ಚೆನ್ನೈ ಹಸಿರುಪೀಠ ಆದೇಶದ ಹಿನ್ನೆಲೆ; ಉಡುಪಿ ಜಿಲ್ಲೆಯ ಮರಳು ದಿಬ್ಬ ತೆರವು, ಮರಳು ಸಾಗಾಣಿಕೆ ನಿಷೇಧ

Update: 2022-05-21 13:36 GMT
ಫೈಲ್ ಚಿತ್ರ

ಉಡುಪಿ : ಸಿಆರ್‌ಝಡ್ ವ್ಯಾಪ್ತಿಯ ನದಿಗಳಲ್ಲಿರುವ ಮರಳು ದಿಬ್ಬದ ತೆರವಿಗೆ ಹಾಗೂ ಸಾಗಾಣಿಕೆಗೆ ಸಂಬಂಧಿಸಿ ದಂತೆ ಚೆನ್ನೈ ಹಸಿರು ಪೀಠ ಬುಧವಾರ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮರಳು ದಿಬ್ಬಗಳ ತೆರವು ಹಾಗೂ ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಏಳು ಸದಸ್ಯ ಸಮಿತಿಯ ಅಧ್ಯಕ್ಷ ಕೂರ್ಮಾರಾವ್ ಎಂ. ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲಾ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ನದಿ ಪಾತ್ರಗಳಲ್ಲಿ ಸಂಗ್ರಹವಾದ ಮರಳು ದಿಬ್ಬ ತೆರವುಗೊಳಿಸುವ ಸಂಬಂಧ ಒಟ್ಟು 161 ತಾತ್ಕಾಲಿಕ ಮರಳು ಪರವಾನಿಗೆಯನ್ನು ವಿತರಿಸಲಾಗಿದೆ. ಅವುಗಳಲ್ಲಿ ಕುಂದಾಪುರ ತಾಲೂಕು ವ್ಯಾಪ್ತಿಯ ನಾಲ್ಕು ಮರಳು ದಿಬ್ಬಗಳನ್ನು ತೆರವುಗೊಳಿಸಲು ವಿತರಿಸಲಾದ ಒಟ್ಟು 39 ತಾತ್ಕಾಲಿಕ ಮರಳು ಪರವಾನಿಗೆಗಳಿಗೆ ಸಂಬಂಧಿಸಿದಂತೆ ಕೆಎಸ್‌ಸಿಝಡ್‌ಎಂಎಯಿಂದ ನೀಡಲಾರದ ನಿರಾಪೇಕ್ಷಣಾ ಪತ್ರದ ಅವಧಿ ಕಳೆದ ಮಾರ್ಚ್ 29ರಂದೇ ಮುಕ್ತಾಯಗೊಂಡಿದೆ. ಈ ಪರವಾನಿಗೆಗಳನ್ನು ಈಗಾಗಲೇ ತಡೆ ಹಿಡಿಯಲಾಗಿದೆ ಹಾಗೂ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಮತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಒಟ್ಟು 19 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ವಿತರಿಸಲಾದ ಒಟ್ಟು 122 ತಾತ್ಕಾಲಿಕ ಮರಳು ಪರವಾನಿಗೆಗಳಿಗೆ ಸಂಬಂಧಿಸಿದಂತೆ ಕೆಎಸ್‌ಸಿಝಡ್‌ಎಂಎ ಯಿಂದ ನೀಡಲಾದ ನಿರಾಪೇಕ್ಷಣಾ ಪತ್ರದ ಅವಧಿ ಮುಂದಿನ ಆಗಸ್ಟ್ 22ರವರೆಗೆ ಇದ್ದು, ಆದರೂ ಚೆನ್ನೈನ ದಕ್ಷಿಣ ವಲಯ ಹಸಿರು ಪೀಠ ನ್ಯಾಯಾಲಯ ಮೇ 18ರಂದು ನೀಡಿದ ಆದೇಶಾನುಸಾರ ಉಡುಪಿ ಜಿಲ್ಲೆಯ ಏಳು ಸದಸ್ಯರ ಸಮಿತಿಯು ಜಿಲ್ಲಾ ವ್ಯಾಪ್ತಿಯಲ್ಲಿ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಅದರಂತೆ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ನೀಡಲಾದ ಚಾಲ್ತಿಯಲ್ಲಿರುವ ಒಟ್ಟು 122 ತಾತ್ಕಾಲಿಕ ಮರಳು ಪರವಾನಿಗೆಗಳನ್ನು ಐಎಲ್‌ಎಂಎಸ್ ತಂತ್ರಾಂಶದಲ್ಲಿ ತಡೆಹಿಡಿಯುವಂತೆ ಕೋರಿ ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.

ಅದರಂತೆ ಐಎಲ್‌ಎಂಎಸ್ ತಂತ್ರಾಂಶದಲ್ಲಿ ಒಟ್ಟು 122 ಪರವಾನಿಗೆಗಳನ್ನು ತಡೆ ಹಿಡಿದು, ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಹಾಗೂ ಮರಳು ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ ಹಾಗೂ ತಾತ್ಕಾಲಿಕ ಮರಳು ಪರವಾನಿಗೆದಾರರಿಗೆ ಮರಳು ತೆರವುಗೊಳಿಸುವುದನ್ನು ಸ್ಥಗಿತಗೊಳಿಸಿ, ಮರಳು ದಿಬ್ಬ ಪ್ರದೇಶಗಳಿಂದ ಮರಳು ತೆರವುಗೊಳಿಸಲು ಬಳಸುವ ದೋಣಿಗಳನ್ನು ಹಾಗೂ ಮರಳು ದಕ್ಕೆ ಪ್ರದೇಶದಿಂದ ಮರಳು ಸಾಗಾಣಿಕೆಗೆ ಬಳಸುವ ವಾಹನಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವುದನ್ನು ಹಾಗೂ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂಬುದನ್ನು ಸಾರ್ವಜನಿಕರ, ತಾತ್ಕಾಲಿಕ ಪರವಾನಿಗೆದಾರರ ಹಾಗೂ ವಾಹನ ಸಾಗಾಟ ಮಾಲಕರು, ಚಾಲಕರಿಗೆ ತಿಳಿಸಬಯಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News