ಹತ್ಯೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ಕಾಶ್ಮೀರಿ ಪಂಡಿತರ ಮೇಲೆ ಬಲಪ್ರಯೋಗ ಪ್ರಕರಣ: ತನಿಖೆಗೆ ಲೆ. ಗವರ್ನರ್ ಆದೇಶ

Update: 2022-05-15 17:00 GMT

ಶ್ರೀನಗರ, ಮೇ 15: ರಾಹುಲ್ ಭಟ್ ಅವರ ಹತ್ಯೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಶ್ಮೀರಿ ಪಂಡಿತ್ ಸಮುದಾಯದ ಸರಕಾರಿ ಉದ್ಯೋಗಿಗಳ ವಿರುದ್ಧ ಬಲ ಪ್ರಯೋಗಿಸಿದ ಕುರಿತ ತನಿಖೆಗೆ ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ರವಿವಾರ ಆದೇಶಿಸಿದ್ದಾರೆ. ರಾಹುಲ್ ಭಟ್ ಅವರ ಹತ್ಯೆ ಹಾಗೂ ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಭದ್ರತೆ ಒದಗಿಸಲು ಆಡಳಿತ ವಿಫಲವಾಗಿರುವುದನ್ನು ವಿರೋಧಿಸಿ ಜಮ್ಮು ಹಾಗೂ ಕಾಶ್ಮೀರದ ಹಲವು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ‌

ಬುಡ್ಗಾಂವ್ ನ ಶೇಖ್ಪೋರಾದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ಅಡಗಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು ಹಾಗೂ ಅಶ್ರುವಾಯು ಸೆಲ್ ಗಳನ್ನು ಪ್ರಯೋಗಿಸಿದ್ದರು. ಭಟ್ ಅವರ ಹತ್ಯೆಯ ಕುರಿತು ತನಿಖೆಗೆ ಸರಕಾರ ಆದೇಶಿಸಿದೆ ಹಾಗೂ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರೂಪಿಸಲಾಗಿದೆ.

ಭಟ್ ಅವರದ್ದು ಯೋಜಿತ ಹತ್ಯೆ. ಭೀತಿಯ ವಾತಾವಾರಣ ಸೃಷ್ಟಿಸಲು ಈ ಹತ್ಯೆ ನಡೆಸಲಾಗಿದೆ. ಅವರು ತುಂಬಾ ಉತ್ತಮ ಉದ್ಯೋಗಿ. ಈ ಘಟನೆಯ ಕುರಿತು ನಾವು ಸಿಟ್ ರೂಪಿಸಿದ್ದೇವೆ. ಸಿಟ್ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲಿದೆ ಎಂದು ಸಿನ್ಹಾ ತಿಳಿಸಿದ್ದಾರೆ. ಪ್ರತಿಭಟನಕಾರರ ವಿರುದ್ಧ ಬಲ ಪ್ರಯೋಗಿಸಿರುವ ಬಗ್ಗೆ ಸಿಟ್ ತನಿಖೆ ಡೆಸಲಿದೆ ಎಂದು ಅವರು ತಿಳಿಸಿದ್ದಾರೆ.
 
‘‘ಬಲ ಪ್ರಯೋಗಿಸಿರುವ ಬಗ್ಗೆ ತನಿಖೆ ನಡೆಸಲಾಗುವುದು. ಒಂದು ವಾರ ಅವಧಿ ಒಳಗೆ ಸುರಕ್ಷಿತ ಸ್ಥಳದಲ್ಲಿ ಅವರನ್ನು (ಕಾಶ್ಮೀರಿ ಪಂಡಿತರು)ನಿಯೋಜಿಸಲಾಗುವುದು. ಅವರು ಕೆಲವು ಅಹವಾಲುಗಳನ್ನು ಹೊಂದಿದ್ದಾರೆ. ಅದನ್ನು ಪರಿಶೀಲಿಸಲಾಗುವುದು. ನಮಗೆ ಅವರ ನೋವು ಹಾಗೂ ಸಂಕಷ್ಟ ಅರ್ಥವಾಗುತ್ತದೆ. ಅವರು ಜೀವಿಸುವಲ್ಲಿ ಆಡಳಿತ ಪೂರ್ಣ ಪ್ರಮಾಣದ ಭದ್ರತೆ ಒದಗಿಸಲಿದೆೆ’’ ಎಂದು ಸಿನ್ಹಾ ಅವರು ಹೇಳಿದರು. ಬಲ ಪ್ರಯೋಗಿಸುವ ಅಗತ್ಯತೆ ಇಲ್ಲ ಎಂದು ನಾನು ಆಡಳಿತಕ್ಕೆ ನಿರ್ದೇಶಿಸಿದ್ದೇನೆ ಎಂದು ಸಿನ್ಹಾ ತಿಳಿಸಿದ್ದಾರೆ.

ಕಾಶ್ಮೀರ ಪಂಡಿತರಿಗೆ ವಿಶೇಷ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ 2010-11ರಲ್ಲಿ ಗುಮಾಸ್ತನ ಹುದ್ದೆ ಪಡೆದುಕೊಂಡಿರುವ ರಾಹುಲ್ ಭಟ್ ಅವರನ್ನು ಚಾದೂರ ಪಟ್ಟಣದಲ್ಲಿರುವ ತಾಲೂಕು ಕಚೇರಿಯ ಒಳಗೆ ಶಂಕಿತ ಉಗ್ರರು ಗುರುವಾರ ಗುಂಡು ಹಾರಿಸಿ ಹತ್ಯೆಗೈದಿದ್ದರು. ಸ್ಪಲ್ಪ ಕಾಲ ಶಾಂತಿ ಕಾಪಾಡುವಂತೆ ಅವರು ಕಾಶ್ಮೀರಿ ಪಂಡಿತ ಉದ್ಯೋಗಿಗಳಲ್ಲಿ ಸಿನ್ಹಾ ಮನವಿ ಮಾಡಿದ್ದಾರೆ. ಅಲ್ಲದೆ, ಕಾಶ್ಮೀರಿ ಪಂಡಿತರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಕೆಲವರು ಕಾಶ್ಮೀರದಲ್ಲಿ ಶಾಂತಿಗೆ ಅಡ್ಡಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸಿನ್ಹಾ ತಿಳಿಸಿದ್ದಾರೆ.
  
ನಾನು ರಾಜಕಾರಣಿಗಳು, ರಾಜಕೀಯ ಪಕ್ಷಗಳು ಹಾಗೂ ಸಾಮಾನ್ಯ ಜನರಲ್ಲಿ ಮನವಿ ಮಾಡುತ್ತೇನೆ. ಶಾಂತಿಯುತ ವಾತಾವರಣ ಉಳಿಯಲು ಇದು ಸಕಾಲ. ಕೆಲವು ಜನರು ಶಾಂತಿಯ ವಾತಾವರಣ ಕದಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಯಶಸ್ವಿಯಾಗದು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಈ ಹತ್ಯೆ ಪ್ರಕರಣದಲ್ಲಿ ಇಬ್ಬರು ವಿದೇಶಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಸಿನ್ಹಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News