ನಿಯಂತ್ರಣಕ್ಕೆ ಸಿಗದ ಬೆಲೆಗಳು

Update: 2022-05-18 04:42 GMT

ಬೆಲೆ ಏರಿಕೆಯು ಆಹಾರ ಧಾನ್ಯಗಳು ಮತ್ತು ಅಡುಗೆ ಎಣ್ಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ತರಕಾರಿಗಳಲ್ಲಿ ಪ್ರಮುಖವಾಗಿರುವ ಮೂರು ಮುಖ್ಯ ತರಕಾರಿಗಳ- ಬಟಾಟೆ, ನೀರುಳ್ಳಿ ಮತ್ತು ಟೊಮ್ಯಾಟೊ- ಬೆಲೆಗಳಲ್ಲಿಯೂ ಕಳೆದ ಐದು ವರ್ಷಗಳ ಅವಧಿಯಲ್ಲಿ ಅಗಾಧ ಏರಿಕೆಯಾಗಿದೆ. ಋತುವನ್ನು ಹೊಂದಿಕೊಂಡು ಬೆಲೆಗಳು ಮೇಲೆ, ಕೆಳಗೆ ಹೋಗುತ್ತಲೇ ಇರುತ್ತವೆ ಎನ್ನುವುದೇನೋ ಸರಿ. ಆದರೆ, ಅಗಾಧ ಬೆಲೆ ಏರಿಕೆ ಮತ್ತು ಅಗಾಧ ಬೆಲೆ ಕುಸಿತವು ಸರಕಾರದ ನೀತಿಯ ವೈಫಲ್ಯವನ್ನು ಸೂಚಿಸುತ್ತದೆ.

ಭಾರತವು ತೀವ್ರ ಹಣದುಬ್ಬರವನ್ನು ಎದುರಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಕುಟುಂಬಗಳ ಬಜೆಟ್‌ಗಳಿಗೆ ಬೆಲೆ ಏರಿಕೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಕಾಶದಲ್ಲಿ ತೇಲಾಡುತ್ತಿರುವ ಹಣದುಬ್ಬರದ ಮಟ್ಟವನ್ನು ಹೇಗೆ ಕೆಳಗೆ ತರುವುದು ಎಂಬ ಬಗ್ಗೆ ಹಣಕಾಸು ಮಾಂತ್ರಿಕರು ತಲೆ ಕೆರೆಯುತ್ತಿದ್ದಾರೆ. ಎಂದಿನಂತೆ, ನರೇಂದ್ರ ಮೋದಿ ನೇತೃತ್ವದ ಸರಕಾರವು ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿದೆ. ಸಭೆಗಳು ಸ್ವತಃ ಪ್ರಧಾನಿ ನೇತೃತ್ವದಲ್ಲೇ ನಡೆಯುತ್ತಿದೆ ಹಾಗೂ ಅದನ್ನು ಮಾಡಿ, ಇದನ್ನು ಮಾಡಿ ಎಂಬ ನಿರ್ದೇಶನಗಳನ್ನು ಸಭೆಯಲ್ಲಿ ನೀಡಲಾಗುತ್ತಿದೆ. ಇವುಗಳೆಲ್ಲ ಮಾಧ್ಯಮಗಳ ಮುಖಪುಟಗಳಲ್ಲಿ ಸುದ್ದಿಯಾಗುತ್ತಿವೆ. ಬಳಿಕ, ದಿಢೀರನೆ ತದ್ವಿರುದ್ಧ ನಿರ್ಧಾರಗಳು. ಮತ್ತೊಮ್ಮೆ ಮಾಧ್ಯಮಗಳ ಮುಖಪುಟಗಳಲ್ಲಿ ಸುದ್ದಿ... ಇದನ್ನೆಲ್ಲ ಭಾರತೀಯರು ಹಲವು ವರ್ಷಗಳಿಂದ ನೋಡುತ್ತಲೇ ಬಂದಿದ್ದಾರೆ.

 ಈಗ ಎಲ್ಲರ ಗಮನ ಸೆಳೆದಿರುವುದು ಗೋಧಿ ಮತ್ತು ಗೋಧಿ ಹಿಟ್ಟು. ಕೇಂದ್ರ ಸರಕಾರದ ಬಳಕೆದಾರರ ವ್ಯವಹಾರಗಳ ಇಲಾಖೆಯು ದೇಶಾದ್ಯಂತದಿಂದ ಸಂಗ್ರಹಿಸಿರುವ ಅಂಕಿ-ಅಂಶಗಳ ಪ್ರಕಾರ, ಗೋಧಿ ಹಿಟ್ಟಿನ ಸರಾಸರಿ ಬೆಲೆಯು 2021 ಮೇ 13ರಲ್ಲಿ ಇದ್ದ 28.80 ರೂಪಾಯಿಯಿಂದ 2022 ಮೇ 13ರಂದು 33.14 ರೂಪಾಯಿಗೆ ಏರಿದೆ. ಇದು ಒಂದು ವರ್ಷದಲ್ಲಿ ಶೇ. 13 ಏರಿಕೆ. ಇದು ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿನ ಗರಿಷ್ಠ ಹೆಚ್ಚಳವಾಗಿದೆ. ಗೋಧಿ ಹಿಟ್ಟು ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಹೆಚ್ಚಿನ ಕುಟುಂಬಗಳ ಮುಖ್ಯ ಆಹಾರವಾಗಿದೆ. ಗೋಧಿ ಹಿಟ್ಟು ಬೆಲೆಯಲ್ಲಿನ ಏರಿಕೆಯು ಬಡವರ ಕುಟುಂಬ ಬಜೆಟ್‌ನ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಬೇಳೆಗಳು ಅಥವಾ ಆಯಾಯ ಕಾಲಕ್ಕೆ ಬೆಳೆಯುವ ತರಕಾರಿಗಳನ್ನು ಸ್ವಲ್ಪ ಸಮಯದವರೆಗೆ ಬಳಸದೆ ಬೇಕಾದರೂ ಇರಬಹುದು. ಆದರೆ, ಬೆಲೆ ಕಡಿಮೆಯಾಗುವವರೆಗೆ ಗೋಧಿ ಹಿಟ್ಟನ್ನು ಬಳಸುವುದನ್ನು ನಿಲ್ಲಿಸಲು ಅಥವಾ ಅದರ ಸ್ಥಾನದಲ್ಲಿ ಬೇರೆ ಆಹಾರವನ್ನು ತಿನ್ನುವುದು ಸಾಧ್ಯವಿಲ್ಲ. ಅಂದರೆ, ಈ ಅಗಾಧ ಬೆಲೆ ಏರಿಕೆಯ ಹೊಡೆತದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.

ಗೋಧಿ ಬೆಳೆ ಕುಸಿದಿದೆ, ಸಂಗ್ರಹ ಕಡಿಮೆಯಾಗಿದೆ. ಉಕ್ರೇನ್ ವಿರುದ್ಧ ರಶ್ಯ ಯುದ್ಧ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಕೆ ಕಡಿಮೆಯಾಗಿದೆ. ಹಾಗಾಗಿ, ಪರಿಸ್ಥಿತಿಯ ಲಾಭವನ್ನು ಪಡೆಯಲು ಗೋಧಿಯನ್ನು ರಫ್ತು ಮಾಡುವಂತೆ ವ್ಯಾಪಾರಿಗಳನ್ನು ಸರಕಾರ ಉತ್ತೇಜಿಸಿದೆ ಎಂಬುದಾಗಿ ‘ನ್ಯೂಸ್‌ಕ್ಲಿಕ್’ ವರದಿ ಮಾಡಿದೆ. ಗೋಧಿ ರಫ್ತನ್ನು ಹೆಚ್ಚಿಸುವುದಕ್ಕಾಗಿ ಸರಕಾರದ ಪ್ರತಿನಿಧಿಗಳು ವಿವಿಧ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂಬುದಾಗಿ ಸರಕಾರವು ಮೇ 12ರಂದು ಘೋಷಿಸಿತು ಮತ್ತು ಮುಂದಿನ ತಿಂಗಳುಗಳಲ್ಲಿ ಒಂದು ಕೋಟಿ ಟನ್ ಗೋಧಿ ರಫ್ತು ಮಾಡುವ ಗುರಿಯನ್ನು ಹಾಕಿಕೊಂಡಿತು. ಆದರೆ, ಎರಡು ದಿನಗಳ ಬಳಿಕ, ಅಂದರೆ ಮೇ 14ರಂದು, ಆಹಾರ ಭದ್ರತೆಯನ್ನು ಖಾತರಿಪಡಿಸುವುದಕ್ಕಾಗಿ ಗೋಧಿ ರಫ್ತನ್ನು ತಕ್ಷಣದಿಂದ ನಿಷೇಧಿಸಲಾಗುವುದು ಎಂದು ಸರಕಾರ ಪ್ರಕಟಿಸಿತು.

ಆದರೆ, ಈ ಅವಧಿಯಲ್ಲಿ ಬೆಲೆ ಪರಿಸ್ಥಿತಿ ಒಂದೇ ಸಮನೆ ಹದಗೆಡುತ್ತಿದೆ.

ಇದರ ಜೊತೆಗೆ, ಅಡುಗೆ ಅನಿಲ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಬೆಲೆಗಳಲ್ಲಿನ ನಿರಂತರ ಏರಿಕೆ ಮುಂದುವರಿದಿದೆ. ಹಾಗಾಗಿ, ಬೆಲೆ ಏರಿಕೆಯ ಕಾರಣದಿಂದಾಗಿ ಜನರು ಪಡುತ್ತಿರುವ ಸಂಕಟ ಸಹಿಸಲಾಗದ ಮಟ್ಟಕ್ಕೆ ಏರಿದೆ. ಹಾಲು ಲೀಟರ್‌ಗೆ 50 ರೂಪಾಯಿಗಿಂತಲೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ. ವ್ಯಾಪಕವಾಗಿ ಬಳಕೆಯಾಗುತ್ತಿರುವ ಅಡುಗೆ ಅನಿಲಗಳು ಲೀಟರ್‌ಗೆ 200 ರೂಪಾಯಿ ಸಮೀಪ ಮಾರಾಟವಾಗುತ್ತಿದೆ. ಕೆಲವು ತರಕಾರಿಗಳ ಬೆಲೆಗಳು ಗರಿಷ್ಠ ಮಟ್ಟಕ್ಕೆ ಏರಿದ್ದು ಸಾಮಾನ್ಯ ನಾಗರಿಕರ ಕೈಗೆ ಎಟಕುತ್ತಿಲ್ಲ. ಉದಾಹರಣೆಗೆ; ಬಟಾಟೆ ಕೆಜಿಗೆ 22 ರೂಪಾಯಿಯಂತೆ ಮಾರಾಟವಾಗುತ್ತಿದೆ. ಇದು ಕಳೆದ ವರ್ಷದ ಇದೇ ಸಮಯದಲ್ಲಿ ಇದ್ದ ಬೆಲೆಗಿಂತ ಶೇ. 26 ಅಧಿಕವಾಗಿದೆ. ಅದೇ ವೇಳೆ, ಟೊಮ್ಯಾಟೊ ಬೆಲೆ ಕಿಲೋಗೆ 38.26 ರೂಪಾಯಿ ಆಗಿದ್ದು, ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.

ಕಳೆದ 5 ವರ್ಷಗಳಲ್ಲಿನ ಬೆಲೆ ಏರಿಕೆ

ಐದು ವರ್ಷಗಳ ಹಿಂದಿನ ಬೆಲೆಗಳಿಗೆ ಹೋಲಿಸಿದರೆ, ಅಗತ್ಯ ವಸ್ತುಗಳ ಬೆಲೆಗಳು ತಾಳಿಕೊಳ್ಳಲಾಗದ ಮಟ್ಟಕ್ಕೆ ಏರಿವೆ.

ಅಕ್ಕಿ ಮತ್ತು ಗೋಧಿ ಬೆಲೆಗಳು ಶೇ. 24ರಷ್ಟು ಏರಿದರೆ, ಗೋಧಿ ಹಿಟ್ಟಿನ ಬೆಲೆ ಶೇ. 28ರಷ್ಟು ಹೆಚ್ಚಾಗಿದೆ. ತೊಗರಿ ಬೇಳೆ, ಹೆಸರು ಬೇಳೆ ಮತ್ತು ಅವರೆ ಕಾಳು ಮುಂತಾದ ಬೇಳೆಗಳ ಬೆಲೆಯೂ 20-30ರಷ್ಟು ಏರಿದೆ. ಆದರೆ, ಜನ ಸಾಮಾನ್ಯರನ್ನು ಅತಿ ಹೆಚ್ಚು ಕಾಡಿರುವುದು ಗಗನಮುಖಿಯಾಗಿ ಏರುತ್ತಿರುವ ಅಡುಗೆ ಎಣ್ಣೆಗಳ ಬೆಲೆ. ಹೆಚ್ಚಿನ ಅಡುಗೆ ಎಣ್ಣೆಗಳ ಬೆಲೆ ದುಪ್ಪಟ್ಟು ಆಗಿದೆ.

ನಿರಂತರ ಐದು ವರ್ಷಗಳ ಕಾಲ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳು ಬೆಳೆದಿವೆ. ಆದರೆ, ಮೋದಿ ಸರಕಾರವು ವ್ಯಾಪಾರಿಗಳ ಲಾಭವನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. 2020ರಲ್ಲಿ, ಕೊರೋನ ವೈರಸ್ ಸಾಂಕ್ರಾಮಿಕವನ್ನು ನೆಪವಾಗಿ ಇಟ್ಟುಕೊಂಡು ಸರಕಾರವು ಖಾಸಗಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಿತು. ಆಹಾರ ಧಾನ್ಯಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಹೋಗಲಾಡಿಸಿ ಮುಕ್ತ ವ್ಯಾಪಾರ, ಸಂಗ್ರಹ ಮತ್ತು ಬೆಲೆ ನಿಗದಿಗೆ ಅವಕಾಶ ನೀಡುವ ಕಾನೂನುಗಳನ್ನು ತಂದಿತು. ಇದನ್ನು ವಿರೋಧಿಸಿ ರೈತರು ಸುದೀರ್ಘ ಒಂದು ವರ್ಷ ಕಾಲ ಪ್ರತಿಭಟನೆ ಮಾಡಿದರು. ಕೊನೆಗೆ ರೈತರ ಪ್ರತಿಭಟನೆಗೆ ಮಣಿದ ಸರಕಾರವು ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆದುಕೊಂಡಿತು. ಈ ವರ್ಷ ಮುಕ್ತ ರಫ್ತಿಗೆ ಬೆಂಬಲ ನೀಡಲು ಮುಂದಾಯಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿರುವ ಅಧಿಕ ಗೋಧಿ ಬೆಲೆಯ ಪ್ರಯೋಜನವನ್ನು ವ್ಯಾಪಾರಿಗಳಿಗೆ ದೊರಕಿಸಿಕೊಡಲು ಪ್ರಯತ್ನಿಸಿತು. ಈ ನಡುವೆ, ದೇಶದಲ್ಲಿಯೂ ಗೋಧಿ ಬೆಲೆ ಗಗನಕ್ಕೆ ಏರಿತು. ಹಾಗಾಗಿ, ರಫ್ತಿಗೆ ಕಡಿವಾಣ ಹಾಕುವ ಅನಿವಾರ್ಯತೆಗೆ ಅದು ಒಳಗಾಯಿತು.

ಬೆಲೆ ಏರಿಕೆಯು ಆಹಾರ ಧಾನ್ಯಗಳು ಮತ್ತು ಅಡುಗೆ ಎಣ್ಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ತರಕಾರಿಗಳಲ್ಲಿ ಪ್ರಮುಖವಾಗಿರುವ ಮೂರು ಮುಖ್ಯ ತರಕಾರಿಗಳ- ಬಟಾಟೆ, ನೀರುಳ್ಳಿ ಮತ್ತು ಟೊಮ್ಯಾಟೊ- ಬೆಲೆಗಳಲ್ಲಿಯೂ ಕಳೆದ ಐದು ವರ್ಷಗಳ ಅವಧಿಯಲ್ಲಿ ಅಗಾಧ ಏರಿಕೆಯಾಗಿದೆ. ಋತುವನ್ನು ಹೊಂದಿಕೊಂಡು ಬೆಲೆಗಳು ಮೇಲೆ, ಕೆಳಗೆ ಹೋಗುತ್ತಲೇ ಇರುತ್ತವೆ ಎನ್ನುವುದೇನೋ ಸರಿ. ಆದರೆ, ಅಗಾಧ ಬೆಲೆ ಏರಿಕೆ ಮತ್ತು ಅಗಾಧ ಬೆಲೆ ಕುಸಿತವು ಸರಕಾರದ ನೀತಿಯ ವೈಫಲ್ಯವನ್ನು ಸೂಚಿಸುತ್ತದೆ.

ಇತರ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಅಗಾಧ ಏರಿಕೆಯಾಗಿದೆ. ಹಾಲಿನ ಬೆಲೆ ಶೇ. 25 ಏರಿಕೆಯಾದರೆ, ಬಿಡಿ ಚಹಾ ಎಲೆಗಳ ದರವು ಶೇ. 41ರಷ್ಟು ಏರಿದೆ. ಉಪ್ಪಿನ ಬೆಲೆಯೂ ಶೇ. 28ರಷ್ಟು ಹೆಚ್ಚಿದೆ.

ಅಡುಗೆ ಅನಿಲ ಮತ್ತು ಪೆಟ್ರೋಲ್/ಡೀಸೆಲ್

ಬೆಲೆ ಏರಿಕೆಯ ಮೂಲಕ ಮಾಡಲಾಗುವ ದರೋಡೆಯ ಕತೆ ಇಲ್ಲಿಗೇ ನಿಲ್ಲುವುದಿಲ್ಲ. 14.2 ಕೆಜಿಯ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯು ಕೇವಲ ಒಂದು ವರ್ಷದಲ್ಲಿ ಅಗಾಧ 431.50 ರೂಪಾಯಿಯಷ್ಟು ಹೆಚ್ಚಿದೆ. ಇದು ಶೇ. 76 ಹೆಚ್ಚಳವಾಗಿದೆ. ಅದೂ ಅಲ್ಲದೆ, 19 ಕೆಜಿ ತೂಗುವ ವಾಣಿಜ್ಯ ಸಿಲಿಂಡರ್‌ನ ಈಗಿನ ಬೆಲೆ 2,397 ರೂಪಾಯಿ. ಕಳೆದ ವರ್ಷ ಅದರ ಬೆಲೆ 1059.5 ರೂ. ಆಗಿತ್ತು. ಅಂದರೆ ಒಂದು ವರ್ಷದಲ್ಲಿ ಶೇ.126 ಏರಿಕೆ ಆಗಿದೆ.

ಈ ನಡುವೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇಂದ್ರ ಸರಕಾರ ನಿರಂತರವಾಗಿ ಏರಿಸುತ್ತಲೇ ಬಂದಿದೆ. ಉತ್ತರಪ್ರದೇಶ, ಪಂಜಾಬ್ ಮತ್ತು ಇತರ ಮೂರು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮೋದಿ ಸರಕಾರವು 137 ದಿನಗಳ ಕಾಲ ತೈಲ ಬೆಲೆಯನ್ನು ಮುಟ್ಟಲಿಲ್ಲ. ಚುನಾವಣೆಗಳು ಮುಗಿದ ತಕ್ಷಣ ಹಲವು ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಮೇಲೇರಿದವು. ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಶೇ. 20ಕ್ಕೂ ಹೆಚ್ಚಿನ ಹೆಚ್ಚಳವಾದರೆ, ಡೀಸೆಲ್ ಬೆಲೆಯಲ್ಲಿ ಸುಮಾರು ಶೇ. 17 ಹೆಚ್ಚಳವಾಯಿತು. ಇದನ್ನು ಪೆಟ್ರೋಲಿಯಮ್ ಮತ್ತು ಪ್ರಾಕೃತಿಕ ಅನಿಲ ಸಚಿವಾಲಯದ ಪೆಟ್ರೋಲಿಯಮ್ ಯೋಜನೆ ಮತ್ತು ವಿಶ್ಲೇಷಣೆ ಘಟಕ (ಪಿಪಿಎಸಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಿಳಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಏರಿಕೆಯು ಎಲ್ಲ ಅಗತ್ಯ ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಯಾಕೆಂದರೆ ಅಗತ್ಯ ವಸ್ತುಗಳ ಸಾಗಾಟ ವೆಚ್ಚದಲ್ಲಿ ಏರಿಕೆಯಾಗುತ್ತದೆ.

ಇನ್ನು ಏನಾಗಬಹುದು?

ಬಳಕೆದಾರ ಬೆಲೆ ಸೂಚ್ಯಂಕದ ಎಪ್ರಿಲ್ ತಿಂಗಳ ಅಂಕಿ-ಅಂಶಗಳ ಪ್ರಕಾರ, ಚಿಲ್ಲರೆ ಹಣದುಬ್ಬರ ದರವು ಶೇ. 7.79ನ್ನು ತಲುಪಿದೆ. ಇದು ಎಂಟು ವರ್ಷಗಳಲ್ಲೇ ಗರಿಷ್ಠವಾಗಿದೆ. ಗ್ರಾಮೀಣ ಹಣದುಬ್ಬರವು ಇನ್ನೂ ಅಧಿಕ, ಅಂದರೆ ಶೇ. 8.38 ಆಗಿದೆ. ಈ ನಡುವೆ ಆಹಾರ ವಸ್ತುಗಳ ಹಣದುಬ್ಬರವು ಶೇ. 8.38 ಆಗಿದೆ. ಗ್ರಾಮೀಣ ಕ್ಷೇತ್ರಕ್ಕೆ ಅನ್ವಯವಾಗುವ ಈ ಸಂಖ್ಯೆಯು ಇನ್ನೂ ಅಧಿಕ, ಅಂದರೆ ಶೇ. 8.5 ಆಗಿದೆ. ಬೆಲೆ ಏರಿಕೆ ತಾಂಡವವಾಡುತ್ತಿದೆ ಮತ್ತು ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಸಗಟು ಬೆಲೆಗಳು ಶೇ. 14.55ರಷ್ಟು ಹೆಚ್ಚಿವೆ ಎಂದು ಎಪ್ರಿಲ್ 18ರಂದು ಬಿಡುಗಡೆಯಾದ ಕೊನೆಯ ಅಂಕಿ-ಅಂಶಗಳು ತಿಳಿಸಿವೆ. ಸಾಮಾನ್ಯವಾಗಿ, ಸಗಟು ಬೆಲೆಗಳು ಬಳಕೆದಾರರಿಗೆ ತಲುಪುವುದು ಕೆಲವು ತಿಂಗಳುಗಳ ಅಂತರದ ಬಳಿಕ. ಅಂದರೆ ಇನ್ನು ಕೆಲವು ತಿಂಗಳುಗಳಲ್ಲಿ ಹೆಚ್ಚಿನ ವಸ್ತುಗಳು ಇನ್ನೊಂದು ಸುತ್ತಿನ ಬೆಲೆ ಏರಿಕೆಗೆ ಒಳಗಾಗಲಿವೆ.

ಈಗ ತಡೆ ಹಿಡಿಯಲಾಗಿರುವ ಗೋಧಿಯನ್ನು ಅಧಿಕ ದರದಲ್ಲಿ (ರಫ್ತನ್ನು ಗಮನದಲ್ಲಿಟ್ಟುಕೊಂಡು) ಖರೀದಿಸಲಾಗಿತ್ತು. ಇನ್ನು ಅದು ಅಧಿಕ ಬೆಲೆಯಲ್ಲಿ ದೇಶಿ ಮುಕ್ತ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈಗಾಗಲೇ ಪಡಿತರ ಗೋಧಿಯಿಂದ ವಂಚಿತರಾಗಿರುವ ಜನರು ಅನಿವಾರ್ಯವಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಕೊಟ್ಟು ಖರೀದಿಸಬೇಕಾಗಿದೆ. ಇದು ಈಗಾಗಲೇ ದುರ್ಬಲಗೊಂಡಿರುವ ಜನರ ಜೀವನ ಮಟ್ಟದ ಮೇಲೆ ಇನ್ನಷ್ಟು ಒತ್ತಡ ಹೇರಲಿದೆ.

 ಕೃಪೆ: newsclick.in

Writer - ಸುಬೋಧ್ ವರ್ಮ

contributor

Editor - ಸುಬೋಧ್ ವರ್ಮ

contributor

Similar News