ಮುಂದಿನ ಐದು ದಿನ ಕೇರಳದಲ್ಲಿ ಭಾರೀ ಮಳೆ: ಐಎಂಡಿ ಎಚ್ಚರಿಕೆ; 6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

Update: 2022-05-15 16:39 GMT

    ತಿರುವನಂತಪುರ,ಮೇ 15: ಅರಬ್ಬಿ ಸಮುದ್ರದಲ್ಲಿ ಪಶ್ಚಿಮಾಭಿಮುಖವಾಗಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಮುಂದಿನ ಐದು ದಿನಗಳ ಕಾಲ ಕೇರಳದಲ್ಲಿ ಭಾರೀ ಮಳೆಯಾಗಲಿದೆಯೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ರವಿವಾರ ಎಚ್ಚರಿಕೆ ನೀಡಿದೆ.

   ಭಾರೀ ಮಳೆ ಸಾಧ್ಯತೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಮೇ 15ರಂದು ಕೇರಳದ ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ರಾಜ್ಯ ಸರಕಾರವು ಈ ಎಲ್ಲಾ ಜಿಲ್ಲೆಗಳಲ್ಲಿ ಸೂಕ್ತ ಸಿದ್ಧತೆಗಳನ್ನು ಮಾಡಿದೆ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರು ಶನಿವಾರ ಸಂಜೆ ಎಲ್ಲಾ ಸಂಬಂಧಪಟ್ಟ ಇಲಾಖೆಗಳ ಸಭೆಯನ್ನು ಕರೆದಿದ್ದಾರೆ ಹಾಗೂ ಜಿಲ್ಲಾಧಿಕಾರಿಗಳು ಪೂರ್ವಸಿದ್ಧತೆಗಳನ್ನು ತೀವ್ರಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ.

  ನೆರೆಹಾವಳಿಗೆ ತುತ್ತಾಗುವ ಸಾಧ್ಯತೆಯಿರುವಂತಹ ಸ್ಥಳಗಳಲ್ಲಿ 24 ತಾಸು  ನಿಗಾವಣೆ ಕೊಠಡಿಯನ್ನು ಆರಂಭಿಸಲಾಗಿದೆ. ಅಗತ್ಯ ಬಿದ್ದಲ್ಲಿ ಭೂಕುಸಿತ ಹಾಗೂ ನೆರೆಹಾವಳಿಯ ಅಪಾಯವಿರುವ ಪ್ರದೇಶಗಳಲ್ಲಿ ವಾಸವಾಗಿರುವ ಜನರನ್ನು ಸ್ಥಳಾಂತರಿಸುವುದಕ್ಕಾಗಿ ಶಿಬಿರಗಳನ್ನು ಆರಂಭಿಸುವಂತೆ ನಿರ್ದೇಶನ ನೀಡಿದ್ದಾರೆ. ಆಹಾರ ಹಾಗೂ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಪೂರೈಕೆಯನ್ನು ಖಾತರಿಪಡಿಸಬೇಕೆಂದು ಅವರು ಸೂಚಿಸಿದ್ದಾರೆ.

 ನೆರೆನೀರು ನಿಲ್ಲುವ ಪ್ರದೇಶಗಳಲ್ಲಿ ನೀರನ್ನು ಹೊರಹಾಕಲು ಸೂಕ್ತ ಏರ್ಪಾಡು ಮಾಡಬೇಕೆಂದು ಅವರು ಸೂಚಿಸಿದ್ದಾರೆ. ಜನರು ಬೆಟ್ಟಪ್ರದೇಶಗಳಿಗೆ ಪ್ರಯಾಣಿಸದಂತೆ ಹಾಗೂ ಪ್ರವಾಸಿಗರೆಲ್ಲರೂ ಅವರು ತಂಗಿರುವ ಸ್ಥಳಗಳಲ್ಲಿ ಉಳಿದುಕೊಳ್ಳುವಂತೆ ಹಾಗೂ ಪ್ರಯಾಣವನ್ನು ಮುಂದುವರಿಸದಂತೆ ಸೂಚಿಸಿದ್ದಾರೆ.
 ‌
ನೈಋತ್ಯ ಮುಂಗಾರು ಮಾರುತವು ರವಿವಾರದಂದು ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯನ್ನು ಪ್ರವೇಶಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News