ಉಡುಪಿ: ಭಾರೀ ಮಳೆಗೆ ಮನೆ, ತೋಟಗಾರಿಕಾ ಬೆಳೆಗಳಿಗೆ ಅಪಾರ ಹಾನಿ

Update: 2022-05-17 15:25 GMT

ಉಡುಪಿ : ಸೋಮವಾರ ಸಂಜೆ ಭಾರೀ ಗಾಳಿಯೊಂದಿಗೆ ಸುರಿದ  ಧಾರಾಕಾರ ಮಳೆಗೆ ಉಡುಪಿ ಜಿಲ್ಲೆಯಾದ್ಯಂತ ೩೦ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ. ತೋಟಗಾರಿಕಾ ಬೆಳೆಗಳೂ ಅಪಾರ ಪ್ರಮಾಣದಲ್ಲಿ ನಷ್ಟಕ್ಕೊಳ ಗಾಗಿದೆ. ಇದರೊಂದಿಗೆ ಜಿಲ್ಲೆಯಾದ್ಯಂತ ಮೆಸ್ಕಾಂನ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸಾರ್ವಜನಿಕ ಸೊತ್ತುಗಳಿಗೂ ಹಾನಿಯಾಗಿವೆ. ಒಟ್ಟಾರೆಯಾಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಗೊಳಗಾಗಿವೆ.

ಕಾಪು ತಾಲೂಕಿನ ಕೋಟೆ ಗ್ರಾಮದ ಸುಬೋದ್ ಕುಮಾರ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ಗೋಡೆ ಹಾಗೂ ವಿದ್ಯುತ್ ವೈರಿಂಗ್‌ನೊಂದಿಗೆ ವಿದ್ಯುತ್ ಉಪಕರಣಗಳಿಗೆ ಭಾಗಶ: ಹಾನಿಯಾಗಿದೆ. ಇದರಿಂದ ೫೦ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಸಿಡಿಲು ಬಡಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಸರೋಜ ಎಂಬವರ ಎಡಗೈ ಬಲ ಇಲ್ಲದಂತಾಗಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ವೈದ್ಯಕೀಯ ವರದಿ ಪಡೆದುಕೊಳ್ಳುವಂತೆ ಕಾಪು ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ.

ಗಾಳಿ-ಮಳೆಯಿಂದಾಗಿ ಅತೀ ಹೆಚ್ಚಿನ ನಷ್ಟ ಉಂಟಾಗಿರುವುದು ಕುಂದಾಪುರ ತಾಲೂಕಿನಲ್ಲಿ. ತಾಲೂಕಿನ ಶಂಕರನಾರಾಯಣ ಹಾಗೂ ಕೊರ್ಗಿ ಗ್ರಾಮಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ವಿಶೇಷ ಹಾನಿಯಾಗಿದೆ. ಶಂಕರನಾರಾಯಣ ಗ್ರಾಮದ ಗಿರಿಜಮ್ಮ ಶೆಡ್ತಿ, ಆಶಾ, ಅಭಿಷೇಕ್, ಶರಾವತಿ ಹಾಗೂ ಕೊರ್ಗಿ ಗ್ರಾಮದ ಮೀನ ಬಳೆಗಾರ್ತಿ ಹಾಗೂ ಶಂಕರ ಶೆಟ್ಟಿ ಎಂಬವರ ತೋಟಗಾರಿಕಾ ಬೆಳೆಗಳು ನಾಶವಾಗಿದ್ದು ಇದರಿಂದ ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ ತಾಲೂಕಿನಲ್ಲಿ ೧೫, ಕಾರ್ಕಳ ತಾಲೂಕಿನಲ್ಲಿ ಮೂರು, ಉಡುಪಿ ತಾಲೂಕಿನ ಎರಡು ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ಮೂರು ಮನೆಗಳು ಗಾಳಿ-ಮಳೆಯಿಂದ ಹಾಗೂ ಮನೆಯ ಮೇಲೆ ಮರ ಬಿದ್ದು ಹಾನಿಗೊಂಡಿದ್ದು ಇದರಿಂದ ಏಳು ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ.

ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಶೀನ ನಾಯ್ಕ್ ಇವರ ವಾಸ್ತವ್ಯದ ಪಕ್ಕಾ ಮನೆಯ ಭಾರೀ ಗಾತ್ರದ ಮರ ಬಿದ್ದು ಸಂಪೂರ್ಣ ಹಾನಿಗೊಂಡಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಅಚ್ಲಾಡಿ ಗ್ರಾಮದ ಗೋಪಾಲ ಗಾಣಿಗರ ಮನೆ ಮೇಲೆ ಮರಬಿದ್ದು 40 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಉಡುಪಿ ತಾಲೂಕು ಆತ್ರಾಡಿ ಗ್ರಾಮದ ಮಹಾದೇವ ಕಾಮತ್‌ರ ಮನೆ ಮೇಲೆ ಮರಬಿದ್ದು ೫೦ಸಾವಿರ, ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ರಮೇಶ್ ಸಾಲ್ಯಾನ್ ಮತ್ತು ಗಿರಿಜಾ ಇವರ ವಾಸದ ಮನೆ ಮೇಲೆ ಮರಬಿದ್ದು ೫೦,೦೦೦ ರೂ.ನಷ್ಟವಾಗಿದೆ.

ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ಗುಲಾಬಿ ಆಚಾರ್ತಿ, ಕಂದಾವರ  ಗ್ರಾಮದ ನಾರಾಯಣ ದೇವಾಡಿಗ, ಬಾಬಿ ದೇವಾಡಿಗ, ಅಸೋಡು ಗ್ರಾಮದ ಗುಲಾಬಿ ಪೂಜಾರ್ತಿ, ಕಾವ್ರಾಡಿ ಗ್ರಾಮದ ಬಾಬಿ ಕುಲಾಲ್ತಿ ಮನೆಯ ಜಾನುವಾರು ಕೊಟ್ಟಿಗೆ, ಸಣ್ಣಮ್ಮ ಮೊಗೇರ್ತಿ ಇವರ ಜಾನುವಾರು ಕೊಟ್ಟಿಗೆ, ವಂಡ್ಸೆ ಗ್ರಾಮದ ಮೂಕಾಂಬು ಇವರ ಮನೆ, ಕುಳಂಜೆ ಗ್ರಾಮದ ಶ್ರೀಮತಿ ಪ್ರಭು, ಉಳ್ಳೂರು ಗ್ರಾಮದ ರತ್ನ ದೇವಾಡಿಗ, ಬುಡ್ಕು ದೇವಾಡಿಗ, ಹೆಸ್ಕತ್ತೂರು ಗ್ರಾಮದ ಹೇಮ ಮೊಗೇರ್ತಿ, ವಕ್ವಾಡಿ ಗ್ರಾಮದ ಕನಕ, ಹೆಸ್ಕತ್ತೂರು ಗ್ರಾಮದ ಸಾಧು ಪೂಜಾರ್ತಿ ಇವರ ವಾಸ್ತವ್ಯದ ಮನೆಗಳಿಗೆ ಭಾಗಶ: ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ.

ಜಿಲ್ಲೆಯಲ್ಲಿ ೪೪.೭ಮಿ.ಮೀ.ಮಳೆ: ಇಂದು ಬೆಳಗ್ಗೆ ೮:೩೦ರವರೆಗೆ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೪೪.೭ಮಿ.ಮೀ.ಮಳೆ ಬಿದ್ದ ಬಗ್ಗೆ ವರದಿಗಳು ಬಂದಿವೆ. ಕಾಪು ತಾಲೂಕಿನಲ್ಲಿ ಅತ್ಯಧಿಕ ೭೪.೯ಮಿ.ಮೀ. ಮಳೆಯಾದರೆ ಉಡುಪಿ ತಾಲೂಕಿನಲ್ಲಿ ೬೯.೫, ಕಾರ್ಕಳದಲ್ಲಿ ೬೨.೮ಮಿ.ಮೀ., ಹೆಬ್ರಿಯಲ್ಲಿ ೪೪.೨, ಬ್ರಹ್ಮಾವರದಲ್ಲಿ ೪೦.೫, ಬೈಂದೂರಿನಲ್ಲಿ ೩೬.೨ ಹಾಗೂ ಕುಂದಾಪುರದಲ್ಲಿ ೨೧.೬ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News