ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ

Update: 2022-05-21 14:21 GMT

ಹೊಸದಿಲ್ಲಿ: ಏರುತ್ತಿರುವ ಹಣದುಬ್ಬರದ ಮಧ್ಯೆ ಇಂಧನ ಬೆಲೆಗಳ ಮೇಲಿನ ಕೇಂದ್ರ ಅಬಕಾರಿ ಸುಂಕದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಡಿತವನ್ನು ಘೋಷಿಸಿದ್ದರಿಂದ ಪೆಟ್ರೋಲ್ ಬೆಲೆ ₹ 9.5 ರಷ್ಟು ಮತ್ತು ಡೀಸೆಲ್ ₹ 7 ರಷ್ಟು ಅಗ್ಗವಾಗಲಿದೆ.

ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹8 ಮತ್ತು ಡೀಸೆಲ್‌ಗೆ ₹6 ರಷ್ಟು ಕಡಿತಗೊಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸುವುದರಿಂದ ರೂ.1 ಲಕ್ಷ ಕೋಟಿ ನಷ್ಟವಾಗಲಿದೆ ಎಂದು ಸರ್ಕಾರ ಹೇಳಿದೆ.

ಇದೇ ರೀತಿಯ ಕಡಿತವನ್ನು ಜಾರಿಗೆ ತಂದು ಅದರ ಪ್ರಯೋಜನವನ್ನು ಸಾಮಾನ್ಯ ಜನರಿಗೆ ನೀಡಲು ಸಚಿವರು ರಾಜ್ಯಗಳಿಗೆ ತಾಕೀತು ಮಾಡಿದರು.

"ಎಲ್ಲಾ ರಾಜ್ಯ ಸರ್ಕಾರಗಳಿಗೆ, ವಿಶೇಷವಾಗಿ ಕಳೆದ ಸುತ್ತಿನಲ್ಲಿ (ನವೆಂಬರ್ 2021) ಕಡಿತವನ್ನು ಮಾಡದ ರಾಜ್ಯಗಳಿಗೆ ಇದೇ ರೀತಿಯ ಕಡಿತವನ್ನು ಜಾರಿಗೆ ತರಲು ಮತ್ತು ಸಾಮಾನ್ಯ ಜನರಿಗೆ ಪರಿಹಾರವನ್ನು ನೀಡಲು ನಾನು ಒತ್ತಾಯಿಸಲು ಬಯಸುತ್ತೇನೆ" ಎಂದು ನಿರ್ಮಲಾ ಸೀತಾರಾಮನ್ ಮನವಿ ಮಾಡಿದರು.

ಅಲ್ಲದೆ, ದಾಖಲೆ ಮಟ್ಟಕ್ಕೆ ಏರುತ್ತಿರುವ ಅಡುಗೆ ಅನಿಲ ದರದಿಂದ ಉಂಟಾಗುವ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಪ್ರತಿ ಸಿಲಿಂಡರ್‌ಗೆ ₹ 200 ಸಬ್ಸಿಡಿ ನೀಡುತ್ತದೆ ಎಂದೂ ಅವರು ತಿಳಿಸಿದ್ದಾರೆ. "ಇದು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಸಹಾಯ ಮಾಡುತ್ತದೆ" ಎಂದು ತಮ್ಮ ಟ್ವೀಟ್‌ ನಲ್ಲಿ ಉಲ್ಲೇಖಿಸಿದ್ದಾರೆ.

ತೀವ್ರ ಬೆಲೆ ಏರಿಕೆಗಳ ನಡುವೆ ಸರ್ಕಾರವನ್ನು ಸಮರ್ಥಿಸಿಕೊಂಡ ಸಚಿವರು, ಬಡವರನ್ನು ಮೇಲೆತ್ತಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

"ನಾವು ಬಡ ಮತ್ತು ಮಧ್ಯಮ ವರ್ಗದವರಿಗೆ ಸಹಾಯ ಮಾಡಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದರ ಪರಿಣಾಮವಾಗಿ, ನಮ್ಮ ಅಧಿಕಾರಾವಧಿಯಲ್ಲಿ ಸರಾಸರಿ ಹಣದುಬ್ಬರವು ಹಿಂದಿನ ಸರ್ಕಾರಗಳಿಗಿಂತ ಕಡಿಮೆಯಾಗಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News