ಮಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ

Update: 2022-05-21 13:38 GMT

ಮಂಗಳೂರು : ಸೈದ್ಧಾಂತಿಕ ಬದ್ಧತೆ, ಪ್ರಯೋಗಶೀಲ ಮನಸ್ಸು ಮತ್ತು ರಾಷ್ಟ್ರಕ್ಕಾಗಿ ಬಲಿದಾನಗೈದ ರಾಜೀವ್ ಗಾಂಧಿ ಅವರ ತ್ಯಾಗ ಶ್ರೇಷ್ಠವಾದದ್ದು. ಅವರ ದೂರದೃಷ್ಟಿ, ಉತ್ತಮ ಆಡಳಿತದಿಂದ ರಾಷ್ಟ್ರದ ಗೌರವ ಹೆಚ್ಚಿದೆ ಎಂದು ರಾಜ್ಯ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯ ೩೧ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

೧೯೮೫ರಲ್ಲಿ ರಾಜೀವ್ ಗಾಂಧಿ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನವನನ್ನು ಪ್ರಾರಂಭಿಸಿದ ಸಂದರ್ಭ ಅಟಲ್ ಬಿಹಾರಿ ವಾಜಪೇಯಿ ಅವರು ರಾಜೀವ್ ಗಾಂಧಿ ಯುವಕರಿಗೆ ಕಂಪ್ಯೂಟರ್ ಡಬ್ಬ ತಂದು ನಿರುದ್ಯೋಗ ಹೆಚ್ಚಿಸಲು ಹೊರಟಿದ್ದಾರೆ ಎಂದಿದ್ದರು. ಆದರೆ ಇಂದು  ಅಟಲ್ ಬಿಹಾರಿ ವಾಜಪೇಯಿಯ ಶಿಷ್ಯ ನರೇಂದ್ರ ಮೋದಿ ದೇಶದಲ್ಲಿ ಶೇ.೪೫ ರಷ್ಟು ನಿರುದ್ಯೋಗ ಸೃಷ್ಟಿಸಿ ಇತಿಹಾಸ ನಿರ್ಮಿಸಿದ್ದಾರೆ. ಆದ್ದರಿಂದ  ರಾಜೀವ್ ಗಾಂಧಿ ಅವರನ್ನು ಮೋದಿಗೆ ಯಾವತ್ತೂ ಹೋಲಿಸಲು ಆಗುವುದಿಲ್ಲ. ಆಧುನಿಕ ಭಾರತ ನಿರ್ಮಾಣದಲ್ಲಿ ಅವರ ಕೊಡುಗೆ ಅಪಾರ. ತನ್ನ ಪ್ರಗತಿಗಾಮಿ ಆಲೋಚನೆ, ದೂರಗಾಮಿ ಯೋಜನೆ ಮತ್ತು ಜನಪರ ಚಿಂತನೆಯ ಮೂಲಕ ರಾಜೀವ್ ಗಾಂಧಿ ಅವರು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು ಹೇಳಿದರು.

ಸರ್ವ ಧರ್ಮ ಸಮಬಾಳು ಎಂದು ಎಲ್ಲ ಧರ್ಮವನ್ನು ಸಮನಾಗಿ ಕಾಣಬೇಕೆಂಬ ಪ್ರತಿಪಾದನೆಯನ್ನು ಸಹಿಸಲಾ ಗದವರು ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡುತ್ತಾರೆ. ಕಾಂಗ್ರೆಸ್ ನಾಥೂರಾಮ್ ಗೋಡ್ಸೆಯನ್ನು ದೇಶದ ಮೊದಲ ಭಯೋತ್ಪಾದಕ, ಉಗ್ರಗ್ರಾಮಿ ಎಂದು ಕರೆಯುತ್ತದೆ. ಯಾಕೆಂದರೆ ಆತ ದೇಶದ ರಾಷ್ಟ್ರಪಿತನನ್ನು ಕೊಲೆ ಮಾಡಿದ ಪಾತಕಿ. ಆರೆಸ್ಸೆಸ್ ಅಥವಾ ಬಿಜೆಪಿ ಆಗಲಿ ನಾಥೂರಾಮ್ ಗೋಡ್ಸೆಯನ್ನು ಕೊಲೆಗಡುಕ ಎಂದು ಕರೆಯುವುದಿಲ್ಲ. ಬಲಿದಾನ ಮಾಡಿದ ರೀತಿಯಲ್ಲಿ ಮಾತನಾಡುತ್ತಾರೆ ಎಂದರು.

ರಾಷ್ಟ್ರದ ಐಕ್ಯತೆಗೆ ಧಕ್ಕೆ ಬಂದಾಗ ಇಂದಿರಾ ಗಾಂಧಿ ಅವರು ಪ್ರಾಣಾರ್ಪಣೆ ಮಾಡುತ್ತಾರೆ. ರಾಷ್ಟ್ರದ ಅಖಂಡತೆಗೆ ಧಕ್ಕೆ ಬಂದಾಗ ದೇಶದ ಹಿತದೃಷ್ಟಿಯನ್ನು ಕಾಪಾಡಲು ರಾಜೀವ್ ಗಾಂಧಿ ಅವರು ಕೆಲವು ತೀರ್ಮಾಣ ಕೈಗೊಂಡಾಗ ಆಂತರಿಕ ಮತ್ತು ಬಾಹ್ಯ ಶಕ್ತಿಗಳು ವಿರೋಧ ವ್ಯಕ್ತಪಡಿಸಿದ್ದವು. ಶ್ರೀಲಂಕಾದಲ್ಲಿರುವ ತಮಿಳರನ್ನು ಕಾಪಾಡಲು ನಿರ್ಧಾರ ತೆಗೆದುಕೊಂಡಾಗ ಶ್ರೀಲಂಕಾದಲ್ಲಿರುವ ಭಯೋತ್ಪಾದಕರು ರಾಜೀವ್ ಗಾಂಧಿಯನ್ನು ಹತ್ಯೆ ಮಾಡುತ್ತಾರೆ. ರಾಷ್ಟ್ರೀಯ ಸಿದ್ಧಾಂತಕ್ಕಾಗಿ, ಐಕ್ಯತೆ ಹಾಗೂ ಏಕತೆಗಗಾಗಿ ತ್ಯಾಗ ಬಲಿದಾನ ಮಾಡಿದವರನ್ನು ಕಾಣಲು ಕಾಂಗ್ರೆಸ್ ಪಕ್ಷದಲ್ಲಿ ವಿನಃ ಬೇರೆ ಯಾವ ಪಕ್ಷದಲ್ಲಿ ಕೂಡ ಕಾಣಲು ಸಿಗದು ಎಂದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್.ಲೋಬೊ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಮಮತಾ ಗಟ್ಟಿ, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಮಾಜಿ ಉಪಮೇಯರ್‌ಗಳಾದ ಮುಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ವೆಲೇರಿಯನ್ ಸಿಕ್ವೇರಾ, ಜೆ.ಅಬ್ದುಲ್ ಸಲೀಂ, ಕಾರ್ಪೊರೇಟರ್ ಅಬುರ‌್ರವೂಫ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಪದ್ಮನಾಭ ನರಿಂಗಾನ, ವಿಶ್ವಾಸ್ ಕುಮಾರ್ ದಾಸ್, ಅಬ್ಬಾಸ್ ಅಲಿ, ಶುಭಾಷ್‌ಚಂದ್ರ ಕೊಲ್ನಾಡ್, ನೀರಜ್ ಚಂದ್ರಪಾಲ್,  ಶುಭೋದಯ ಆಳ್ವ, ಟಿ.ಕೆ. ಸುಧೀರ್, ಶಬೀರ್ ಎಸ್, ಮುಹಮ್ಮದ್ ಅಲ್ತಾಫ್, ಸಿ.ಎಂ ಮುಸ್ತಫಾ, ರಮಾನಂದ ಪೂಜಾರಿ, ನಿತ್ಯಾನಂದ ಶೆಟ್ಟಿ, ರಮಾನಾಥ ವಿಟ್ಲ, ಭಾಸ್ಕರ್ ರಾವ್, ದಿನೇಶ್ ರಾವ್,  ಲಕ್ಷ್ಮಿ ನಾಯರ್, ಪ್ರತಿಭಾ ಕುಳಾಯಿ, ಮಂಜುಳಾ ನಾಯ್ಕ್, ಸಬಿತಾ ಮಿಸ್ಕಿತ್, ಶಾಂತಲಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News