ಖಾಸಗಿ ಬಿಟ್ಟು ಸರಕಾರಿ ಶಾಲೆಯಲ್ಲಿ ಕಲಿತ ವೈಷ್ಣವಿ ಎಸೆಸೆಲ್ಸಿ ಟಾಪರ್!

Update: 2022-05-19 14:52 GMT
ವೈಷ್ಣವಿ

ಕುಂದಾಪುರ : ಎಲ್‌ಕೆಜಿಯಿಂದ ಏಳನೇ ತರಗತಿಯವರೆಗೆ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿ, ಬಳಿಕ ತನ್ನ ಅಮ್ಮ ಓದಿದ ಸಿದ್ದಾಪುರ ಸರಕಾರಿ ಪ್ರೌಢಶಾಲೆಗೆ ಸೇರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ಟಾಪರ್ ಆಗಿ ಸಾಧನೆ ಮಾಡಿದ್ದಾರೆ.

ವಸಂತ ಕುಮಾರ್ ಶೆಟ್ಟಿ ಹಾಗೂ ಸುಷ್ಮಾ ವಿ.ಶೆಟ್ಟಿ ದಂಪತಿ ಪುತ್ರಿ ವೈಷ್ಣವಿ ಶೆಟ್ಟಿ, ಎಲ್‌ಕೆಜಿಯಿಂದ ಏಳನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಶಂಕರ ನಾರಾಯಣ ಖಾಸಗಿ ಶಾಲೆಯಲ್ಲಿ ಪಡೆದಿದ್ದರು. ನಂತರ ತಾಯಿಯ ಮಾತಿನಂತೆ ಆ ಶಾಲೆ ತೊರೆದು ಸಿದ್ದಾಪುರ ಸಿದ್ದಾಪುರ ಸರಕಾರಿ ಪ್ರೌಢ ಶಾಲೆಗೆ ದಾಖಲಾಗಿದ್ದರು. ಸದ್ಯ ಬೆಂಗಳೂರಿನಲ್ಲಿನ ಸಂಬಂಧಿಕರ ಮನೆಯಲ್ಲಿರುವ ವೈಷ್ಣವಿ, ರಿಸಲ್ಟ್ ನೋಡಿ ಫುಲ್‌ಖುಷ್ ಆಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೈಷ್ಣವಿ ಶೆಟ್ಟಿ, ತಂದೆತಾಯಿಯ ಪ್ರೋತ್ಸಾಹ ಹಾಗೂ ಶಾಲಾ ಶಿಕ್ಷಕರ ಕಾಳಜಿಯುತ ಗುಣಮಟ್ಟ ಶಿಕ್ಷಣದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಪಿಯುಸಿಯಲ್ಲಿ ಪಿಸಿಎಂಬಿ ತೆಗೆದು ಕೊಂಡು ಮೆಡಿಕಲ್ ಓದುವ ಗುರಿ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

‘ಶಾಲೆಯಿಂದ ಮನೆಗೆ ಮರಳಿದ ನಂತರ ಆಯಾದಿನದ ನಿತ್ಯ ಪಠ್ಯ ಚಟುವಟಿಕೆಯನ್ನು ಆವತ್ತೇ ಮುಗಿಸುತ್ತಿದ್ದೆ. ಬೆಳಗ್ಗೆ ೫ಗಂಟೆಗೆ ಎದ್ದು ಅರ್ಧ ಗಂಟೆ ಧ್ಯಾನ ಮಾಡಿ, ಓದಲು ಕೂರುತ್ತಿದ್ದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗೂ ಸರಿಯಾದ ಉತ್ತರ ಬರೆದಿದ್ದು, ಮೌಲ್ಯಮಾಪನ ಹೇಗೋ ಎನ್ನುವ ಭಯ ಇತ್ತು. ನಿರೀಕ್ಷಿತ ವಾಗಿ ೬೨೫ ಅಂಕ ಬಂದಿರುವುದು ಖುಷಿ ಕೊಟ್ಟಿದೆ. ಸಿದ್ದಾಪುರ ಸರಕಾರಿ  ಪ್ರೌಢ ಶಾಲೆಯಲ್ಲಿ ನನಗೆ ಸಿಕ್ಕ ಉಪನ್ಯಾಸಕರು ಅತ್ಯುತ್ತಮ ಶಿಕ್ಷಕರಾಗಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News