ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿ ದ.ಕ.ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ವೈದಿಕ ಆಚರಣೆ

Update: 2022-05-18 13:10 GMT

ಮಂಗಳೂರು : ದ.ಕ.ಜಿಲ್ಲೆಯ ಕೆಲವು ಸರಕಾರಿ ಶಾಲೆಗಳಲ್ಲಿ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿ ವೈದಿಕ ಆಚರಣೆ ನಡೆದ ಬಗ್ಗೆ ಸೋಮವಾರ ವರದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಮಧ್ಯೆ ವೈದಿಕ ಆಚರಣೆ (ಹೋಮ) ನಡೆದ ಬಗ್ಗೆ ಬಿಇಒ (ಕ್ಷೇತ್ರ ಶಿಕ್ಷಣಾಧಿಕಾರಿಗಳು) ಖಚಿತಪಡಿಸಿದ್ದು, ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಘಟನೆಯ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಅವರಿಂದ ವರದಿ ಕೇಳಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಿಬಾಗಿಲು ಮತ್ತು ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ, ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸರಕಾರಿ ಶಾಲೆಗಳಲ್ಲಿ ಸೋಮವಾರ ವೈದಿಕ ಆಚರಣೆ ನಡೆದಿತ್ತು. ಅಂದರೆ ಶಾಲೆಯೊಳಗೆ ಶಿಕ್ಷಕರ ಸಮ್ಮುಖ ಹೋಮ ನಡೆಸಲಾಗಿದೆ. ಅಲ್ಲದೆ ಆರತಿ ಬೆಳಗಿ ತಿಲಕ ಹಚ್ಚಿರುವ ಫೋಟೋ, ವೀಡಿಯೋಗಳು ಕಳೆದ ಮೂರು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಬಹುತೇಕ ಶಾಲೆಗಳಲ್ಲಿ ಶಿಕ್ಷಕರು, ಊರಿನ ಗಣ್ಯರು, ಜನಪ್ರತಿನಿಧಿಗಳು ಮಕ್ಕಳನ್ನು ತಳಿರು-ತೋರಣ, ಹೂ ನೀಡಿ ಸ್ವಾಗತಿಸಿದ್ದರೆ ಕೆಲವೇ ಕೆಲವು ಶಾಲೆಗಳು ವೈದಿಕ ಆಚರಣೆ ನಡೆಸಲಾಗಿದೆ. ಶಿಕ್ಷಕರ ಈ ನಡೆಯ ಬಗ್ಗೆ ಸ್ವತ: ಹಿರಿಯ ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಕರಾವಳಿಯಲ್ಲಿ ಸೃಷ್ಟಿಯಾದ ಹಿಜಾಬ್ ಗೊಂದಲವು ರಾಜ್ಯದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಚರ್ಚೆಗೆ ಕಾರಣವಾಗಿತ್ತು. ಹಿಂದುತ್ವ ಸಂಘಟನೆಗಳು ಹಿಜಾಬ್‌ಗೆ ವಿರೋಧ ವ್ಯಕ್ತಪಡಿಸಿದ್ದವು. ಶಾಲೆಗಳಲ್ಲಿ ಸಮಾನತೆ ಪಾಲಿಸಬೇಕು ಎಂದು ಒತ್ತಾಯಿಸಿದ್ದವು.

ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಮಾ.15ರಂದು ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿತ್ತು. ಈ ವೇಳೆ, ’ಧಾರ್ಮಿಕ ಸಂಕೇತ ಸೂಚಿಸುವ ಉಡುಪು ಧರಿಸುವುದನ್ನು ಕೈಬಿಡುವಂತೆ’ ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಶಿಕ್ಷಣ ಇಲಾಖೆಯು ಹೊರಡಿಸಿದ ಆದೇಶದಲ್ಲಿ ಹೈಕೋರ್ಟ್ ಆದೇಶವನ್ನು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿತ್ತು.

ಆದಾಗ್ಯೂ ಮೇ 16ರಂದು ಬಂಟ್ವಾಳ ಮತ್ತು ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ ಮೂರು ಸರಕಾರಿ ಶಾಲೆಗಳಲ್ಲಿ ‘ಹೋಮ’ ಆಚರಿಸಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಸಿ ಅಚ್ಚರಿ ಮೂಡಿಸಲಾಗಿದೆ.

"ಸರಕಾರಿ ಶಾಲೆಗಳಲ್ಲಿ ಮೊನ್ನೆ ಹೋಮ ನಡೆಸಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಡಿಡಿಪಿಐಗೆ ಸೂಚಿಸಿದ್ದೇನೆ. ಅವರ ವರದಿಯನ್ನು ಆಧರಿಸಿ ಮುಂದಿನ ಕ್ರಮ ಜರಗಿಸಲಾಗುವುದು".

ಡಾ.ರಾಜೇಂದ್ರ ಕೆ.ವಿ. ದ.ಕ.ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News