ಅರುಣಾಚಲ ಗಡಿಯಲ್ಲಿ ಚೀನಾದಿಂದ ಮೂಲಸೌಕರ್ಯ ಅಭಿವೃದ್ಧಿ: ಭಾರತೀಯ ಸೇನೆ

Update: 2022-05-17 16:41 GMT

ಹೊಸದಿಲ್ಲಿ, ಮೇ 17: ಅರುಣಾಚಲ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಚೀನಾ ಶಸಸ್ತ್ರ ಸೇನಾ ಪಡೆ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುತ್ತಿದೆ ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ. ‘‘ಇನ್ನೊಂದು ಬದಿ (ಚೀನಾ) ತಮ್ಮ ರಸ್ತೆ, ರೈಲು, ವಾಯು ಸಂಪರ್ಕ ಹಾಗೂ 5ಜಿ ಮೊಬೈಲ್ ನೆಟ್ವರ್ಕ್ ಅನ್ನು ನಿರಂತರ ಮೇಲ್ಜರ್ಜೀಕರಣಗೊಳಿಸುತ್ತಿದೆ.

ಆದುದರಿಂದ ಅವರು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಉತ್ತಮ ಸ್ಥಿತಿಯಲ್ಲಿದ್ದಾರೆ ಅಥವಾ ಸೇನಾ ಪಡೆಯನ್ನು ಸಜ್ಜುಗೊಳಿಸಿದ್ದಾರೆ’’ ಎಂದು ಪೂರ್ವ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಆರ್.ಪಿ. ಕಾಲಿಟಾ ಅವರು ಹೇಳಿದ್ದಾರೆ. ಅರುಣಾಚಲಪ್ರದೇಶದ ಸಮೀಪ ಚೀನಾ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲಲ್ಲ. ಅರುಣಾಚಲಪ್ರದೇಶದಲ್ಲಿ ಕನಿಷ್ಠ 60 ಕಟ್ಟಡಗಳ ಗುಂಪನ್ನು ಚೀನಾ ನಿರ್ಮಿಸಿರುವುದನ್ನು ನವೆಂಬರ್ನಲ್ಲಿ ಉಪಗ್ರಹ ಚಿತ್ರ ತೋರಿಸಿತ್ತು.

ಇನ್ನೊಂದು ಸೆಟ್ ಉಪಗ್ರಹ ಚಿತ್ರಗಳು, ಅರುಣಾಚಲಪ್ರದೇಶದ ಭಾರತೀಯ ಭೂಭಾಗದ ಸರಿಸುಮಾರು 4.5 ಕಿ.ಮೀ. ಒಳಗಡೆ ಚೀನಾ 101 ಮನೆಗಳನ್ನು ಒಳಗೊಂಡ ನೂತನ ಗ್ರಾಮವನ್ನು ರೂಪಿಸಿರುವುದನ್ನು ತೋರಿಸಿತ್ತು. ಅದು ಕಳೆದ ಒಂದು ವರ್ಷದಲ್ಲಿ ಗಡಿಯಲ್ಲಿ ಹಲವು ಕವಾಯತನ್ನು ಕೂಡ ನಡೆಸಿದೆ. ಅರುಣಾಚಲಪ್ರದೇಶ ದಕ್ಷಿಣ ಟಿಬೇಟ್ನ ಭಾಗವಾಗಿದೆ ಎಂದು ಚೀನಾ ಪ್ರತಿಪಾದಿಸುತ್ತಿದೆ. ಆದರೆ ಭಾರತ ಇದನ್ನು ನಿರಾಕರಿಸುತ್ತಿದೆ.

ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿರ್ವಹಿಸಲು ಭಾರತ ಕೂಡ ತನ್ನ ಮೂಲ ಸೌಕರ್ಯವನ್ನು ಮೇಲ್ದರ್ಜೀಕರಣಗೊಳಿಸುತ್ತಿದೆ ಎಂದು ಕಾಲಿಟಾ ಅವರು ಸೋಮವಾರ ತಿಳಿಸಿದ್ದಾರೆ. ‘‘ಪೂರ್ವ ಗಡಿಯಲ್ಲಿ ಹಲವು ಸವಾಲುಗಳಿವೆ’’ ಎಂದು ಹೇಳಿರುವ ಅವರು, ‘‘ನಾವು ಅನುಕರಣೀಯ ವೃತ್ತಿಪರತೆ ಹಾಗೂ ಶೌರ್ಯವನ್ನು ಪ್ರದರ್ಶಿಸಿದ್ದೇವೆ. ಕಳೆದ ವರ್ಷ ಅತ್ಯಂತ ಮಹತ್ವಪೂರ್ಣವಾಗಿತ್ತು. ನಾವು ಎಲ್ಲಾ ಸವಾಲುಗಳನ್ನು ಎದುರಿಸಿ ಗೆದ್ದಿದ್ದೇವೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News