆ ಒಳಗಾಯಿತು. ಕೊನೆಯ 5 ಓವರ್‌ಗಳಲ್ಲಿ ಕೇವಲ 24 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News