ಇ-ಕನ್ನಡ ಯೋಜನೆ ಲೋಕಾರ್ಪಣೆ | ಕನ್ನಡದಲ್ಲಿಯೇ ಟೆಂಪ್ಲೆಟ್ ಸಿದ್ಧಪಡಿಸಲು ಆದೇಶ: ಸಿಎಂ ಬಸವರಾಜ ಬೊಮ್ಮಾಯಿ

Update: 2022-05-17 15:46 GMT
ಇ-ಕನ್ನಡ ಯೋಜನೆ ಲೋಕಾರ್ಪಣೆಗೊಳಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು, ಮೇ 17: ಸರಕಾರಕ್ಕೆ ಸಂಬಂಧಿಸಿದ ತಂತ್ರಾಂಶಗಳಲ್ಲಿ ಟೆಂಪ್ಲೆಟ್‍ಗಳು ಕನ್ನಡ ಭಾಷೆಯಲ್ಲಿಯೇ ಇರಬೇಕೆಂದು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಮಂಗಳವಾರ ನಗರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಇ-ಕನ್ನಡ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ಸಮಗ್ರ ಕನ್ನಡ ಜನತೆಯನ್ನು ಒಳಗೊಂಡ ರೀತಿಯಲ್ಲಿ ಸಮಗ್ರ ಕನ್ನಡ ಭಾಷೆ ಅಭಿವೃದ್ಧಿ ವಿಧೇಯಕವಿರಬೇಕು. ಮುಂದಿನ ಪೀಳಿಗೆಗೆ ಅನುಕೂಲಕರವಾಗುವ ರೀತಿಯಲ್ಲಿ, ಕನ್ನಡ ಭಾಷೆಯ ಅಭಿವೃದ್ಧಿಯನ್ನು ಒಳಗೊಂಡಂತೆ ಎಲ್ಲ ಆಯಾಮಗಳಲ್ಲೂ ಕನ್ನಡ, ಕನ್ನಡಿಗ, ಕರ್ನಾಟಕ ಅಭ್ಯುದಯವಾಗುವಂತ ಅಂಶಗಳು ವಿಧೇಯಕದಲ್ಲಿರಬೇಕು. ಇದಕ್ಕೆ ನಮ್ಮ ಸರಕಾರ ಅಗತ್ಯ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದೊಂದಿಗೆ ಭಾಷೆಯ ಬೆಳವಣಿಗೆಯೂ ಆಗಬೇಕು. ತಂತ್ರಜ್ಞಾನ ಮತ್ತು ಭಾಷೆ ಜೊತೆಗೂಡಿ ಕಾರ್ಯ ನಿರ್ವಹಿಸಿದರೆ ಮಾತ್ರವೇ ಭಾಷೆ ಅಭಿವೃದ್ಧಿ ಸಾಧ್ಯವಾಗಲಿದೆ. ಹಿಂದೆ ಕನ್ನಡದಲ್ಲಿ ತಂತ್ರಜ್ಞಾನ ಮತ್ತು ತಂತ್ರಾಂಶಕ್ಕೆ ಸಂಬಂಧಿಸಿದ ಮಾಹಿತಿ ಲಭಿಸುತ್ತಿರುತ್ತಿರಲಿಲ್ಲ. ಈಗ ಕನ್ನಡದಲ್ಲಿಯೂ ಹಲವು ತಂತ್ರಾಂಶಗಳು ಲಭಿಸುತ್ತಿದೆ ಎಂದರು. 

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಾಭರಣ, ಮುಖ್ಯಮಂತ್ರಿಗಳ ಸಲಹೆಗಾರ(ಇ-ಆಡಳಿತ)ರಾದ ಬೇಳೂರು ಸುದರ್ಶನ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News