ಅಮೇರಿಕಾದಲ್ಲಿ ಟ್ರಾಫಿಕ್ ಬ್ಯಾರಿಕೇಡ್ ಕಲ್ಲು 'ಶಿವಲಿಂಗ' ಆದ ಕತೆ.!

Update: 2022-05-17 17:48 GMT
Photo: SS/CNN

ವಾಷಿಂಗ್ಟನ್: ಶಿವನ ಆರಾಧಕರಲ್ಲಿ ʼಲಿಂಗʼಕ್ಕೆ ಅದರದ್ದೇ ಆದ ಮಹತ್ವವಿದೆ. ಸಾಮಾನ್ಯವಾಗಿ ಪೂಜಿಸಲ್ಪಡುವ ಲಿಂಗದ ಮೇಲ್ಭಾಗವು ದುಂಡಗಿನ ಅಥವಾ  ಅಂಡಾಕರದಲ್ಲಿರುತ್ತದೆ. ಇಂತಹದ್ದೇ ಆಕಾರದ ಕಲ್ಲೊಂದು ಅಮೆರಿಕಾದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಪತ್ತೆಯಾಗಿದ್ದು, ಅದನ್ನು ಅಲ್ಲಿ ಭಾರತೀಯ ಹಿಂದೂಗಳು ಶಿವನ ಲಿಂಗವೆಂದು ಕಲ್ಪಿಸಿ, ಪೂಜೆಯನ್ನೂ ಸಲ್ಲಿಸಿದ್ದರು, ನಂತರ ಅಲ್ಲಿನ ಅಧಿಕಾರಿಗಳು ಆ ಕಲ್ಲನ್ನು ಅಲ್ಲಿಂದ ತೆರವುಗೊಳಿಸಿದ್ದರು. ಇದು ನಡೆದದ್ದು 1990 ರ ದಶಕದಲ್ಲಿ. 

1993 ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ ನ ಸ್ಯಾನ್‌ಫ್ರಾನ್ಸಿಸ್ಕೋ ನಗರದ ʼಗೋಲ್ಡನ್‌ ಗೇಟ್‌ ಪಾರ್ಕ್‌ʼ ನಲ್ಲಿ ಶಿವಲಿಂಗವನ್ನು ಹೋಲುವ ಕಲ್ಲೊಂದು ಪತ್ತೆಯಾಗಿತ್ತು. ಅದರ ಆಕಾರವನ್ನು ಗಮನಿಸಿ ಅದು ಶಿವಲಿಂಗವೆಂದು ಭಾವಿಸಿದ ಅಮೇರಿಕನ್ ಹಿಂದೂ ಬಸುಲ್ ಪಾರಿಕ್‌ ಎಂಬವರು, ಅದಕ್ಕೆ ಪೂಜೆಯನ್ನು ಸಲ್ಲಿಸಲು ಆರಂಭಿಸಿದರು. 

ಬಳಿಕ, ಅಮೇರಿಕಾದಲ್ಲಿ ನೆಲೆಸಿದ್ದ ಹಲವು ಹಿಂದೂ ಸಮುದಾಯದ ಜನರು ಈ ಸ್ಥಳವನ್ನು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲು ಆರಂಭಿಸುತ್ತಾರೆ. ಸ್ಯಾನ್‌ಫ್ರಾನ್ಸಿಸ್ಕೋ ನಗರದ ಹಿಂದೂಗಳು ಮಾತ್ರವಲ್ಲದೆ, ದೂರದ ಊರುಗಳಿಂದ ಕೂಡಾ ಹಿಂದೂ ಸಮಾಜದ ಜನರು ಕಲ್ಲು ಪತ್ತೆಯಾದಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಲು ತೊಡಗುತ್ತಾರೆ. ಲಿಂಗವೆಂದು ನಂಬಲಾದ ಕಲ್ಲಿಗೆ ತುಪ್ಪ, ಹಾಲು, ಜೇನು, ಹೂವುಗಳನ್ನು ಅರ್ಪಿಸಿ ಪೂಜೆ ಮಾಡಲು ಪ್ರಾರಂಭಿಸಲಾಗುತ್ತದೆ . ಸೋಮವಾರ ವಿಶೇಷ ಪೂಜೆಯನ್ನೂ ಮಾಡಲಾಗುತ್ತಿತ್ತು, ಆ ದಿನದಂದು ಬರುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗತೊಡಗಿದವು.  

ಆದರೆ, ಹಿಂದೂ ಭಕ್ತಾದಿಗಳಿಂದ ನಿರಂತರ ಪೂಜೆಗೊಳಗಾದ ಈ ಕಲ್ಲು ಶಿವಲಿಂಗ ಆಗಿರಲಿಲ್ಲ, ಬದಲಾಗಿ ಟ್ರಾಫಿಕ್‌ ಬ್ಯಾರಿಕೇಡ್‌ ನ ಸಾಮಾನ್ಯ ಕಲ್ಲು ಆಗಿತ್ತು.  CNN ಮಾಡಿರುವ ವೀಡಿಯೋ ವರದಿ ಪ್ರಕಾರ, ಕಲ್ಲು ಪೂಜೆಗೊಳಗಾಗುವ ಹಲವು ವರ್ಷಗಳ ಹಿಂದೆ ʼಜಿಮ್‌ ವೊಫರ್ಡ್‌ʼ ಎಂಬ ಕ್ರೇನ್ ಆಪರೇಟರ್ ಒಬ್ಬರು ಅನಗತ್ಯವಾದ ಇತರೆ ಹಲವಾರು ಕಲ್ಲುಗಳೊಂದಿಗೆ ಪೂಜಿಸಲ್ಪಡುತ್ತಿರುವ ಕಲ್ಲನ್ನೂ ಉದ್ಯಾನವನದಲ್ಲಿ ಇಟ್ಟಿದ್ದರು. ಹೀಗೆ ಇಟ್ಟ ಕಲ್ಲನ್ನೇ ಹಿಂದೂಗಳು ʼಶಿವಲಿಂಗʼ ಎಂದು   ಪರಿಗಣಿಸಿ ಪೂಜೆ ಪ್ರಾರಂಭಿಸಿದರು.
 
ಭಕ್ತಾದಿಗಳು ಹೆಚ್ಚುತ್ತಿದ್ದಂತೆ ಅಲ್ಲಿ ದೇವಸ್ಥಾನವನ್ನು ಕಟ್ಟಬೇಕೆಂಬ ಭಾವನೆ ಭಕ್ತಾದಿಗಳಲ್ಲಿ ಮೂಡಿತ್ತು. ಅನೇಕ ಭಕ್ತರು ಈ ಸ್ಥಳವು ಉದ್ಯಾನವನದೊಳಗೆ ಶಾಶ್ವತ ದೇವಾಲಯವಾಗಬೇಕೆಂದು ಬಯಸಿದ್ದರು.  ಆದರೆ, ಸಾರ್ವಜನಿಕ ಉದ್ಯಾನವನದ ಆಸ್ತಿಯಲ್ಲಿ ದೇವಾಲಯ ನಿರ್ಮಾಣ ಆಗುವುದು ಸ್ಥಳೀಯ ಆಡಳಿತಕ್ಕೆ ಬೇಕಿರಲಿಲ್ಲ. ಮಾತ್ರವಲ್ಲ, ಸಾರ್ವಜನಿಕ ಉದ್ಯಾನವನದಲ್ಲಿ ಧಾರ್ಮಿಕ ಆಚರಣೆ ಅಷ್ಟು ಸಮಂಜಸವಲ್ಲವೆಂದು ನಂಬಿದ ಅಧಿಕಾರಿಗಳು ಆ ಕಲ್ಲನ್ನು ಅಲ್ಲಿಂದ ತೆರವುಗೊಳಿಸಿದರು.
 

ಭಕ್ತಾದಿಗಳ ಅನೇಕ ಪ್ರಯತ್ನಗಳ ಹೊರತಾಗಿಯೂ, ಪೂಜಾ ಸ್ಥಳವನ್ನು ಅಧಿಕಾರಿಗಳು ಉದ್ಯಾನವನದಿಂದ ತೆರವುಗೊಳಿಸಿದ್ದು, ಅದನ್ನು ಸನ್‌ಸೆಟ್ ಜಿಲ್ಲೆಯ ಕಲಾವಿದರ ಸಾಧಾರಣ ಸ್ಟುಡಿಯೊ ಒಂದಕ್ಕೆ ಸ್ಥಳಾಂತರಿಸಲಾಯಿತು.  ಮೈಕೆಲ್ ಬೋವೆನ್ ಅಥವಾ ಕಾಳಿ ದಾಸ್ ಎಂಬವರು ಸ್ಥಳಾಂತರದ ವಿರುದ್ಧ ಫೆಡರಲ್ ಮೊಕದ್ದಮೆಯನ್ನು ಕೂಡಾ ಹೂಡಿದ್ದರು. ಆದರೆ, ಕೊನೆಗೆ ಉದ್ಯಾನವನದಿಂದ ಆ ಕಲ್ಲನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಾಗಿರಲಿಲ್ಲ.

 ಅಂದು ನ್ಯೂಯಾರ್ಕ್‌ ಟೈಮ್ಸ್‌ ನಲ್ಲಿ ಪ್ರಕಟವಾದ ವರದಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News