ಸಿಬಿಐ ಅಧಿಕಾರಿಗಳನ್ನು ತಡೆದ ಕಾರ್ಯಕರ್ತನಿಗೆ ಥಳಿಸಿದ ಲಾಲೂ ಪತ್ನಿ ರಾಬ್ರಿ ದೇವಿ: ವೀಡಿಯೊ ವೈರಲ್‌

Update: 2022-05-21 13:10 GMT

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರು ನಿನ್ನೆ ತಮ್ಮ ಪಾಟ್ನಾ ನಿವಾಸದ ಮೇಲೆ ದಾಳಿ ನಡೆಸಿದ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಬೆಂಬಲಿಗನಿಗೆ ಥಳಿಸುವ ವಿಡಿಯೋ ಈಗ ವೈರಲ್‌ ಆಗಿದೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಅವರ ಪಾಟ್ನಾ ನಿವಾಸ ಸೇರಿದಂತೆ 15 ಸ್ಥಳಗಳಲ್ಲಿ ಕೇಂದ್ರೀಯ ಸಂಸ್ಥೆ ನಡೆಸಿದ ದಾಳಿಯ ವಿರುದ್ಧ ಆರ್‌ಜೆಡಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದರು.

2004-2009ರ ಅವಧಿಯಲ್ಲಿ ಯಾದವ್ ರೈಲ್ವೇ ಸಚಿವರಾಗಿದ್ದಾಗ ಯಾದವ್, ರಾಬ್ರಿ ದೇವಿ ಮತ್ತು ಇತರ ಕುಟುಂಬ ಸದಸ್ಯರು ಉದ್ಯೋಗಕ್ಕೆ ಬದಲಾಗಿ ಭೂಮಿಯನ್ನು ಲಂಚವನ್ನಾಗಿ ತೆಗೆದುಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರೊಂದಿಗೆ ರಾಬ್ರಿ ದೇವಿ ಅವರು ಆರ್‌ಜೆಡಿ ಕಾರ್ಯಕರ್ತರ ಬಳಿಗೆ ಬಂದು ಸಿಬಿಐ ಅಧಿಕಾರಿಗಳ ನಿರ್ಗಮನವನ್ನು ತಡೆಯದೇ ದಾರಿಯನ್ನು ತೆರವುಗೊಳಿಸುವಂತೆ ಕೇಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಆದರೆ,  ಪ್ರತಿಭಟನಾನಿರತ ಪಕ್ಷದ ಕಾರ್ಯಕರ್ತರು ಪಟ್ಟು ಬಿಡದಿದ್ದಾಗ, ಕೋಪಗೊಂಡ ಅವರು, ಅಧಿಕಾರಿಗಳನ್ನು ಹೋಗಲು ಬಿಡುವಂತೆ ಕಠೋರವಾಗಿ ಹೇಳುತ್ತಾರೆ.

ನಿನ್ನೆ ಬೆಳಿಗ್ಗೆ ದಾಳಿಗಳು ಪ್ರಾರಂಭವಾದ ನಂತರ, ಆರ್‌ಜೆಡಿ ಕಾರ್ಯಕರ್ತರು ಯಾದವ್‌ ಅವರ ಪಾಟ್ನಾ ನಿವಾಸದ ಹೊರಗೆ ಪ್ರತಿಭಟನೆಯನ್ನು ಪ್ರಾರಂಭಿಸಿದ್ದು, ಬಿಜೆಪಿ ಸೇಡಿನ ರಾಜಕೀಯಕ್ಕಾಗಿ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ರಾಬ್ರಿ ದೇವಿ ಅವರನ್ನು 12 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಅವರ ಮನೆಯ ಹೊರಗೆ ಭಾರೀ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.   

ದಾಳಿಯ ನಂತರ ಸಿಬಿಐ ಅಧಿಕಾರಿಗಳು ಯಾದವ್ ಅವರ ಮನೆಯಿಂದ ಹೊರಬಂದಾಗ, ಆರ್‌ಜೆಡಿ ಕಾರ್ಯಕರ್ತರು ಅವರ ದಾರಿಯನ್ನು ತಡೆದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಂತೆಯೇ ರಾಬ್ರಿ ದೇವಿ, ತಮ್ಮ ಪುತ್ರ ತೇಜ್ ಪ್ರತಾಪ್ ಹಾಗೂ ಪಕ್ಷದ ಮುಖಂಡರೊಂದಿಗೆ ಹೊರಬಂದು ಪಕ್ಷದ ಕಾರ್ಯಕರ್ತರನ್ನು ತಡೆದು ಸಿಬಿಐ ಅಧಿಕಾರಿಗಳಿಗೆ ದಾರಿ ಮಾಡಿ ಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News