ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ; ಹಲವೆಡೆ ಕೃತಕ ನೆರೆ: ಜನಜೀವನ ಅಸ್ತವ್ಯಸ್ತ

Update: 2022-05-19 15:24 GMT

ಉಡುಪಿ : ರಾತ್ರಿಯಿಂದ ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಗುರುವಾರ ಹಲವು ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಗರದ ಬೈಲಕೆರೆ, ಮಠದಬೆಟ್ಟು, ಕಲ್ಮಾಡಿ, ನಿಟ್ಟೂರುಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಗದ್ದೆಗಳು ಮಳೆ ನೀರಿನಿಂದ ಆವೃತವಾಗಿವೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೇಲಗಳಲ್ಲಿಯೂ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

ನಗರದ ಕಲ್ಸಂಕ -ಗುಂಡಿಬೈಲುವಿನಲ್ಲಿ ಇತ್ತೀಚೆಗೆ ನಡೆದ ವಾರಾಹಿ ಯೋಜನೆ ಪೈಪ್‌ಲೈನ್ ಕಾಮಗಾರಿಯ ಮಣ್ಣು ಕುಸಿದು ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಕಾಮಗಾರಿಯ ಒಂದು ಭಾಗ ಸಂಪೂರ್ಣ ಕುಸಿದು ಹೊಂಡಮಯ ವಾಗಿದೆ. ಇದರಿಂದ ಇಲ್ಲಿನ ರಸ್ತೆಯೊಂದು ಸಂಪರ್ಕ ಕಳೆದುಕೊಂಡಿದೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲಿಸಿ ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಭಾರೀ ಮಳೆಯಿಂದಾಗಿ ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಸಮೀಪ ಗುರುವಾರ ಬೆಳಗ್ಗೆ ಬೃಹತ್ ಗಾತ್ರದ ಮರವೊಂದು ಮುಖ್ಯರಸ್ತೆಗೆ ಉರುಳಿ ಬಿದ್ದಿತ್ತು. ಇದರಿಂದ ಕೆಲಕಾಲ ವಾಹನ ಸಂಚಾಲಕ್ಕೆ ತೊಂದರೆ ಉಂಟಾಗಿತ್ತು. ಬಳಿಕ ಮರ ತೆರವುಗೊಳಿಸುವ ಪ್ರಕ್ರಿಯೆ ನಡೆಸಲಾಯಿತು.

ಕುಂದಾಪುರದಲ್ಲೂ ಭಾರೀ ಮಳೆ

ಬುಧವಾರ ತಡರಾತ್ರಿಯಿಂದ ಆರಂಭವಾದ ಮಳೆ ಗುರುವಾರ ಮುಂಜಾನೆ ಯಿಂದಲೂ ನಿರಂತರವಾಗಿ ಸುರಿದ ಪರಿಣಾಮ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

ಮುಂಜಾನೆಯಿಂದ ಬಿಟ್ಟುಬಿಡದೇ ಸುರಿದ ಮಳೆಯಿಂದ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ -೬೬ರ ವಿವಿಧ ಕಡೆ ಕೃತಕ ಕೆರೆ ಸೃಷ್ಟಿಯಾಗಿತ್ತು. ಕುಂದಾಪುರ ಶಾಸ್ತ್ರೀ ವೃತ್ತದ ಬಳಿ, ಕೋಟೇಶ್ವರ, ಬೀಜಾಡಿ, ಅಂಕದಕಟ್ಟೆ, ಹಂಗಳೂರು ಬಳಿ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ನೀರು ಶೇಖರಗೊಂಡಿತ್ತು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭದ ದಿನದಿಂದ ಈವರೆಗೂ ಸಮಸ್ಯೆ ಕೇಂದ್ರವಾಗಿರುವ ಕುಂದಾಪುರ ಬಸ್ರೂರು ಮೂರುಕೈ ಹಾಗೂ ವಿನಾಯಕ ಜಂಕ್ಷನ್, ಟಿಟಿ ರಸ್ತೆಯ ಸಮೀಪದಲ್ಲಿ ಎರಡೂ ಭಾಗದ ಸರ್ವೀಸ್ ರಸ್ತೆ ಸಹಿತ ಅಂಡರ್ ಪಾಸ್ ಕೂಡ ಜಲಾವೃತಗೊಂಡಿತ್ತು. ಇದರಿಂದ ನಗರ ಭಾಗಕ್ಕೆ ಸಂಪರ್ಕಿಸುವ ಹಾಗೂ ನಗರದಿಂದ ಸರ್ವಿಸ್ ರಸ್ತೆ ಮೂಲಕ ವಿವಿಧೆಡೆ ತೆರಳುವ ಮತ್ತು ರಾ.ಹೆದ್ದಾರಿಗೆ ಸಂಪರ್ಕಿಸುವ ವಾಹನ ಸವಾರರು ಪರಿತಪಿಸುವಂತಾಗಿತ್ತು.

ವಾರಾಹಿ ಕಾಮಗಾರಿ ಅವಾಂತರ

ಕುಂದಾಪುರ ತಾಲೂಕಿನ ಕಾಳಾವಾರ ಮೂಲಕ ವಕ್ವಾಡಿ ಮಾರ್ಗವಾಗಿ ನಡೆಯುತ್ತಿರುವ ವಾರಾಹಿ ಕಾಲುವೆ ಕಾಮಗಾರಿಯಿಂದ ಸ್ಥಳೀಯರು ಹಾಗೂ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ.

ಕಾಳಾವರ-ವಕ್ವಾಡಿ ಸಂಪರ್ಕ ರಸ್ತೆಯ ವಿವಿಧೆಡೆ ಹಾಗೂ ವಕ್ವಾಡಿ ಸರಕಾರಿ ಶಾಲೆ ಸಮೀಪದಲ್ಲಿ ತಿರುವಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದೆ. ರಾಡಿಯಾದ ರಸ್ತೆಯಲ್ಲಿ ದ್ವಿಚಕ್ರ ಹಾಗೂ ಲಘು ವಾಹನಗಳ ಸುಗಮ ಸಂಚಾರಕ್ಕೆ ಬಾರೀ ಅನಾನುಕೂಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News