ಜಿಪಂ, ತಾಪಂ ಚುನಾವಣೆ: ಮೇ 23ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2022-05-18 13:10 GMT

ಬೆಂಗಳೂರು, ಮೇ 18: ಸುಪ್ರೀಂಕೋರ್ಟ್ ಆದೇಶದಂತೆ ಅವಧಿ ಮುಗಿದಿರುವ ರಾಜ್ಯದ ಜಿಲ್ಲಾ ಹಾಗೂ ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯ ಸರಕಾರ ತನ್ನ ಅಧಿಕಾರವನ್ನು ಕಸಿದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ ಮುಂದೆ ತಿಳಿಸಿದೆ. ಈ ಅರ್ಜಿ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದೆ.

ಪಂಚಾಯತ್ ರಾಜ್ ಸೀಮಾನಿರ್ಣಯ ಆಯೋಗ ರಚಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದ ಪೀಠ, ತಾಪಂ ಮತ್ತು ಜಿಪಂ ಚುನಾವಣೆಗಳನ್ನು ತಕ್ಷಣವೇ ನಡೆಸುವಂತೆ ಕಳೆದ ವಾರ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಅದರಂತೆ ಆಯೋಗ ಚುನಾವಣೆಗಳನ್ನು ನಡೆಸುವ ಬದಲು ಬಾಕಿ ಇರುವ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಆಯೋಗ ಮನವಿ (ಮೆಮೋ) ಸಲ್ಲಿಸಿರುವುದೇಕೆ ಎಂದು ಪ್ರಶ್ನಿಸಿತು.

ಚುನಾವಣಾ ಆಯೋಗದ ಪರ ವಕೀಲರು ವಿವರಣೆ ನೀಡಿ, ಕ್ಷೇತ್ರ ಪುರನ್ ವಿಂಗಡಣೆ ಮತ್ತು ಮೀಸಲಾತಿ ಪಟ್ಟಿಯನ್ನು ರಚಿಸುವ ಚುನಾವಣಾ ಆಯೋಗದ ಅಧಿಕಾರವನ್ನು ರಾಜ್ಯ ಸರಕಾರ ಹಿಂಪಡೆದಿದೆ. ಇವುಗಳಿಲ್ಲದೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ಪೀಠ, ಈ ಕುರಿತಂತೆ ವಿವರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಮೇ.23ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News