ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ: ರೈತರು, ಮೀನುಗಾರರಿಗೆ ಅಗತ್ಯ ಸೂಚನೆಗಳು

Update: 2022-05-18 16:15 GMT

ಉಡುಪಿ : ಮೂರು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮೇ 19ರಂದು  ರೆಡ್ ಅಲರ್ಟ್ ಹಾಗೂ 20ರಂದು ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ರೈತರು ಹಾಗೂ ಮೀನುಗಾರರಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತರು ಮುಂದಿನ ಎರಡು-ಮೂರು ದಿನಗಳ ತಮ್ಮೆಲ್ಲಾ ಕೃಷಿ ಚಟುವಟಿಕೆಗಳನ್ನು -ಬೀಜ ಬಿತ್ತುವುದು, ಸ್ಪ್ರೇ ಮಾಡುವುದು, ರಾಸಾಯನಿಕಗಳ ಸಿಂಪಡಣೆ ಹಾಗೂ ಕೊಯ್ಲು ಇತ್ಯಾದಿ- ಮುಂದೂಡುವಂತೆ ತಿಳಿಸಲಾಗಿದೆ.

ಎರಡೂ ಜಿಲ್ಲೆಗಳ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅಡಿಕೆ ಬೆಳೆಗಾರರು ಕೊಳೆರೋಗದಿಂದ ಪಾರಾಗಲು ನೀರು ನಿಲ್ಲದೇ ಹರಿದುಹೋಗುವಂತೆ ತೋಡು ಮಾಡುವಂತೆ ತಿಳಿಸಲಾಗಿದೆ.

ಇದರೊಂದಿಗೆ ಮಳೆಯ ಮುನ್ಸೂಚನೆ, ಕೃಷಿ ಸಲಹೆಗಳಿಗಾಗಿ ರೈತರು ಹಾಗೂ ಸಾರ್ವಜನಿಕರು ‘ಮೇಘದೂತ್ (Meghdooth)’ ಆ್ಯಪ್ ಮತ್ತು ಬಿರುಗಾಳಿ ಮುನ್ಸೂಚನೆಗಾಗಿ ‘ದಾಮಿನಿ(Damini)’ ಆ್ಯಪ್‌ನ್ನು ಉಪಯೋಗಿಸುವಂತೆ ಸಲಹೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News