ಬಿಬಿಎಂಪಿ ಚುನಾವಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿ: ಸುಪ್ರೀಂ ಕೋರ್ಟ್

Update: 2022-05-20 14:52 GMT

ಹೊಸದಿಲ್ಲಿ,ಮೇ 20: ಎರಡು ವರ್ಷಗಳ ಹಿಂದೆಯೇ ಅಧಿಕಾರಾವಧಿ ಅಂತ್ಯಗೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಚುನಾವಣೆಯನ್ನು ನಡೆಸಲು ಮಾರ್ಗವನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಸುಗಮಗೊಳಿಸಿದೆ. ಬಿಬಿಎಂಪಿ ಚುನಾವಣೆಯು ನಿರ್ಣಾಯಕವಾಗಿದೆ ಮತ್ತು ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹಲವರು ಪರಿಗಣಿಸಿದ್ದಾರೆ.

ಆಡಳಿತ ಬಿಜೆಪಿಯು ತನ್ನ ಶಾಸಕರ ಸ್ಥಾನಗಳನ್ನು ಭದ್ರಗೊಳಿಸಲು ಉದ್ದೇಶಪೂರ್ವಕವಾಗಿ ಚುನಾವಣೆಗಳನ್ನು ಮುಂದೂಡಿದೆ ಎಂದು ಟೀಕಾಕಾರರು ವಾದಿಸಿದ್ದಾರೆ. ಚುನಾಯಿತ ಬಿಬಿಎಂಪಿ ಮಂಡಳಿಯ ಅನುಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಈಗ ಶಾಸಕರದ್ದೇ ಕಾರುಬಾರು ನಡೆಯುತ್ತಿದೆ.

ರಾಜ್ಯ ವಿಧಾನಸಭೆಯಲ್ಲಿ ಶೇ.12.5 ಸ್ಥಾನಗಳನ್ನು ಹೊಂದಿರುವ ಬೆಂಗಳೂರು ಸರಕಾರದ ವಾರ್ಷಿಕ ಆದಾಯದಲ್ಲಿ ಶೇ.60ಕ್ಕೂ ಹೆಚ್ಚಿನ ಪಾಲನ್ನು ಹೊಂದಿದೆ.

ಶುಕ್ರವಾರ ಕರ್ನಾಟಕ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಬಿಬಿಎಂಪಿ ಚುನಾವಣೆಗಾಗಿ ವಾರ್ಡ್ ಮರುವಿಂಗಡಣೆ ಕಾರ್ಯ ಅಂತಿಮ ಹಂತದಲ್ಲಿದೆ ಮತ್ತು ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಮೀಸಲಾತಿಯನ್ನು ನಿರ್ಧರಿಸುವ ಸಂಬಂಧ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ನ್ಯಾ.ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠಕ್ಕೆ ಭರವಸೆ ನೀಡಿದರು.2020ರ ಬಿಬಿಎಂಪಿ ಕಾಯ್ದೆಯಡಿ ‘ನೂತನ’ ಮಹಾನಗರ ಪಾಲಿಕೆಯನ್ನು ರಚಿಸಲಾಗಿದ್ದು, ಅದು 2021,ಜ.11ರಂದು ಜಾರಿಗೊಂಡಿದೆ. ಬಳಿಕ ಸರಕಾರವು ಸಮಯವನ್ನು ವ್ಯರ್ಥಗೊಳಿಸದೆ ವಾರ್ಡ್ ಮರುವಿಂಗಡಣೆ ಮತ್ತು ಮೀಸಲಾತಿಯನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ತೊಡಗಿದೆ ಎದು ತಿಳಿಸಿದ ಮೆಹ್ತಾ,ಎಂಟು ವಾರಗಳಲ್ಲಿ ವಾರ್ಡ್‌ಗಳ ಮರುವಿಂಗಡಣೆ ಮತ್ತು ಒಬಿಸಿ ಮೀಸಲಾತಿ ನಿರ್ಧಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅಧಿಸೂಚನೆಯನ್ನು ಹೊರಡಿಸಲಾಗುವದು ಎಂದು ಹೇಳಿದರು.

ಕರ್ನಾಟಕ ಸರಕಾರದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯವು ಬಿಬಿಎಂಪಿ ಚುನಾವಣೆಗೆ ಪೂರ್ವ ಸಿದ್ಧತೆಗಳನ್ನು ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿತು. ವಾರ್ಡ್‌ಗಳ ಮರುವಿಂಗಡಣೆ ಅಥವಾ ಒಬಿಸಿ ಮೀಸಲಾತಿ ಅಧಿಸೂಚನೆ;ಯಾವುದು ನಂತರ ಆಗುತ್ತದೆಯೋ ಅದರ ಒಂದು ವಾರದೊಳಗೆ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಬಹುದು ಎಂದು ನ್ಯಾಯಾಲಯವು ಆಯೋಗಕ್ಕೆ ಆದೇಶಿಸಿತು.

ಹೇಳುವ ಅಗತ್ಯವಿಲ್ಲ,ರಾಜ್ಯ ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆಯನ್ನು ಆರಂಭಿಸಿದ ಬಳಿಕ ಸಾಧ್ಯವಾದಷ್ಟು ಶೀಘ್ರ ಕಾನೂನಿಗೆ ಅನುಗುಣವಾಗಿ ಅದನ್ನು ತಾರ್ಕಿಕ ಅಂತ್ಯಕ್ಕೊಯ್ಯಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಗಡುವನ್ನು ವಿಧಿಸಬೇಕು ಎಂಬ ಕೋರಿಕೆಗೆ ನ್ಯಾ.ಖನ್ವಿಲ್ಕರ್ ಅವರು,‘ವಿವಿಧ ಅಂಶಗಳಿರಬಹುದು.ಮಳೆಗಾಲವು ಚುನಾವಣೆಗಳನ್ನು ನಡೆಸಲು ಅನುಮತಿಸದಿರಬಹುದು...ನಮಗೆ ತಿಳಿದಿಲ್ಲ. ಚುನಾವಣಾ ಆಯೋಗವು ನಿರ್ಧರಿಸುತ್ತದೆ. ಅದು ಸ್ವತಂತ್ರ,ಸಾಂವಿಧಾನಿಕ ಸಂಸ್ಥೆಯಾಗಿದೆ. ಅದು ಚುನಾವಣೆಗಳನ್ನು ನಿರ್ವಹಿಸುತ್ತದೆ ’ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News