ಪಠ್ಯದಿಂದ ನಾರಾಯಣಗುರು ವಿಷಯ ಕೈಬಿಟ್ಟ ವಿಚಾರ; ಸಮುದಾಯದ ಸಚಿವರು ರಾಜೀನಾಮೆ ನೀಡಲಿ: ರಮಾನಾಥ ರೈ

Update: 2022-05-20 06:22 GMT

ಮಂಗಳೂರು : ಮಾನವತಾವಾದಿ, ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳ ವಿಷಯವನ್ನು 10ನೆ ತರಗತಿ ಪಠ್ಯದಿಂದ ಕೈಬಿಟ್ಟಿರುವ ಪ್ರಮಾದ ನಡೆದಿದ್ದರೆ ಅದಕ್ಕೆ ಪ್ರತಿಯಾಗಿ ಆ ಸಮುದಾಯದ ಸಚಿವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಒತ್ತಾಯ ಮಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಸಮುದಾಯದ ಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿಯ ನಾಯಕರು ತಮ್ಮ ಸಮುದಾಯ ಮಾತ್ರವಲ್ಲ, ಇಡೀ ಮಾನವಕುಲಕ್ಕೆ ಮಾರ್ಗದರ್ಶಕರಾಗಿರುವ ನಾರಾಯಣಗುರುಗಳನ್ನು ಮರೆತಿದ್ದಾರೆ. ಇದೀಗಿ ಆಗಿರುವ ತಪ್ಪನ್ನು ಸರಿಪಡಿಸುವುದು ಮಾತ್ರ ಅಲ್ಲ. ಬದಲಾಗಿ ಆಗಿರುವ ಪ್ರಮಾದಕ್ಕೆ ಸಮುದಾಯದ ಸಚಿವರು ರಾಜೀನಾಮೆ ನೀಡಬೇಕು ಎಂದರು.

ಪಠ್ಯದಿಂದ ನಾರಾಯಣಗುರುಗಳ ಹೆಸರನ್ನು ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿ ಕೈಬಿಟ್ಟಿರುವುದು ಹಿಂದುಳಿದ ವರ್ಗ ಮಾತ್ರವಲ್ಲದೆ ಸಮಾಜಕ್ಕೆ ಮಾಡಿರುವ ನೋವು. ಈ ವಿಷಯದ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿರುವುದಾಗಿ ಮಂತ್ರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಆದರೆ ಈ ವಿಚಾರವನ್ನು ಸಮಾಜದ ಮುನ್ನಲೆಗೆ ತಂದವರು ಪತ್ರಿಕೆ, ಚಿಂತಕರು, ಸಮುದಾಯದ ಮುಖಂಡರು. ಗಣರಾಜ್ಯೋತ್ಸವ ಪರೇಡ್‌ನಲ್ಲಿಯೂ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಕೈಬಿಡಲಾದ ವಿಚಾರವೂ ಇದೀಗ ನೆನಪಿಗೆ ಬರುವಂತಾಗಿದೆ ಎಂದವರು ಹೇಳಿದರು.

ಮಹಾತ್ಮ ಗಾಂಧೀಜಿಯ ಹಂತಕ ಗೋಡ್ಸೆಯನ್ನು, ಸಂಘಟನೆಯ ಮುಖ್ಯಸ್ಥ ಹೆಗ್ಡೆವಾರ್‌ರನ್ನು ಅವರ ಅಭಿಮಾನಿಗಳು ತಮ್ಮ  ಪಕ್ಷದ ಪ್ರಚಾರ ಸಭೆಯಲ್ಲಿ ತಮಗೆ ಆದರ್ಶ ಎಂದು ಹೇಳಲಿ. ಆದರೆ ಸರ್ವಜನಾಂಗದ ಶಾಂತಿಯ ತೋಟ, ಬಸವಣ್ಣ ಹುಟ್ಟಿದ ನಾಡು, ಸೌಹಾರ್ದ ಧರ್ಮ ಭಾವನೆಯನ್ನು ಉಳಿಸಿಕೊಂಡು ಬಂದಿರುವ ರಾಜ್ಯದಲ್ಲಿ ಸಾಮರಸ್ಯಕ್ಕೆ ತೊಂದರೆ ಆಗುವ ರೀತಿಯಲ್ಲಿ ಪಠ್ಯದಲ್ಲಿ ಸೇರಿಸುವುದು ಸಮಾಜಕ್ಕೆ ಮಾಡುವ ಘೋರ ಅಪರಾಧ. ಇದರ ಹಿಂದೆ ರಾಜಕೀಯ ಗಿಮಿಕ್ ಅಡಗಿದ್ದು, ಇದು ಅತ್ಯಂತ ಹೀನ ರಾಜಕೀಯ ಎಂದವರು ಆಕ್ಷೇಪಿಸಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಅವರು ಪ್ರಥಮ ಬಾರಿಗೆ ಈ ನೆಲಕ್ಕೆ ಕಾಲಿರಿಸಿದ ರೈಲ್ವೇ ನಿಲ್ದಾಣಕ್ಕೆ ಇಡುವಂತೆ ಒತ್ತಾಯಿಸಲಾಗಿತ್ತು. ಕೋಟಿ ಚನ್ನಯ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವಂತೆ ಒತ್ತಾಯಿಸಿದ್ದರೂ ಆ ಕಾರ್ಯ ಆಗಿಲ್ಲ. ಬದಲಾಗಿ ಚುನಾವಣೆಯ ಸಂದರ್ಭ ರಸ್ತೆಯೊಂದರ ಹೆಸರು ಬದಲಾವಣೆ ಮಾಡಿದ ಬಿಜೆಪಿಯವರು ಆ ಬ್ಯಾಂಕನ್ನು ಇಲ್ಲದಂತೆಯೇ ಮಾಡಿದರು. ಇಂತಹ ಬಿಜೆಪಿಯ ದ್ವಂದ್ವ ನೀತಿಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಅವರು ಹೇಳಿದರು.

ಪಠ್ಯ ಪುಸ್ತಕದಿಂದ ನಾರಾಯಣಗುರುಗಳ ವಿಷಯ ಕೈಬಿಟ್ಟಿರುವ ವಿಚಾರ ಪ್ರಸ್ತಾಪ, ಚರ್ಚೆಗೆ ಬಂದಾಗ ಅದಕ್ಕೆ ಸಮರ್ಥನೆ, ಹೇಳಿಕೆಗಳನ್ನು ನೀಡುವ ಬಿಜೆಪಿಯ ಸಚಿವರು, ನಾಯಕರು, ಕೈಬಿಡಲು ಕಾರಣವೇನು? ಲೋಪ ಆಗಿರುವುದೇಕೆ ಎಂಬ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಬಿಜೆಪಿ ಸಮಗ್ರ ಹಿಂದುಳಿದ ವರ್ಗಗಳ ವಿರೋಧಿ. ಪಂಚಾಯತ್‌ ರಾಜ್ ತಿದ್ದುಪಡಿ ಸಂದರ್ಭದಲ್ಲಿಯೂ ಬಿಜೆಪಿ ವಿರೋಧಿಸಿತ್ತು. ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರ ಬಗ್ಗೆ ಕಾಳಜಿ ಇಲ್ಲ. ರಾಜಕೀಯ ಲಾಭಕ್ಕಾಗಿ ಪಕ್ಷದಲ್ಲಿ ಸರಕಾರದಲ್ಲಿ ಒಬ್ಬರಿಗೆ ಅವಕಾಶ, ಸ್ಥಾನಮಾನ ನೀಡಬಹುದು. ಆದರೆ ಅವರು ಆ ಸಮುದಾಯಕ್ಕೆ ಏನು ಮಾಡಿದ್ದಾರೆ ಎಂಬುದು ಮುಖ್ಯ. ಸಮುದಾಯಕ್ಕೆ ಆದ ಅನ್ಯಾಯದ ಬಗ್ಗೆ ಜನರೂ ತಿಳಿದುಕೊಳ್ಳಬೇಕು ಎಂದು ರಮಾನಾಥ ರೈ ಹೇಳಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ಸಾಹುಲ್ ಹಮೀದ್, ಜಯಶೀಲ ಅಡ್ಯಂತಾಯ, ಅಪ್ಪಿ, ಸುರೇಂದ್ರ ಕಂಬಳಿ, ನೀರಜ್ ಪಾಲ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News