ಮಹಿಳಾ ದೌರ್ಜನ್ಯ ಎಸಗಿದ ಸಂಚಾಲಕ, ಪ್ರಾಧ್ಯಾಪಕರ ವಜಾಕ್ಕೆ ಆಗ್ರಹ; ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಪ್ರತಿಭಟನೆ

Update: 2022-05-20 11:36 GMT

ಬಂಟ್ವಾಳ, ಮೇ 20: ಪ್ರಾಧ್ಯಾಪಕಿ ಸಹಿತ ಕಾಲೇಜಿನ ಮಹಿಳಾ ಸಿಬ್ಬಂದಿಗೆ ವಿವಿಧ ರೀತಿಯ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿದ್ದ ಕಾಲೇಜಿನ ಸಂಚಾಲಕ ಮತ್ತು ಇಬ್ಬರು ಪ್ರಾಧ್ಯಾಪಕರನ್ನು ವಜಾ ಮಾಡುವಂತೆ ಆಗ್ರಹಿಸಿ ತಾಲೂಕಿನ ಎಸ್.ವಿ.ಎಸ್. ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. 

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ಮತ್ತು ಇಬ್ಬರು ಪ್ರಾಧ್ಯಾಪಕರ ವಿರುದ್ಧ ಇತ್ತೀಚೆಗೆ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದ್ದು ಅವರ ಬಂಧನ ಕೂಡ ಆಗಿತ್ತು. ಕೆಲವು ದಿನಗಳ ಹಿಂದೆ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದು ಅವರನ್ನು ಮತ್ತೆ ಕರ್ತವ್ಯಕ್ಕೆ ಸೇರಿಸಿರುವ ಕಾಲೇಜು ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 

ಎಸ್.ವಿ.ಎಸ್. ಕಾಲೇಜು ಈಗ ಅವ್ಯವಸ್ಥೆ ಹಾಗೂ ಗೊಂದಲದ ತಾಣವಾಗಿದೆ.‌ ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಸಂಚಾಲಕರು ಪ್ರಾಂಶುಪಾಲರನ್ನು ಮುಂದಿಟ್ಟು ವಿದ್ಯಾರ್ಥಿಗಳಿಗೆ ಕಿರುಕಿಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು. 

ಮಹಿಳಾ ದೌರ್ಜನ್ಯ ಎಸಗಿದ ಆರೋಪದಲ್ಲಿ ಎಫ್.ಐ.ಆರ್. ದಾಖಲಾಗಿರುವ ಕಾಲೇಜು ಸಂಚಾಲಕ ಪ್ರಕಾಶ್ ಶೆಣೈ ತಕ್ಷಣ ರಾಜೀನಾಮೆ ನೀಡಬೇಕು. ಎಫ್.ಐ.ಆರ್.ದಾಖಲಾಗಿರುವ ಇಬ್ಬರು ಪ್ರಾಧ್ಯಾಪಕರನ್ನು ತಕ್ಷಣ ವಜಾ ಮಾಡಬೇಕು. ಕಾಲೇಜಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು. ವಿದ್ಯಾರ್ಥಿಗಳಿಗೆ ನೀಡುವ ಕಿರುಕುಳ ಕೊನೆಗೊಳಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News