×
Ad

ಜ್ಞಾನವಾಪಿ ಮಸೀದಿ: ಮುಂದುವರಿದ ವಿಡಿಯೋ ಚಿತ್ರೀಕರಿತ ಸಮೀಕ್ಷೆ

Update: 2022-05-15 22:34 IST
Photo: Twitter/@JatayuOSINT

    ವಾರಣಾಸಿ,ಮೇ 15: ನ್ಯಾಯಾಲಯದ ಆದೇಶದಂತೆ ಇಲ್ಲಿನ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಚಿತ್ರೀಕರಿತ ಸಮೀಕ್ಷೆಯನ್ನು ಸತತ ಎರಡನೆ ದಿನವಾದ ರವಿವಾರವೂ ಶಾಂತಿಯುತವಾಗಿ ನಡೆಸಲಾಯಿತು. ಈ ಪ್ರಕ್ರಿಯೆಯ ಶೇ.65ರಷ್ಟು ಭಾಗವು ಪೂರ್ತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

     ಮಸೀದಿ ಆವರಣದ ಒಳಗೆ ಚಿತ್ರೀಕರಣ ನಡೆಸಲು ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಡ್ವೋಕೇಟ್ ಕಮೀಶನರ್ ಅವರಿಗೆ ಅಧಿಕಾರವಿಲ್ಲವೆಂದು ಮಸೀದಿ ಸಮಿತಿಯ ಆಕ್ಷೇಪಗಳ ಹಿನ್ನೆಲೆಯಲ್ಲಿ ಕಳೆದ ವಾರ ಸಮೀಕ್ಷೆಯನ್ನು ಸ್ಥಗಿತಗೊಳಿಸಲಾಗಿತ್ತು.

      ಶನಿವಾರ ಆರಂಭಗೊಂಡ ಸಮೀಕ್ಷೆಯು ಸೋಮವಾರವೂ ಮುಂದುವರಿಯಲಿದೆಯೆಂದು ಮೂಲಗಳು ತಿಳಿಸಿವೆ. ಜ್ಞಾನವಾಪಿ ಮಸೀದಿಯು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲೇ ಇದೆ ಹಾಗೂ ಮಸೀದಿಯ ಹೊರ ಗೋಡೆಗಳ ಮೇಲಿರುವ ಪ್ರತಿಮೆಗಳಿಗೆ ಪೂಜೆಯನ್ನು ಸಲ್ಲಿಸಲು ಅನುಮತಿ ನೀಡಬೇಕೆಂದು ಕೋರಿ ಮಹಿಳೆಯರ ಗುಂಪೊಂದು ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಈ ಆದೇಶ ನೀಡಿದೆ. ಬಿಗುಭದ್ರತೆಯೊಂದಿಗೆ ನಡೆದ ಸಮೀಕ್ಷೆಯನ್ನು ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆವರೆಗೆ ನಡೆಸಲಾಯಿತು.

‘‘ ಇಂದು ಶೇ.65ರಷ್ಟು ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಸೋಮವಾರವೂ ಸಮೀಕ್ಷೆ ಮುಂದುವರಿಯಲಿದೆ. ಇದು ಸಂಪೂರ್ಣವಾಗಿ ಪುರಾತತ್ವ ಸಮೀಕ್ಷೆಯಾಗಿದೆ. ನ್ಯಾಯವಾದಿಗಳಿಗೆ ಈ ಸಮೀಕ್ಷಾ ಕಾರ್ಯವು ಹೆಚ್ಚು ಪರಿಚಿತವಾದುದಲ್ಲವಾದುದರಿಂದ, ಅವರಿಗೆ ಕೆಲಸ ಪೂರ್ತಿಯಾಗಲು ಹೆಚ್ಚು ಸಮಯ ಬೇಕಾಗುತ್ತದೆ’’ ಎಂದು ಹಿಂದೂ ಸಮುದಾಯದ ಪರ ನ್ಯಾಯವಾದಿಯೊಬ್ಬರು ಸರ್ವೇಕ್ಷಣಾ ಕಾರ್ಯವು ಶಾಂತಿಯುತವಾಗಿ ನಡೆಯಿತೆಂದು ಸಹಾಯಕ ಅಡ್ವೋಕೇಟ್ ಕಮೀಶನರ್ ವಿಶಾಲ್ ಸಿಂಗ್ ತಿಳಿಸಿದ್ದಾರೆ.

‘‘ ಸಮೀಕ್ಷಾ ಕಾರ್ಯಕ್ರಮಕ್ಕೆ ಯಾವುದೇ ಅಡಚಣೆ ಇಲ್ಲ. ಸಮೀಕ್ಷಾ ವರದಿಯು ಗೌಪ್ಯತೆಯಿಂದ ಕೂಡಿದ್ದು, ಅದನ್ನು ಬಹಿರಂಗಪಡಿಸಲಾಗದು’’ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News