ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ದೂರು ನೀಡಿದ್ದೇನೆ, ಸವಾಲಾಗಿ ಸ್ವೀಕರಿಸಿ ತನಿಖೆ ಎದುರಿಸಲಿ: ಶೇಖರ ಲಾಯಿಲ

Update: 2022-05-21 14:28 GMT
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ:  ಬಳಂಜದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಉಪಸ್ಥಿತಿಯಲ್ಲಿ ಶಾಸಕರ ಸಾಧನೆ ಮತ್ತು ಕಾರ್ಯ ಪ್ರತ್ಯಕ್ಷವಾಗಿ ನೋಡಿರುವ ಬಿಜೆಪಿ ಕಾರ್ಯಕರ್ತ  ಹರೀಶ್ ವೈ ಚಂದ್ರಮ ಬಳಂಜ ತಮ್ಮ ಭಾಷಣದಲ್ಲಿ ಶಾಸಕರ ಬಗ್ಗೆ ಹೇಳಿರುವ ವಿಷಯಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದ್ದೇನೆ, ಶಾಸಕರಿಗೆ ತಾಕತ್ತಿದ್ದರೆ ದೂರನ್ನು ಸವಾಲಾಗಿ ಸ್ವೀಕರಿಸಿ ತನಿಖೆ ಎದುರಿಸಲಿ ಎಂದು ದೂರುದಾರ ಸಿಪಿಐಎಂ ಮುಖಂಡ ಶೇಖರ ಲಾಯಿಲ ಒತ್ತಾಯಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರು ನೀಡಿದ ಬಳಿಕ ಶಾಸಕ ಹರೀಶ್ ಪೂಂಜ ಅವರು ಭಯಭೀತಿಗೊಂಡು ಪ್ರಕರಣದ ವರದಿ ಮಾಡಿದ ಪತ್ರಕರ್ತರಿಗೆ ಬೆದರಿಕೆ ಹಾಕುವುದು ಸೇರಿದಂತೆ, ದೂರುದಾರರನ್ನು ಸಾರ್ವಜನಿಕವಾಗಿ ಅವಮಾನವಾಗುವಂತೆ ಮಾತನಾಡುತ್ತಿರುವುದು ಶಾಸಕರ ಘನತೆಗೆ ತಕ್ಕುದಾದುದಲ್ಲ, ಇದು ಪ್ರಜಾಪ್ರಭುತ್ವ ವ್ಯವಸ್ಥೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಸ್ಕಾರ, ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ ಎಂದು ಬೊಬ್ಬಿಡುವ ಶಾಸಕರು ಸಂಸ್ಕೃತಿ, ಸಂಸ್ಕಾರ ಹೀನರಂತೆ ವರ್ತಿಸುವುದು ಸರಿಯಲ್ಲ. ಶಾಸಕರು ದೂರನ್ನು ಸವಾಲಾಗಿ ಸ್ವೀಕರಿಸಿ ತನಿಖೆ ಎದುರಿಸಲಿ ಎಂದರು.

ಶಾಸಕ ಹರೀಶ್ ಪೂಂಜ ಅವರ ಶ್ರಮಿಕ ಕಚೇರಿ ಹಾಗೂ ಮನೆಯಲ್ಲಿ ನಗದು ರೂಪದ ಹಣವನ್ನು ಶೇಖರಣೆ ಮಾಡಿಕೊಂಡಿರುವುದು ಕಾನೂನು ಬಾಹಿರ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ಮತ್ತು ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ 2002 ಕಾಯ್ದೆಯ ಸೆಕ್ಷನ್ 3 ರಡಿ ಅಪರಾಧವಾಗುತ್ತದೆ. ಶಾಸಕರಲ್ಲಿ ಆದಾಯಕ್ಕೆ ಮೀರಿದ ಹಣವಿದ್ದು, ಆ ಹಣದ ಮೂಲ ಬಹಿರಂಗವಾಗಬೇಕು. ಜೊತೆಗೆ ಸಾರ್ವಜನಿಕವಾಗಿ ಪ್ರತ್ಯಕ್ಷದರ್ಶಿಯಾಗಿ ಹೇಳಿಕೆ ಕೊಟ್ಟಿರುವ ಹರೀಶ್ ವೈ ಚಂದ್ರಮ ಅವರನ್ನು ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಹಾಗೂ ಹೇಳಿಕೆದಾರನಾಗಿ ಪಿಎಂಎಲ್ ಎ 2002 ರ ಕಲಂ 3 ರ ಪ್ರಕಾರ ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸುತ್ತೇನೆ.

ನಾನು ಈ ಪ್ರಕರಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದು ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು, ತಪ್ಪಿದ್ದಲ್ಲಿ ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಬೇಕಾದ ಅನಿವಾರ್ಯತೆ ಇದ್ದು ಅದಕ್ಕೂ ಸಿದ್ಧತೆಗಳು ನಡೆಯುತ್ತಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶೇಖರ್ ಲಾಯಿಲ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News