ಭಾರತದಲ್ಲಿ ಅದಾನಿ ಗ್ರೂಪ್‌ ಗೆ 2.2 ಲಕ್ಷ ಕೋಟಿ ರೂ. ಸಾಲ: ಬ್ಯುಸಿನೆಸ್ ಸ್ಟ್ಯಾಂಡರ್ಡ್‌ ವರದಿ

Update: 2022-05-18 17:15 GMT

ಹೊಸದಿಲ್ಲಿ: ಮಾರ್ಚ್ ಅಂತ್ಯದ ವೇಳೆಗೆ 2.2 ಲಕ್ಷ ಕೋಟಿ ರೂ.ಗಳ ಒಟ್ಟು ಸಾಲದೊಂದಿಗೆ, ಅದಾನಿ ಗ್ರೂಪ್ ಭಾರತದಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ವ್ಯವಹಾರಗಳಲ್ಲಿ ಒಂದಾಗಿದೆ.

ಬ್ಯುಸಿನೆಸ್ ಸ್ಟ್ಯಾಂಡರ್ಡ್‌ ವರದಿಯ ಪ್ರಕಾರ, ತನ್ನ ವ್ಯವಹಾರವನ್ನು ವಿಸ್ತರಿಸಲು ಸಾಲದ ಹಣಕಾಸುವನ್ನು ಬಳಸುವುದರಿಂದ, ಅದಾನಿ ಸಮೂಹದ ಒಟ್ಟು ಸಾಲವು ವರ್ಷದಿಂದ ವರ್ಷಕ್ಕೆ ಶೇಕಡಾ 42 ರಷ್ಟು ಹೆಚ್ಚಾಗಿದೆ.

ಅದಾನಿ ಸಮೂಹದ ಸಾಲ-ಇಕ್ವಿಟಿ ಅನುಪಾತವು ನಾಲ್ಕು ವರ್ಷಗಳ ಗರಿಷ್ಠ 2.36 ಇದೆ, ಇದು ಒಂದು ವರ್ಷದ ಹಿಂದೆ 2.02 ರಷ್ಟಿತ್ತು ಎಂದು ವರದಿಯ ಅಂಕಿ ಅಂಶ ತೋರಿಸಿದೆ.

ಹೆಚ್ಚಿನ ಸಾಲದ ಹೊರತಾಗಿಯೂ, ಅದಾನಿ ಸಮೂಹದ ಗಳಿಕೆಯ ಹಿನ್ನೆಲೆಯಲ್ಲಿ ಸಾಲ-ಸೇವಾ ಸಾಮರ್ಥ್ಯ ಪ್ರಮುಖ ಸುಧಾರಣೆಯನ್ನು ಕಂಡಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಅಲ್ಲದೆ, ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬಡ್ಡಿದರಗಳ ಕುಸಿತವು ಸಾಲಗಳ ಬಡ್ಡಿ ವೆಚ್ಚವನ್ನು ಕಡಿಮೆಗೊಳಿಸಿದೆ. 

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ನೇತೃತ್ವದ ಗುಂಪು ಇತ್ತೀಚೆಗೆ Holcim ನ ಭಾರತೀಯ ಅಂಗಸಂಸ್ಥೆಗಳಾದ ACC ಸಿಮೆಂಟ್ಸ್ ಮತ್ತು ಅಂಬುಜಾ ಸಿಮೆಂಟ್ಸ್ ಅನ್ನು 10.5 ಶತಕೋಟಿ ಡಾಲರ್‌ ಗೆ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಅದಾನಿ ಗ್ರೂಪ್ ಅನ್ನು ದೇಶೀಯ ಸಿಮೆಂಟ್ ವಲಯದಲ್ಲಿ ಎರಡನೇ ಅತಿ ದೊಡ್ಡ ಪಾತ್ರಧಾರಿಯನ್ನಾಗಿ ಮಾಡಿದೆ. 

ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಪ್ರಸ್ತುತ $102 ಶತಕೋಟಿ ನಿವ್ವಳ ಮೌಲ್ಯ ಹೊಂದಿರುವ ಉದ್ಯಮಿ ಗೌತಮ್ ಅದಾನಿ, ಡೇಟಾ ಕೇಂದ್ರಗಳು, ಡಿಜಿಟಲ್ ಸೇವೆಗಳು, ಸಿಮೆಂಟ್ ಮತ್ತು ಮಾಧ್ಯಮಗಳಂತಹ ಹೊಸ ಕ್ಷೇತ್ರಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News