ಭಾರತದ ಸಂವಿಧಾನ ವಿಶ್ವದಲ್ಲೇ ಸರ್ವಶ್ರೇಷ್ಠ: ಪುತ್ತಿಗೆಶ್ರೀ

Update: 2022-05-21 14:55 GMT

ಉಡುಪಿ : ಭಾರತ ದೇಶವು ಸಾವಿರಾರು ವರ್ಷಗಳ ಭವ್ಯ ಪರಂಪರೆ ಯನ್ನು ಹೊಂದಿದ್ದು, ಇದಕ್ಕನುಗುಣವಾಗಿ ರೂಪಿಸಿದ ನಮ್ಮ ದೇಶದ ಸಂವಿಧಾನ, ಇಡೀ ವಿಶ್ವದ ಉಳಿದೆಲ್ಲ ರಾಷ್ಟ್ರಗಳ ಸಂವಿಧಾನಕ್ಕಿಂತ ಸರ್ವಶ್ರೇಷ್ಠ ವಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ನಗರದ ಅಜ್ಜರಕಾಡು ಪುರಭವನದಲ್ಲಿ ಶನಿವಾರ ಸಂಜೆ ಜರಗಿದ ‘ಆಜಾದೀ ಕಾ ಅಮೃತ ವರ್ಷ್’  ಸ್ವಾತಂತ್ರ್ಯ ಯೋಧರ ಸಂಸ್ಮರಣೆ-ಭಾರತ ಸಂವಿಧಾನ ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡುತಿದ್ದರು.

ದೇಶದ ಪಂಚಾಂಗವೇ ನಮ್ಮ ಸಂವಿಧಾನವಾಗಿದೆ. ಪ್ರತಿಯೊಬ್ಬ ಭಾರತೀಯನೂ ದೈವಭಕ್ತಿ, ದೇಶ ಭಕ್ತಿಯನ್ನು ಹೊಂದಿರಬೇಕು.ಸಂವಿಧಾನ ನಮಗೆ ನೀಡಿರುವ ಹಕ್ಕಿನ ಜೊತೆಜೊತೆಗೆ ನಮ್ಮ ಜವಾಬ್ಧಾರಿಯನ್ನು ಅರಿತಿರಬೇಕು ಎಂದವರು ಹೇಳಿದರು.

ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಮ್ಮ ಸಂವಿಧಾನ ಉತ್ಕೃಷ್ಟವಾಗಿದ್ದು, ಇದರ ಬಗ್ಗೆ ಯುವಜನರಿಗೆ ತಿಳುವಳಿಕೆ ಮೂಡಿಸಲು ಸಕರಾತ್ಮಕ ಚರ್ಚೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟಾರು ರತ್ನಾಕರ ಹೆಗ್ಡೆ, ಉದ್ಯಮಿಗಳಾದ ಬಾಲಾಜಿ ರಾಘವೇಂದ್ರ ಆಚಾರ್ಯ, ಆನಂದ ಸಿ. ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಿವೃತ್ತ ಪ್ರಾಂಶುಪಾಲ ಪ್ರೊ. ರಾಧಾಕೃಷ್ಣ ಆಚಾರ್ಯ, ಗೀತಾನಂದ ಫೌಂಡೇಶನ್ ಪ್ರವರ್ತಕ ಕೋಟದ ಆನಂದ ಸಿ. ಕುಂದರ್, ಸಮಾಜ ಸೇವಕ ಶಂಭು ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಪ್ರಾಧ್ಯಾಪಕ ಡಾ.ಶಿವಾನಂದ ನಾಯಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಸಂವಿಧಾನ ರಚನಾ ಸಭೆಯ ಮಹನೀಯರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಭಾರತ ಸಂವಿಧಾನದ ಬಗ್ಗೆ ನಿವೃತ್ತ ಪ್ರಾಧ್ಯಾಪಕರಾದ ಮಂಗಳೂರಿನ  ಡಾ.ಪಿ. ಅನಂತ ಕೃಷ್ಣ ಭಟ್ ವಿಶೇಷ ಉಪನ್ಯಾಸ ನೀಡಿದರು.

ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಅಶೋಕ್ ಕಾಮತ್ ಸ್ವಾಗತಿಸಿದರು. ಸಮಾಜವಿಜ್ಞಾನ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉದಯ ಕುಮಾರ್ ವಂದಿಸಿದರು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ. ಲಕ್ಷ್ಮೀ ನಾರಾಯಣ ಸಾಮಗ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News