×
Ad

ನಿರೀಕ್ಷೆ ನಿಜವಾಗಿದ್ದು ಖುಷಿ ನೀಡಿದೆ: 625 ಅಂಕ ಗಳಿಸಿದ ಮುಲ್ಕಿಯ ಅಕ್ಷತಾ ಕಾಮತ್

Update: 2022-05-19 15:59 IST

ಮಂಗಳೂರು, ಮೇ 19: ಎಸೆಸೆಲ್ಸಿ ಪರೀಕ್ಷೆಯ ಎಲ್ಲಾ ವಿಷಯಗಳ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೆ. ಹಾಗಾಗಿ ಸಂಪೂರ್ಣ ಅಂಕ ಗಳಿಸುವ ನಿರೀಕ್ಷೆ ಇತ್ತು. ಹಾಗಿದ್ದರೂ ಪರೀಕ್ಷಾ ಮೌಲ್ಯಮಾಪಕರು ಅದು ಹೇಗೆ ಅಂಕ ನೀಡುವರೋ ಎಂಬ ಅಳುಕಿತ್ತು. ಆದರೆ ಇದೀಗ ನಿರೀಕ್ಷೆ ನಿಜಾಗಿರುವ ಬಗ್ಗೆ ತುಂಬಾ ಖುಷಿಯಾಗಿದೆ ಎಂದು ಮುಲ್ಕಿಯ ವಿ. ಅಕ್ಷತಾ ಕಾಮತ್ ‘ವಾರ್ತಾಭಾರತಿ’ ಜತೆ ಸಂತಸ ಹಂಚಿಕೊಂಡಿದ್ದಾರೆ.

ಮುಲ್ಕಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಅಕ್ಷತಾ ಕಾಮತ್ ಉದ್ಯಮಿ ಶಶಿಧರ ಕಾಮತ್ ಹಾಗೂ ಗೃಹಿಣಿ ನಂದಿತಾ ಎಸ್. ಕಾಮತ್‌ ಅವರ ಪ್ರಥಮ ಪುತ್ರಿ.

ಮುಂದೆ ವೈದ್ಯೆಯಾಗಬೇಕೆಂಬುದು ಅಕ್ಷತಾರ ಕನಸಾಗಿದ್ದರೆ, ಆಕೆಯ ಕನಸನ್ನು ನನಸು ಮಾಡಲು ತಮ್ಮಿಂದಾದ ಎಲ್ಲ ಸಹಕಾರ, ಪ್ರಯತ್ನ ಮಾಡುವುದಾಗಿ ಆಕೆಯ ತಂದೆತಾಯಿ ಪ್ರತಿಕ್ರಿಯಿಸಿದ್ದಾರೆ.

ಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿಯ ಜತೆಗೆ ತಮ್ಮ ಮಗಳಿಗೆ ಬಾಲ್ಯದಿಂದಲೇ ಸಂಗೀತ, ನೃತ್ಯ, ಚಿತ್ರಕಲೆಯಲ್ಲಿ ತೀವ್ರ ಆಸಕ್ತಿ ಎನ್ನುವ ಶಶಿಧರ ಕಾಮತ್, ಅಕ್ಷತಾರವರು ಕರ್ಣಾಟಿಕ್ ಸಂಗೀತ ಹಾಗೂ ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಮಾತ್ರವಲ್ಲದೆ ಚಿತ್ರಕಲೆಯಲ್ಲಿ ಸೀನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

‘‘ನಾನು ಶಾಲಾ ಮಟ್ಟದಲ್ಲಿ ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ತನ್ನ ಶಿಕ್ಷಕರು, ಪೋಷಕರ ಬೆಂಬಲ ಸಾಕಷ್ಟಿದೆ. ಶಾಲೆಯಲ್ಲಿ ಶಿಕ್ಷಕರು ಮಾಡುತ್ತಿದ್ದ ಪಾಠಗಳನ್ನು ಚೆನ್ನಾಗಿ ಮನನ ಮಾಡಿಕೊಳ್ಳುತ್ತಿದ್ದ ಜತೆಗೆ ಮನೆಯಲ್ಲೂ ಅಭ್ಯಾಸ ಮಾಡುತ್ತಿದ್ದೆ’’ ಎಂದು ಅಕ್ಷತಾ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News