ಜೈಲುಶಿಕ್ಷೆಗೆ ಗುರಿಯಾಗಿರುವ ಸಿಧು ಪಟಿಯಾಲ ನ್ಯಾಯಾಲಯಕ್ಕೆ ಶರಣು

Update: 2022-05-20 15:37 GMT

ಹೊಸದಿಲ್ಲಿ,ಮೇ 20: ವ್ಯಕ್ತಿಯೋರ್ವ ಸಾವನ್ನಪ್ಪಿದ್ದ 34 ವರ್ಷಗಳಷ್ಟು ಹಳೆಯ ಬೀದಿಜಗಳ ಪ್ರಕರಣದಲ್ಲಿ ಗುರುವಾರ ಸರ್ವೋಚ್ಚ ನ್ಯಾಯಾಲಯದಿಂದ ಒಂದು ವರ್ಷ ಕಠಿಣ ಜೈಲುಶಿಕ್ಷೆಗೆ ಗುರಿಯಾಗಿರುವ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಶುಕ್ರವಾರ ಪಂಜಾಬಿನ ಪಟಿಯಾಲಾ ನ್ಯಾಯಾಲಯಕ್ಕೆ ಶರಣಾದರು. ಇದಕ್ಕೂ ಮುನ್ನ ಅವರು ಆರೋಗ್ಯ ಕಾರಣಗಳನ್ನೊಡ್ಡಿ ಶರಣಾಗತಿಗೆ ಇನ್ನಷ್ಟು ವಾರಗಳ ಕಾಲಾವಕಾಶ ಕೋರಿದ್ದರು.

‌ಶುಕ್ರವಾರ ಸಿಧು ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಶರಣಾಗತಿಗೆ ಹೆಚ್ಚಿನ ಕಾಲಾವಕಾಶ ಕೋರಿದಾಗ ನ್ಯಾ.ಎ.ಎಂ.‌ ಖನ್ವಿಲ್ಕರ್ ಅವರು ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ಆದರೆ,ವಿಷಯವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಉಲ್ಲೇಖಿಸಲು ಸಾಧ್ಯವಾಗಿಲ್ಲ ಎಂದು ಸಿಂಘ್ವಿ ಹೇಳಿದರು.

ಗುರುವಾರ ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಸಿಧು ‘ನ್ಯಾಯಾಲಯದ ಸಾರ್ವಭೌಮತ್ವಕ್ಕೆ ತಲೆ ಬಾಗುತ್ತೇನೆ ’ಎಂದು ಟ್ವೀಟಿಸಿದ್ದರು. ಹೆಚ್ಚಿನ ಕಾಲಾವಕಾಶಕ್ಕೆ ಸಿಧು ಕೋರಿಕೆಯನ್ನು ವಿರೋಧಿಸಿದ ಪಂಜಾಬ ಪರ ವಕೀಲರು,34 ವರ್ಷಗಳೆಂದರೆ ಅಪರಾಧವು ಸತ್ತು ಹೋಗುತ್ತದೆ ಎಂದು ಅರ್ಥವಲ್ಲ. ಈಗ ತೀರ್ಪನ್ನು ಪ್ರಕಟಿಸಲಾಗಿದೆ ಮತ್ತು ಅವರು ಇನ್ನೂ 3-4 ವಾರಗಳ ಸಮಯಾವಕಾಶ ಕೋರುತ್ತಿದ್ದಾರೆ ಎಂದು ಹೇಳಿದರು.

‘ನನ್ನ ಕಕ್ಷಿದಾರರು ಶರಣಾಗುತ್ತಾರೆ ಎಂದು ನಾನು ಹೇಳುತ್ತಿದ್ದೇನೆ. ಅದನ್ನು ಪರಿಗಣಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ’ಎಂದು ಸಿಂಘ್ವಿ ಪೀಠಕ್ಕೆ ತಿಳಿಸಿದರು

‘ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯಕ್ಕೆ ವಿಧ್ಯುಕ್ತ ಅರ್ಜಿಯೊಂದನ್ನು ಸಲ್ಲಿಸಿ ಮತ್ತು ನಾವದನ್ನು ನೋಡುತ್ತೇವೆ’ಎಂದು ನ್ಯಾ.ಖನ್ವಿಲ್ಕರ್ ಹೇಳಿದರು. 1988,ಡಿ.27ರಂದು ಸಿಧು ಮತ್ತು ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಅವರು ಪಾರ್ಕಿಂಗ್ ವಿಷಯದಲ್ಲಿ ಪಟಿಯಾಳಾ ನಿವಾಸಿ ಗುರ್ನಾಮ್ ಸಿಂಗ್ (65) ಜೊತೆ ಜಗಳವಾಡಿದ್ದರು. ಈ ವೇಳೆ ಸಿಧು ಮತ್ತು ಸಂಧು ಗುರ್ನಾಮ್ ಸಿಂಗ್ ಅವರನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದರು. ಸಿಂಗ್ ಬಳಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News