ಬೆಂಗಳೂರಿನಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ; ಸರಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ

Update: 2022-05-18 12:38 GMT

ಬೆಂಗಳೂರು: ಮಂಗಳವಾರ ರಾತ್ರಿ ಸೃಷ್ಟಿಸಿದ ಮಳೆಯ ಅನಾಹುತದಿಂದ ಬೆಂಗಳೂರಿನ ಭಾಗಶಃ ಪ್ರದೇಶದ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ಸರಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮನೆಗಳಿಗೆ ನೀರು ನುಗ್ಗಿ ಮಂಗಳವಾರ ರಾತ್ರಿ ಪೂರ್ತಿ ಮನೆ ತಾರಸಿ ಹಾಗೂ ನೆರೆಮನೆಗಳ ಆಶ್ರಯ ಪಡೆದಿದ್ದ ಸಂತ್ರಸ್ತರು, ಇಂದು ದಿನವಿಡೀ ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಮನೆಗೆ ನುಗ್ಗಿದ ತ್ಯಾಜ್ಯ ನೀರಿನಿಂದ ಪ್ರತಿ ಮನೆಯಲ್ಲೂ ಒಂದೊಂದು ರೀತಿಯ ಅವಾಂತರ ಸೃಷ್ಟಿಯಾಗಿದ್ದು, ಸಂತ್ರಸ್ತರು ದಿನಪೂರ್ತಿ ಮನೆ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದರು. 

ಇದರ ನಡುವೆ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗಳಿಗೆ ನೀರು ನುಗ್ಗಿರುವ ಪ್ರತಿ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಿದರು. ಈ ವೇಳೆ ಕೆಲವೇ ಮನೆಗಳಿಗೆ ಭೇಟಿ ನೀಡಿದರು ಎಂಬ ಆರೋಪದ ಮೇಲೆ ಹಲವು ಸಂತ್ರಸ್ತರು ಘೇರಾವ್ ಹಾಕಿದ ಘಟನೆಯೂ ನಡೆಯಿತು.

ನೀರಿನ ಹರಿವು ಕಡಿಮೆಯಾದ ಬಳಿಕ ಮನೆಗಳು ಗದ್ದೆಗಳಂತಾಗಿದ್ದು, ಬೆಲೆಬಾಳುವ ವಸ್ತುಗಳು ಮಾತ್ರವಲ್ಲದೆ ಆಹಾರ ಪದಾರ್ಥ, ಔಷಧ, ಪಠ್ಯಪುಸ್ತಕಗಳೂ ನೀರುಪಾಲಾಗಿ ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. 

ಅತಿಹೆಚ್ಚು ಮಳೆಹಾನಿಗೆ ಒಳಗಾಗಿರುವ ಹೊಸಕೆರೆಹಳ್ಳಿ, ದತ್ತಾತ್ರೇಯನಗರ, ರಾಜರಾಜೇಶ್ವರಿನಗರ, ಪಾದರಾಯನಪುರ, ಕೆಂಗೇರಿ ಉಪನಗರ ಪ್ರದೇಶಗಳ ಮನೆಗಳಲ್ಲಿ ಕೊಳಚೆ, ಕೆಸರು ಮೆತ್ತಿಕೊಂಡಿದ್ದ ವಸ್ತುಗಳನ್ನು ಮನೆ ಆವರಣದಲ್ಲಿ ಗುಡ್ಡೆ ಹಾಕಿಕೊಂಡು ಕಣ್ಣೀರಿಡುವ ದೃಶ್ಯ ಸಾಮಾನ್ಯವಾಗಿತ್ತು.

ರಾತ್ರಿ ಸುರಿದ ಮಳೆಯಿಂದಾಗಿ ಮಲ್ಲೇಶ್ವರಂ 18ನೇ ಕ್ರಾಸ್‍ನಲ್ಲಿ ಬೃಹತ್ ಮರವೊಂದು ನೆಲಕ್ಕೆ ಉರುಳಿದೆ. ಮರಬಿದ್ದ ಕಾರಣ ಕಾಂಪೌಂಡ್ ಕುಸಿದಿದೆ. ಮಲ್ಲೇಶ್ವರಂ ಕಡೆಯಿಂದ ಸದಾಶಿವನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಬಂದ್ ಆಗಿದೆ. ಮರ ತೆರವುಗೊಳಿಸಲು ಬಿಬಿಎಂಪಿ ಇನ್ನೂ ಕಾಮಗಾರಿ ಆರಂಭಿಸಿಲ್ಲ ಎಂದು ಸ್ಥಳೀಯರು ದೂರಿದರು.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಡಿತ
ದೇವನಹಳ್ಳಿಯ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಕೆರೆಯ ನೀರು ನುಗ್ಗಿದ ಕಾರಣ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 5 ಕಿಮೀ ಉದ್ದಕ್ಕೆ ಸಾವಿರಾರು ವಾಹನಗಳು ನಿಂತಿವೆ. ಹುಣಸಮಾರನಹಳ್ಳಿ ಮೇಲ್ಸುತುವೆ ಬಳಿ ಪದೇಪದೆ ಹೀಗೆ ಆಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಮನವಿ ಮಾಡಿದರು.

ಮಳೆ ಎಲ್ಲಿ ಎಷ್ಟು? (ಮಿಮೀಗಳಲ್ಲಿ)
ಹೊರಮಾವು 155, ಯಲಹಂಕ 129, ವಿದ್ಯಾಪೀಠ 127, ರಾಜಮಹಲ್ 122, ನಾಗಪುರ 120, ಸಂಪಂಗಿನಗರ 119, ದಾಸರಹಳ್ಳಿ 110, ವಿದ್ಯಾರಣ್ಯಪುರ 109, ದೊಡ್ಡನೆಕ್ಕುಂದಿ 108, ಬಾಣಸವಾಡಿ 106, ಜಕ್ಕೂರು 102, ಸಿಂಗಸಂದ್ರ 98, ವನ್ನಾರಪೇಟೆ 85, ವಿಶ್ವೇಶ್ವರಪುರ 82, ಕೋರಮಂಗಲ 80, ಚಾಮರಾಜಪೇಟೆ 79, ದೊಮ್ಮಲೂರು 79, ಎಚ್‍ಎಎಲ್ 77, ಬಿಟಿಎಂ ಲೇಔಟ್ 77, ನಾಯಂಡಹಳ್ಳಿ 73, ಬೆಳ್ಳಂದೂರು 66, ಬಿಳೇಕಲ್ಲಳ್ಳಿ 65, ಮಾರತ್ತಹಳ್ಳಿ 61, ಸಾರಕ್ಕಿ 61, ವರ್ತೂರು 59, ಯೂನಿವರ್ಸಿಟಿ ಕ್ಯಾಂಪಸ್ 53, ಕೋಣನಕುಂಟೆ 44, ಕೆಂಗೇರಿ 37.

ವಾಹನಗಳಿಗೆ ಭಾರೀ ಹಾನಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ನೂರಾರು ವಾಹನಗಳಿಗೆ ಹಾನಿಯಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.
ನಗರದ ಹಲವೆಡೆ ರಸ್ತೆಗಳು, ಹಳ್ಳಗಳು ತುಂಬಿಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು. ಅದರಲ್ಲೂ ಮರ್ಸಿಡಿಸ್ ಬೆಂಜ್ ಕಾರಿನ ಒಂದು ಬದಿಯ ಎರಡೂ ಚಕ್ರಗಳು ಕೆಸರಿನಲ್ಲಿ ಸಿಲುಕಿ, ಮತ್ತೆರೆಡು ಚಕ್ರಗಳು ನೆಲದಿಂದ ಮೇಲೆ ಬಂದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾತ್ರಿ ಮಹಾ ಮಳೆಗೆ ವೃಷಭಾವತಿ ಕಾಲುವೆಗೆ ಬುಲ್ಡೋಝರ್ ಉರುಳಿಬಿದ್ದಿದೆ. ಪಾದರಾಯನಪುರ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ರಾಜಕಾಲುವೆಯಲ್ಲಿ ಹೂಳು ಎತ್ತಲು ನಿಲ್ಲಿಸಲಾಗಿದ್ದ ಬುಲ್ಡೋಜರ್ ಇದಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಾಜಿನಗರದ ಹಫೀಜ್ ಶಾಲೆಯ ತಡೆಗೋಡೆ ಕುಸಿದು ಹಲವು ವಾಹನಗಳು ಜಖಂಗೊಂಡರೆ, ಅಪಾರ್ಟ್‍ಮೆಂಟ್‍ಗಳಲ್ಲಿ ನೀರು ನುಗ್ಗಿದ ಪರಿಣಾಮ ನೂರಾರು ವಾಹನಗಳು ನೀರಿನಲ್ಲಿ ತೆಲುತ್ತಿರುವ ದೃಶ್ಯ ಕಂಡುಬಂದಿದೆ.

114 ಮಿಮೀ ಮಳೆ ದಾಖಲು
ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 114 ಮಿಮೀ ಮಳೆ ದಾಖಲಾಗಿದೆ. 2017 ರ ಆಗಸ್ಟ್ 15 ರಂದು 128 ಮಿಮೀ ಮಳೆ ಸುರಿದಿತ್ತು. ಈ ವರ್ಷದ ಮೇ ತಿಂಗಳಲ್ಲಿ ನಗರದಲ್ಲಿ ಇದುವರೆಗೆ ಐಎಂಡಿ ಕೇಂದ್ರದಲ್ಲಿ 253 ಮಿಮೀ ಮಳೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News