ಮಾಲಿನ್ಯದಿಂದ ವರ್ಷಕ್ಕೆ 9 ಮಿಲಿಯನ್ ಜನತೆ ಸಾವು: ಆಫ್ರಿಕಾದಲ್ಲಿ ಹೆಚ್ಚಿನ ಜೀವಹಾನಿ; ಅಧ್ಯಯನ ವರದಿ

Update: 2022-05-18 16:22 GMT
PHOTO CREDIT:AP

ನ್ಯೂಯಾರ್ಕ್, ಮೇ 18: ಹದಗೆಡುತ್ತಿರುವ ಹೊರಾಂಗಣ ವಾಯುಮಾಲಿನ್ಯ ಮತ್ತು ವಿಷಕಾರಿ ಸೀಸದಿಂದ ಆಗುವ ವಾರ್ಷಿಕ ಸಾವಿನ ಪ್ರಮಾಣವನ್ನು 2015ರಿಂದ ಪ್ರತೀ ವರ್ಷ 9 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದು ಪರಿಸರ ಮಾಲಿನ್ಯ ಸಮಸ್ಯೆ ನಿಭಾಯಿಸುವಲ್ಲಿ ಇದುವರೆಗೆ ಮಾಡಿದ ಪ್ರಗತಿಗೆ ಪ್ರತಿಕೂಲವಾಗಿದೆ ಎಂದು ವಿಜ್ಞಾನಿಗಳ ತಂಡವೊಂದು ಮಂಗಳವಾರ ವರದಿ ಮಾಡಿದೆ.

    
ಜಾಗತಿಕ ಮರಣ ಮತ್ತು ಮಾಲಿನ್ಯ ಮಟ್ಟಗಳ ಕುರಿತಾದ ದತ್ತಾಂಶದ ವಿಜ್ಞಾನಿಗಳ ವಿಶ್ಲೇಷಣೆಯ ಪ್ರಕಾರ, ಉದ್ಯಮ ಪ್ರಕ್ರಿಯೆಯ ಜತೆಗೆ ನಗರೀಕರಣದಿಂದ ಆಗುವ ವಾಯು ಮಾಲಿನ್ಯವು 2015ರಿಂದ 2019ರವರೆಗೆ ಮಾಲಿನ್ಯಕ್ಕೆ ಸಂಬಂಧಿಸಿದ ಸಾವಿನ ಪ್ರಮಾಣದಲ್ಲಿ 7% ಹೆಚ್ಚಳಕ್ಕೆ ಕಾರಣವಾಗಿದೆ .

ನಾವು ಮುಚ್ಚಿದ ಪಾತ್ರೆಯೊಳಗೆ ಕುಳಿತು ನಿಧಾನವಾಗಿ ಉರಿಯುತ್ತಿದ್ದೇವೆ’ ಎಂದು ಅಧ್ಯಯನ ವರದಿಯ ಸಹಲೇಖಕ ಮತ್ತು ‘ಪ್ಯೂರ್ ಅರ್ಥ್’ ಸ್ವಯಂ ಸೇವಾ ಸಂಘಟನೆಯ ಮುಖ್ಯಸ್ಥ ರಿಚರ್ಡ್ ಫ್ಯೂಲ್ಲರ್ ಹೇಳಿದ್ದಾರೆ. ಆದರೆ ಹವಾಮಾನ ಬದಲಾವಣೆ, ಮಲೇರಿಯಾ, ಅಥವಾ ಎಚ್ಐವಿಗೆ ಹೋಲಿಸಿದರೆ ನಾವು ಪರಿಸರ ಮಾಲಿನ್ಯಕ್ಕೆ ಹೆಚ್ಚಿನ ಗಮನ ನೀಡಿಲ್ಲ ಎಂದವರು ಹೇಳಿದ್ದಾರೆ.
    
ಈ ಹಿಂದೆ, 2017ರಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲೂ ಮಾಲಿನ್ಯದಿಂದ ಸಂಭವಿಸುವ ಸಾವಿನ ಪ್ರಮಾಣವನ್ನು ವರ್ಷಕ್ಕೆ ಸುಮಾರು 9 ಮಿಲಿಯ ಅಥವಾ ವಿಶ್ವದಾದ್ಯಂತ ಸಂಭವಿಸುವ 6 ಸಾವಿನಲ್ಲಿ ಒಂದು ಮಾಲಿನ್ಯದಿಂದ ಉಂಟಾಗುತ್ತದೆ ಮತ್ತು ಇದರಿಂದ ಜಾಗತಿಕ ಆರ್ಥಿಕತೆಗೆ ಸುಮಾರು 4.6 ಶತಕೋಟಿ ಡಾಲರ್ ವೆಚ್ಚದ ಹೊರೆ ಬೀಳುತ್ತದೆ ಎಂದು ಅಂದಾಜಿಸಲಾಗಿತ್ತು. ಜಾಗತಿಕ ಸಾವಿನ ಪ್ರಮಾಣ ಗಮನಿಸಿದರೆ ಮಾಲಿನ್ಯ ಮತ್ತು ಧೂಮಪಾನ ಒಂದೇ ರೀತಿಯಾಗಿದೆ. ಕೋವಿಡ್-19 ಸಾಂಕ್ರಾಮಿಕ ಆರಂಭವಾದಂದಿನಿಂದ ಸೋಂಕಿನಿಂದ ಜಾಗತಿಕವಾಗಿ ಸುಮಾರು 6.7 ಮಿಲಿಯನ್ ಜನತೆ ಮೃತಪಟ್ಟಿದ್ದಾರೆ.

ಕಾಯಿಲೆಗೆ ಸಂಬಂಧಿಸಿದ 2019ರ ಜಾಗತಿಕ ಅಂಕಿಅಂಶ ಹಾಗೂ ಮಾಲಿನ್ಯದ ಒಟ್ಟು ಪರಿಣಾಮ ಮತ್ತು ಸಾವಿನ ಲೆಕ್ಕಾಚಾರಕ್ಕೆ ಸಂಬಂಧಿಸಿ ಈಗ ವಾಷಿಂಗ್ಟನ್ ವಿವಿ ನಡೆಸುತ್ತಿರುವ ಅಧ್ಯಯನದ ವಿಶ್ಲೇಷಣೆಯ ಆಧಾರದಲ್ಲಿ ನಡೆಸಿದ ಅಧ್ಯಯನ ವರದಿಯನ್ನು ‘ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್’   ಎಂಬ ಆನ್‌ಲೈನ್  ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ. ಹೊಸ ವಿಶ್ಲೇಷಣೆಯು ಮಾಲಿನ್ಯದ ಕಾರಣಗಳಿಗೆ ಹೆಚ್ಚು ನಿರ್ಧಿಷ್ಟ ಗಮನ ನೀಡಿದೆ. ಒಳಾಂಗಣ ಹೊಗೆ ಅಥವಾ ಒಳಚರಂಡಿಯಂತಹ ಸಾಂಪ್ರದಾಯಿಕ ಮಾಲಿನ್ಯಕಾರಕಗಳನ್ನು ಆಧುನಿಕ ಮಾಲಿನ್ಯಕಾರಗಳಾದ ಕೈಗಾರಿಕಾ ವಾಯು ಮಾಲಿನ್ಯ ಹಾಗೂ ವಿಷಕಾರಿ ರಾಸಾಯನಿಕಗಳಿಂದ ಪ್ರತ್ಯೇಕಿಸಿದೆ.
  
ಕೆಲವು ಪ್ರಮುಖ ವಿಷಯಗಳು ಇಲ್ಲಿವೆ: 

ನೀರು ಮತ್ತು ಒಳಾಂಗಣ ಗಾಳಿ:  ಜಾಗತಿಕವಾಗಿ ಸಾಂಪ್ರದಾಯಿಕ ಮಾಲಿನ್ಯಕಾರಕಗಳಿಂದ ಸಾವುಗಳು ಕಡಿಮೆಯಾಗುತ್ತಿವೆ. ಆದರೂ ಆಫ್ರಿಕಾ ಮತ್ತು ಇತರ ಕೆಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇವು ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ. ಕಲುಷಿತ ನೀರು, ಮಣ್ಣು ಮತ್ತು ಒಳಾಂಗಣ ಗಾಳಿಯು ಚಾಡ್, ಮಧ್ಯ ಆಫ್ರಿಕನ್ ಗಣರಾಜ್ಯ ಮತ್ತು ನೈಗರ್ ಈ ಮೂರನ್ನು ಮಾಲಿನ್ಯಕ್ಕೆ ಸಂಬಂಧಿಸಿದ ಅತೀ ಹೆಚ್ಚು ಸಾವು ಸಂಭವಿಸಿದ ದೇಶಗಳ ಪಟ್ಟಿಗೆ ಸೇರಿಸಿದೆ ಎಂದು ಅಂಕಿಅಂಶ ತಿಳಿಸಿದೆ.

ಒಳಾಂಗಣ ವಾಯುಮಾಲಿನ್ಯ ಸಮಸ್ಯೆ ನಿಯಂತ್ರಿಸಲು ಮತ್ತು ನೈರ್ಮಲ್ಯದಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದ ಸರಕಾರಿ ಕಾರ್ಯಕ್ರಮಗಳು ಹಲವೆಡೆ ಸಾವಿನ ಪ್ರಮಾಣವನ್ನು ತಗ್ಗಿಸಲು ನೆರವಾಗಿವೆ. ಇಥಿಯೋಪಿಯಾ ಮತ್ತು ನೈಜೀರಿಯಾದಲ್ಲಿ ಇಂತಹ ಪ್ರಯತ್ನಗಳಿಂದಾಗಿ ಇದಕ್ಕೆ ಸಂಬಂಧಿಸಿದ ಸಾವಿನ ಪ್ರಮಾಣ 2009ರಿಂದ 2019ರ ನಡುವಿನ ಅವಧಿಯಲ್ಲಿ ಮೂರನೇ ಎರಡರಷ್ಟು ಕಡಿಮೆಗೊಂಡಿದೆ. ಈ ಮಧ್ಯೆ, ಭಾರತ ಸರಕಾರ ಕಟ್ಟಿಗೆ ಸುಡುವ ಸ್ಟವ್‌ಗಳ  ಬದಲು ಗ್ಯಾಸ್ ಸಂಪರ್ಕ ನೀಡುವ ಯೋಜನೆಯನ್ನು 2016ರಿಂದ ಆರಂಭಿಸಿದೆ. 

ಆಧುನಿಕ ಮಾಲಿನ್ಯಕಾರಗಳು:

ಘನ ಲೋಹ, ಕೃಷಿ ರಾಸಾಯನಿಕ ಮತ್ತು ಪಳೆಯುಳಿಕೆ ಇಂಧನದಂತಹ ಆಧುನಿಕ ಮಾಲಿನ್ಯಕಾರಕಗಳಿಂದ ಆಗುವ ಸಾವಿನ ಪ್ರಮಾಣ ಆಕಾಶದೆತ್ತರಕ್ಕೆ ತಲುಪಿದ್ದು 2000ನೇ ಇಸವಿಯಿಂದ 66% ಏರಿಕೆಯಾಗಿದೆ ಎಂದು ಅಧ್ಯಯನ ವರದಿಯ ಸಹ ಲೇಖಕ ರ್ಯಾಚೆ ಕುಪ್ಕ (ನ್ಯೂಯಾರ್ಕ್ ಮೂಲದ ಆರೋಗ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಜಾಗತಿಕ ಒಕ್ಕೂಟದ ಕಾರ್ಯನಿರ್ವಾಕ ನಿರ್ದೇಶಕ) ಹೇಳಿದ್ದಾರೆ.
  
ಹೊರಾಂಗಣ ವಾಯು ಮಾಲಿನ್ಯದ ವಿಷಯಕ್ಕೆ ಬಂದರೆ, ಬ್ಯಾಂಕಾಕ್, ಚೀನಾ, ಮೆಕ್ಸಿಕೋದ ರಾಜಧಾನಿ ಸಹಿತ ಕೆಲವು ಪ್ರಮುಖ ರಾಜಧಾನಿ ನಗರಗಳು ಒಂದಿಷ್ಟು ಯಶಸ್ಸು ಸಾಧಿಸಿದೆ. ಆದರೆ ಕೆಲವು ಸಣ್ಣ ನಗರಗಳಲ್ಲಿ ಮಾಲಿನ್ಯದ ಮಟ್ಟ ನಿರಂತರ ಹೆಚ್ಚುತ್ತಿದೆ. ಜನಸಂಖ್ಯೆಗೆ ಹೊಂದಿಕೊಂಡ ಮರಣದ ಪ್ರಮಾಣವನ್ನು ಆಧರಿಸಿ ನಡೆಸಿದ ಅಧ್ಯಯನದಲ್ಲಿ ಮಾಲಿನ್ಯ ಸಂಬಂಧಿ ಸಾವು ಅತೋ ಹೆಚ್ಚು ಸಂಭವಿಸಿದ 10 ದೇಶಗಳ ಪಟ್ಟಿ ತಯಾರಿಸಲಾಗಿದೆ.

1. ಚಾಡ್, 2. ಮಧ್ಯ ಆಫ್ರಿಕನ್ ಗಣರಾಜ್ಯ, 3. ನೈಗರ್, 4. ಸೊಲೊಮನ್ ದ್ವೀಪಗಳು, 5. ಸೊಮಾಲಿಯಾ, 6. ದಕ್ಷಿಣ ಆಫ್ರಿಕಾ, 7. ಉತ್ತರ ಕೊರಿಯಾ. 8. ಲೆಸೊಥೊ, 9 ಬಲ್ಗೇರಿಯಾ ಮತ್ತು 10 ಬುರ್ಕಿನಾ ಫಾಸೊ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News