ಗಾಳಿ-ಮಳೆ: 20 ಮನೆಗಳಿಗೆ ಹಾನಿ; ಏಳು ಲಕ್ಷ ರೂ.ಗಳಿಗೂ ಅಧಿಕ ನಷ್ಟ

Update: 2022-05-18 15:43 GMT

ಉಡುಪಿ : ಜಿಲ್ಲೆಯಲ್ಲಿ ಮುಂದುವರಿದ ಗಾಳಿ-ಮಳೆಯಿಂದ ಮನೆ ಹಾನಿ ಹಾಗೂ ಇತರ ಸಾರ್ವಜನಿಕ ಸೊತ್ತುಗಳಿಗೆ ಹಾನಿಯ ಪ್ರಕರಣಗಳು ಇನ್ನಷ್ಟು ದಾಖಲಾಗಿವೆ. ಹೊಸದಾಗಿ ಇಂಥ ೨೦ ಪ್ರಕರಣಗಳು ದಾಖಲಾಗಿದ್ದು ಒಟ್ಟು ೭ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ ತಾಲೂಕಿನ ಹೆಸ್ಕತ್ತೂರು ಶಾಲೆಯ ಕಟ್ಟಡ ಮೇಲ್ಚಾವಣಿ ಗಾಳಿ-ಮಳೆಗೆ ಭಾಗಶ: ಹಾರಿಹೋಗಿದ್ದು, ೩೦ ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.ಕಂದಾವರ ಗ್ರಾಮದ ದೇವಾಡಿಗ ಸಹೋದರಿಯರ ಎರಡು ಮನೆಗಳಿಗೆ ಮಾವಿನ ಮರ ಬಿದ್ದು ಎರಡೂವರೆ ಲಕ್ಷರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಇಂದು ಸಹ ಹೆಚ್ಚಿನ ಹಾನಿಯ ಪ್ರಕರಣಗಳು ವರದಿಯಾಗಿರುವುದು ಕುಂದಾಪುರ ತಾಲೂಕಿನಿಂದ. ಒಂದೆರಡು ಪ್ರಕರಣಗಳು ಬ್ರಹ್ಮಾವರ ತಾಲೂಕಿ ನಿಂದಲೂ ವರದಿಯಾಗಿವೆ. ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಸುಶೀಲ ಮರಕಾಲ್ತಿ ಹಾಗೂ ೩೮ ಕಳ್ತೂರು ಗ್ರಾಮದ ಸುಜಾತ ಶೆಟ್ಟಿ ಅವರ ವಾಸದ ಪಕ್ಕಾ ಮನೆಗೆ ಭಾಗಶ: ಹಾನಿಯಾಗಿ ೭೫,೦೦೦ ನಷ್ಟದ ಅಂದಾಜು ಮಾಡಲಾಗಿದೆ.

ಇನ್ನುಳಿದಂತೆ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ರಾಜು ಪೂಜಾರಿ, ಪೊಮ್ಮ, ಚಂದು ಮೊಗೇರ್ತಿ, ವಡೇರಹೋಬಳಿ ಗ್ರಾಮದ ಬಾಬು ಪೂಜಾರಿ, ಮೊಳಹಳ್ಳಿ ಗ್ರಾಮದ ಜ್ಯೋತಿ ಶೆಡ್ತಿ, ಹೆಸ್ಕತ್ತೂರು ಗ್ರಾಮದ ಮಿಣ್ಕ, ಸಂಜೀವ ಮಡಿವಾಳ, ಮಹಾಬಲ ಕುಲಾಲ್, ಸುಜಾತ ಎಂಬವರ ವಾಸ್ತವ್ಯದ ಮನೆಗೆ ಭಾಗಶ: ಹಾನಿಯಾಗಿವೆ.

ಅದೇ ತಾಲೂಕಿನ ಶಂಕರನಾರಾಯಣ ಗ್ರಾಮದ ನಾಗರತ್ನ, ದೇವಲ್ಕುಂದ ಗ್ರಾಮದ ಸುಮನ, ಮುತ್ತಕ್ಕ ಶೆಡ್ತಿ, ಹೊಸೂರು ಗ್ರಾಮದ ಚೈತ್ರಾ ನಾಯ್ಕ, ನೂಜಾಡಿ ಗ್ರಾಮದ ಶಿವ ದೇವಾಡಿಗ, ಕಂದಾವರ ಗ್ರಾಮದ ರಾಮಕೃಷ್ಣ ಪೂಜಾರಿ ಇವರ ಮನೆಗಳಿಗೂ ನಿನ್ನೆಯ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು ಒಟ್ಟಾರೆ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಮಿಗೆ ಬಂದ ಮಾಹಿತಿ ತಿಳಿಸಿವೆ.
ಇಂದು ಬೆಳಗಿನವರೆಗೆ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೪ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News