ಭಾರತ, ನೇಪಾಳ ಬಾಂಧವ್ಯ ಹಿಮಾಲಯದಂತೆ ಅಚಲ: ಪ್ರಧಾನಿ ಮೋದಿ

Update: 2022-05-16 18:37 GMT

ಕಠ್ಮಂಡು, ಮೇ 16: ಭಾರತ ಮತ್ತು ನೇಪಾಳದ ನಡುವಿನ ಸ್ನೇಹ ಮತ್ತು ನಿಕಟತೆಯು ಇಡೀ ಮಾನವಕುಲಕ್ಕೆ ಸೇವೆ ಸಲ್ಲಿಸುತ್ತದೆ. ಉಭಯ ದೇಶಗಳ ಬಾಂಧವ್ಯ ಹಿಮಾಲಯದಂತೆ ಅಚಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
  ನೇಪಾಳದ ಪ್ರಧಾನಿ ಶೇರ್ ಬಹಾದುರ್ ದೆವುಬಾ ಅವರ ಆಹ್ವಾನದ ಮೇರೆಗೆ ನೇಪಾಳಕ್ಕೆ ಭೇಟಿ ನೀಡಿರುವ ಮೋದಿ , ಬೌದ್ಧ ಪೂರ್ಣಿಮೆ ಸಂದರ್ಭ ಲುಂಬಿನಿಯಲ್ಲಿ ನಡೆದ ಬೌದ್ಧ ಸಮ್ಮೇಳನದಲ್ಲಿ ಪಾಲ್ಗೊಂಡರು. ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು ಬುದ್ಧ ಮಾನವೀಯತೆಯ ಸಾಮೂಹಿಕ ತಿಳುವಳಿಕೆಯ ಸಾಕಾರ ಮೂರ್ತಿ ಎಂದರು.

 ಭಾರತ ಮತ್ತು ನೇಪಾಳದ ಮಧ್ಯೆ ಬಲಪಡಿಸುವ ಮತ್ತು ಬೆಳೆಯುತ್ತಿರುವ ಸ್ನೇಹ ಸಂಬಂಧವು ಪ್ರಸಕ್ತ ಜಾಗತಿಕ ಪರಿಸ್ಥಿತಿಯಲ್ಲಿ ಸಂಪೂರ್ಣ ಮನುಕುಲದ ಪ್ರಯೋಜನಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಭಗವಾನ್ ಬುದ್ಧನ ಮೇಲಿನ ಭಕ್ತಿಯು ನಮ್ಮನ್ನು ಒಟ್ಟಿಗೆ ಬಂಧಿಸುತ್ತದೆ ಮತ್ತು ನಮ್ಮನ್ನು ಒಂದೇ ಕುಟುಂಬದ ಸದಸ್ಯರನ್ನಾಗಿ ಮಾಡುತ್ತದೆ. ಭಗವಾನ್ ಬುದ್ಧ ಜನಿಸಿದ ಸ್ಥಳದ ಶಕ್ತಿಯು ವಿಭಿನ್ನ ಭಾವನೆಯನ್ನು ನೀಡುತ್ತದೆ. 2014ರಲ್ಲಿ ಈ ಪ್ರದೇಶಕ್ಕೆ ನಾನು ಉಡುಗೊರೆಯಾಗಿ ನೀಡಿದ್ದ ಮಹಾಬೋಧಿ ಗಿಡ ಇಂದು ವೃಕ್ಷವಾಗಿ ಬೆಳೆದಿರುವುದನ್ನು ಕಂಡು ಸಂತಸವಾಗಿದೆ ಎಂದು ಮೋದಿ ಹೇಳಿದರು.

 ಲುಂಬಿನಿಯಲ್ಲಿ ನಡೆದ 2566ನೇ ಬುದ್ಧ ಜಯಂತಿ ಆಚರಣೆಯಲ್ಲಿ ಮೋದಿ ಪಾಲ್ಗೊಂಡರು. ನೇಪಾಳದ ಪ್ರಧಾನಿ ಶೇರ್ ಬಹಾದುರ್ ದೆವುಬಾ, ಅವರ ಪತ್ನಿ ಅರ್ಝು ರಾಣಾ ದೆವುಬಾ, ನೇಪಾಳದ ಹಲವು ಸಚಿವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಮೋದಿ ಮಾಯಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಆವರಣದಲ್ಲಿರುವ ಭಗವಾನ್ ಬುದ್ಧರ ಜನ್ಮಸ್ಥಳದಲ್ಲಿ ಗೌರವ ಸಲ್ಲಿಸಿದರು ಮತ್ತು ದೇವಸ್ಥಾನದಲ್ಲಿ ಬೌದ್ಧ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು ಎಂದು ಭಾರತದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News