ಕುಸಿಯುತ್ತಿರುವ ಸ್ಟಾರ್ಟ್‌ಅಪ್‌ಗಳು: 400ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ಆನ್‌ಲೈನ್‌ ಕಲಿಕಾ ಸಂಸ್ಥೆ ವೇದಾಂತು

Update: 2022-05-18 12:42 GMT

ಹೊಸದಿಲ್ಲಿ: ದೇಶದಾದ್ಯಂತ ಹಲವಾರು ಸ್ಟಾರ್ಟ್‌ಅಪ್‌ ಗಳು ಸದ್ಯದ ಪರಿಸ್ಥಿತಿಯಲ್ಲಿ ಭಾರೀ ಕಷ್ಟಕರವೆಂಬಂತೆ ಸಾಗುತ್ತಿದೆ. ಹೆಚ್ಚುತ್ತಿರುವ ಹಣದುಬ್ಬರದ ಭೀತಿ ಹಲವರನ್ನು ಕಂಗೆಡಿಸಿವೆ. ಈ ಎಲ್ಲಾ ಭೀತಿಗಳ ನಡುವೆ ಇದೀಗ ಆನ್‌ಲೈನ್‌ ಕಲಿಕಾ ಸಂಸ್ಥೆಯಾಗಿರುವ ವೇದಾಂತು ಬುಧವಾರ ಸುಮಾರು 400ಕ್ಕೂ ಹೆಚ್ಚು ಮಂದಿ ಅಂದರೆ ಸಂಸ್ಥೆಯ 7%ನಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ತಿಳಿದು ಬಂದಿದೆ. 

"5,900 ವೇದನ್‌ ಗಳಲ್ಲಿ ನಮ್ಮ ಸಹೋದ್ಯೋಗಿಗಳಾಗಿದ್ದ 424 ಮಂದಿ ಅಂದರೆ, ನಮ್ಮ ಕಂಪೆನಿಯ 7% ಉದ್ಯೋಗಿಗಳು ನಮ್ಮಿಂದ ಬೇರ್ಪಡಲಿದ್ದಾರೆ. ಇದು ನಿಜಕ್ಕೂ ಅತ್ಯಂತ ಕಷ್ಟಕರವಾದ ಹೇಳಿಕೆಯಾಗಿದೆ, ನಿಜಕ್ಕೂ ನಮ್ಮನ್ನು ಕ್ಷಮಿಸಿಬಿಡಿ" ಎಂದು ಕಂಪೆನಿಯ ಸಿಇಒ ವಂಶಿ ಕೃಷ್ಣ ಅವರು ಸಂಸ್ಥೆಯ ವೆಬ್‌ಸೈಟ್‌ ನಲ್ಲಿ ಪೋಸ್ಟ್‌ ಮಾಡಿರುವ ಈಮೈಲ್‌ ನಲ್ಲಿ ಹೇಳಿದ್ದಾರೆ. ಇದನ್ನು ʼಕಠಿಣ ನಿರ್ಧಾರʼ ಎಂದು ಕರೆದ ಅವರು, "ಹೊರಗಿನ ಕಷ್ಟಕರವಾದ ವಾತಾವರಣವನ್ನು" ಹೊಣೆಯಾಗಿಸಿದರು.

"ಯುರೋಪ್‌ನಲ್ಲಿನ ಯುದ್ಧ, ಮುಂದೆ ಬರಲಿರುವ ಆರ್ಥಿಕ ಹಿಂಜರಿತದ ಭಯ ಮತ್ತು ಫೆಡ್ ದರದ ಬಡ್ಡಿ ಏರಿಕೆಗಳು ಜಾಗತಿಕವಾಗಿ ಮತ್ತು ಪ್ರಮುಖವಾಗಿ ಭಾರತದಲ್ಲಿ ಷೇರುಗಳಲ್ಲಿ ಭಾರಿ ತಿದ್ದುಪಡಿಯೊಂದಿಗೆ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಿವೆ. ಇದೇ ವಾತಾವರಣ ಮುಂದುವರಿದರೆ, ಮುಂಬರುವ ತ್ರೈಮಾಸಿಕಗಳಿಗೆ ಬಂಡವಾಳದ ಕೊರತೆ ಎದುರಾಗುತ್ತದೆ. ಕೋವಿಡ್‌ ಸಾಂಕ್ರಾಮಿಕ ಕಡಿಮೆಯಾಗುವುದರೊಂದಿಗೆ ಶಾಲೆಗಳು ಮತ್ತು ಆಫ್‌ಲೈನ್ ವ್ಯವಸ್ಥೆಗಳೂ ತೆರೆದುಕೊಳ್ಳುತ್ತಿವೆ. 9X ನ ಹೈಪರ್-ಗ್ರೋತ್ ಅನ್ನು ಕಳೆದ 2 ವರ್ಷಗಳಲ್ಲಿ ವೇದಾಂತು ಕಂಡಿದೆ, "ಎಂದು ಅವರು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News