ನಾಟಿ ಮಾಡಲು ರೈತರ ನಿರಾಕರಣೆ: ಶ್ರೀಲಂಕಾದಲ್ಲಿ ಮಾನವ ನಿರ್ಮಿತ ಆಹಾರದ ಬಿಕ್ಕಟ್ಟು

Update: 2022-05-18 16:32 GMT
PHOTO:ALJAZEERA

ಕೊಲಂಬೊ, ಮೇ 18: ರಾಸಾಯನಿಕ ಗೊಬ್ಬರಗಳ ಮೇಲೆ ಶ್ರೀಲಂಕಾ ಸರಕಾರ ನಿಷೇಧ ಹೇರಿದ್ದರಿಂದ ಅಕ್ಕಿ ಇಳುವರಿ 50% ಕಡಿಮೆಯಾಗಿದೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಕೃಷಿ ಕಾಯಕದ ಉತ್ಪಾದನಾ ವೆಚ್ಚ ಅಧಿಕವಾಗಿರುವುದರಿಂದ ಈ ಬಾರಿ ನಾಟಿ ಮಾಡುವುದನ್ನು ನಿಲ್ಲಿಸುವ ನಿರ್ಧಾರಕ್ಕೆ ರೈತರು ಬಂದಿದ್ದಾರೆ ಎಂದು ವರದಿಯಾಗಿದೆ. 

ಈ ಬಾರಿಯ ಕೃಷಿಯಲ್ಲಿ ಸಂಪೂರ್ಣ ನಷ್ಟವಾಗಿದೆ ಎಂದು ದಕ್ಷಿಣ ಶ್ರೀಲಂಕಾದ ಹಂಬನ್ತೋಟ ಜಿಲ್ಲೆಯ ವಲ್ಸಪುಗಲ ಗ್ರಾಮದ ರೈತ ಸಮರವಿಕ್ರಮ ನಿರಾಶೆ ತೋಡಿಕೊಂಡಿದ್ದಾರೆ. 20 ಎಕರೆ ಕೃಷಿ ಭೂಮಿ ಹೊಂದಿರುವ ಅವರು ಭತ್ತ ಮತ್ತು ಬಾಳೆಕಾಯಿ ಬೆಳೆಸುತ್ತಾರೆ. ಆದರೆ ಈ ಬಾರಿ ಅಗತ್ಯದ ಸಂದರ್ಭದಲ್ಲಿ ರಸಗೊಬ್ಬರ ಲಭಿಸದ ಕಾರಣ ಬೆಳೆ ಸೊರಗಿದೆ. 

ಪ್ರತೀ ವರ್ಷ ಸುಮಾರು 37,000 ಕಿ.ಗ್ರಾಂನಷ್ಟು ಬಾಳೆಕಾಯಿ ಬೆಳೆ ದೊರಕುತ್ತಿದ್ದರೆ ಈ ಬಾರಿ ಕೇವಲ 6000 ಕಿ.ಗ್ರಾಂ ಮಾತ್ರ ದೊರಕಬಹುದು. ಎಲ್ಲವೂ ಹೋಯಿತು. ಮುಂದೇನು ಮಾಡುವುದೆಂದು ತಿಳಿಯುವುದಿಲ್ಲ. ಕೃಷಿಯ ಉಸಾಬರಿಯೇ ಬೇಡ. ವಾಣಿಜ್ಯ ಉದ್ದೇಶದ ಕೃಷಿ ಕಾಯಕವನ್ನು ತ್ಯಜಿಸಿ ಈ ಬಾರಿ ಕೇವಲ ತನ್ನ ಕುಟುಂಬಕ್ಕೆ ಸಾಲುವಷ್ಟು ಭತ್ತ ಮಾತ್ರ ಬೆಳೆಯಲು ಉದ್ದೇಶಿಸಿರುವುದಾಗಿ ಎಂದವರು ಹೇಳಿದ್ದಾರೆ. 

ಈ ಬಾರಿಯ ಮುಂಗಾರು ಅವಧಿಯಲ್ಲಿ ಕೃಷಿ ಮಾಡದಿರಲು ವಲ್ಸಪುಗಲ ಗ್ರಾಮದ ಬಹುತೇಕ ರೈತರು ನಿರ್ಧರಿಸಿದ್ದಾರೆ. ರಸಗೊಬ್ಬರ ನಿಷೇಧವು ಬೆಳೆ ವೈಫಲ್ಯ, ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಕಾರ್ಯ ನಡೆಸುವುದರಲ್ಲಿ ಅರ್ಥವಿಲ್ಲ. ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಬದಲಾಗಿರುವುದು ಇಳುವರಿಯಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿದೆ ಎಂದು ರೈತರು ಹೇಳಿದ್ದಾರೆ. ಹಂಬನ್ತೊಟ್ಟ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮ, ಅನುರಾಧಪುರ ಮತ್ತು ಪೊಲೊನರುವ ಜಿಲ್ಲೆಯ ಬಹುತೇಕ ರೈತರು ಈ ಬಾರಿ ಕೃಷಿ ಚಟುವಟಿಕೆ ಸ್ಥಗಿತಕ್ಕೆ ನಿರ್ಧರಿಸಿದ್ದಾರೆ ಎಂದು ಎನ್ಜಿಒ ಸಂಸ್ಥೆ ‘ದಿ ಮೂವ್ಮೆಂಟ್ ಫಾರ್ ಲ್ಯಾಂಡ್ ಆ್ಯಂಡ್ ಅಗ್ರಿಕಲ್ಚರಲ್ ರಿಫಾರ್ಮ್’ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News