ಬೆಂಗಳೂರು: ಭಾರೀ ಮಳೆಗೆ ಇಬ್ಬರು ಕಾರ್ಮಿಕರು ಬಲಿ

Update: 2022-05-18 05:06 GMT

ಬೆಂಗಳೂರು, ಮೇ 18: ರಾಜಧಾನಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಪೈಪ್​​ಲೈನ್ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ.

ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಳ ಉಪ್ಪ ನಗರದ ಉಪಕಾರ್ ಲೇಔಟ್ ಬಸ್ ನಿಲ್ದಾಣ ಬಳಿ ಈ ದುರಂತ ಸಂಭವಿಸಿದ್ದು, ಮೃತರನ್ನು ಬಿಹಾರ ಮೂಲದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಎಂದು ಗುರುತಿಸಲಾಗಿದೆ.

ಉಪಕಾರ್ ಲೇಔಟ್ ಬಸ್ ನಿಲ್ದಾಣ ಬಳಿ ಕಾವೇರಿ ನೀರಿನ 5ನೇ ಹಂತದ ಕಾಮಗಾರಿ ನಡೆಯುತ್ತಿತ್ತು. ದೇವ್ ಭರತ್, ಅಂಕಿತ್ ಕುಮಾರ್ ಮತ್ತು ತ್ರಿಲೋಕ್ ಎಂಬ ಮೂವರು ಕಾರ್ಮಿಕರು ಇಲ್ಲಿ ಪೈಪ್ ಲೈನ್ ಕೆಲಸ ಮಾಡುತ್ತಿದ್ದರು. ರಾತ್ರಿ ಏಳು ಗಂಟೆ ವೇಳೆ  ಮಳೆ ಜಾಸ್ತಿಯಾಗಿದ್ದರಿಂದ ಪೈಪ್​​ನೊಳಗೆ​ ಕೆಲಸ ಮಾಡುವಾಗ ಏಕಾಏಕಿ ನೀರು ತುಂಬಿಕೊಂಡಿದೆ. ಇದರಿಂದ ದೇವ್ ಬಾತ್ ಹಾಗೂ ಅಂಕಿತ್ ಉಸಿರುಗಟ್ಟಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ತ್ರಿಲೋಕ್ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೇಲ್ನೊಟಕ್ಕೆ ನಿರ್ಲಕ್ಷ್ಯ ಕಂಡುಬಂದಿದ್ದು, ಈ ಸಂಬಂಧ ಇಬ್ಬರು ಗುತ್ತಿಗೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು: ಮಳೆಯಿಂದ ನಗರದ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕಮಲಾ‌ ನಗರ, ನಂದಿನಿ ಬಡಾವಣೆ, ಕಂಠೀರವ ನಗರ ಸೇರಿದಂತೆ ಲೇಔಟ್​​ನ ತಗ್ಗು ಪ್ರದೇಶದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರಿನಿಂದ ಮನೆಯಲ್ಲಿನ ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News