ಮಂಗಳೂರು ವಿಮಾನ ದುರಂತಕ್ಕೆ ಇಂದು 12 ವರ್ಷ

Update: 2022-05-22 07:27 GMT

ಮಂಗಳೂರು, ಮೇ 22: ನಗರ ಹೊರವಲಯದ ಬಜ್ಪೆ ಕೆಂಜಾರಿನಲ್ಲಿ ವಿಮಾನ ದುರಂತ ಸಂಭವಿಸಿ ಮೇ 22ಕ್ಕೆ 12 ವರ್ಷ ತುಂಬುತ್ತಿವೆ. 2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಕೆಂಜಾರು ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡ್ ಆಗುವ ಸಂದರ್ಭ ರನ್‌ವೇಯಿಂದ ಜಾರಿ ದುರಂತಕ್ಕೀಡಾಗಿತ್ತು. ಅದರ ಪೈಲಟ್, 8 ಸಿಬ್ಬಂದಿ ಸಹಿತ 166 ಮಂದಿಯ ಪೈಕಿ 158 ಮಂದಿ ಸುಟ್ಟು ಕರಕಲಾಗಿದ್ದರು. ಬೀಳುವ ವೇಳೆ ಇಬ್ಭಾಗಗೊಂಡಿದ್ದ ವಿಮಾನದಿಂದ 8 ಮಂದಿ ಜೀವದ ಹಂಗು ತೊರೆದು ನೆಲಕ್ಕೆ ಜಿಗಿದವರು ಬದುಕುಳಿದಿದ್ದಾರೆ. ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಈ ದುರಂತ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ದುರಂತದಲ್ಲಿ ಮಡಿದವರ ಪೈಕಿ 22 ಮಂದಿಯ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಆ ಮೃತದೇಹಗಳ ಡಿಎನ್‌ಎ ಪರೀಕ್ಷೆ ಮಾಡಿಸಲಾಯಿತು. ಆದರೆ ಮೃತದೇಹ ಮತ್ತು ಕುಟುಂಬಸ್ಥರ ರಕ್ತಕ್ಕೆ ತಾಳೆ ಯಾಗದ ಕಾರಣ 12 ಮೃತದೇಹಗಳು ಅನಾಥವಾಗಿ ಉಳಿದಿತ್ತು.

ದ.ಕ. ಜಿಲ್ಲಾಡಳಿತವು ಅನಿವಾರ್ಯವಾಗಿ ಕೂಳೂರು-ತಣ್ಣೀರುಬಾವಿ ಬಳಿ ಸರ್ವಧರ್ಮದ ಶಾಸ್ತ್ರದ ಪ್ರಕಾರ ಅಂತಿಮ ಸಂಸ್ಕಾರ ಮಾಡಿಸಿತಲ್ಲದೆ ಅಲ್ಲೊಂದು ‘ವಿಮಾನ ದುರಂತ ಸ್ಮಾರಕ ಉದ್ಯಾನವನ’ ನಿರ್ಮಿಸಿತ್ತು. ಆರಂಭದಲ್ಲಿ ದುರಂತ ನಡೆದ ಸ್ಥಳದಲ್ಲಿ ಶ್ರದ್ಧಾಂಜಲಿ ಸಭೆ ನಡೆಸುತ್ತಿದ್ದ ಜಿಲ್ಲಾಡಳಿತ ಬಳಿಕ ಕೂಳೂರು-ತಣ್ಣೀರುಬಾವಿ ಸಮೀಪ ಶ್ರದ್ಧಾಂಜಲಿ ಸಭೆ ಆಯೋಜಿಸುತ್ತಾ ಬಂದಿವೆ.

ಈ ಮಧ್ಯೆ ದುರಂತ ಸಂಭವಿಸಿದ ಬಳಿಕ ಸಂತ್ರಸ್ತರ ಕುಟುಂಬಸ್ಥರು ಸಭೆ ಸೇರಿ ಪರಿಹಾರಕ್ಕಾಗಿ ಸಮಾಲೋಚನೆ ನಡೆಸಿ ‘ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿ’ಯನ್ನು ರಚಿಸಿಕೊಂಡಿದ್ದರು. ಹಾಗೇ ಮುಂಬೈಯ ಕಾನೂನು ತಜ್ಞ ಎಚ್.ಡಿ.ನಾನಾವತಿಯ ನೇತೃತ್ವದ ‘ಮುಲ್ಲ ಆ್ಯಂಡ್ ಮುಲ್ಲ’ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಈ ಸಂಸ್ಥೆಯು ಬಹುತೇಕ ಕುಟುಂಬಗಳಿಗೆ ಪರಿಹಾರ ಒದಗಿಸಿತ್ತು. ಕೆಲವರು ಸಿಕ್ಕಿದ ಪರಿಹಾರಕ್ಕೆ ತೃಪ್ತಿಪಟ್ಟು ಸ್ಥಳೀಯ ನ್ಯಾಯಾಲಯ ಮಟ್ಟದಲ್ಲೇ ಪ್ರಕರಣ ಸಮಾಪ್ತಿಗೊಳಿಸಿದರೆ, ಇನ್ನು ಕೆಲವರು ಪರಿಹಾರ ತೃಪ್ತಿಕರವಾಗಿಲ್ಲ ಮತ್ತು ವಾಯು ಅಪಘಾತದ ಪರಿಹಾರದ ಕುರಿತು ಅಂತರ್‌ರಾಷ್ಟ್ರೀಯ ಒಪ್ಪಂದ ‘ಮೋಂಟ್ರಿಯಲ್ ಕನ್ವೆನ್ಷನ್’ನ ಅನ್ವಯ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಕೇರಳ ಹೈಕೋರ್ಟ್ ಮೊದಲ ಹಂತದಲ್ಲಿ ಎಲ್ಲರಿಗೂ ತಲಾ 75 ಲಕ್ಷ ರೂ. ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತ್ತು. ಇದನ್ನು ಏರ್ ಇಂಡಿಯಾ ಕಂಪೆನಿ ತ್ರಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸಿತು. ಈ ಪೀಠವು ಕಂಪೆನಿಯ ಪರವಾಗಿ ತೀರ್ಪು ನೀಡಿದ ಕಾರಣ ಹೆಚ್ಚುವರಿ ಪರಿಹಾರಕ್ಕಾಗಿ ಮಹಿಳೆಯರು ಮತ್ತು ಮಕ್ಕಳ ಸಂತ್ರಸ್ತ ಕುಟುಂಬಸ್ಥರು ಸಮಿತಿಯ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಮಗನ ಅಗಲಿಕೆಯ ಆ ನೋವು ಎಂದೆಂದೂ ಮಾಸದು: ಅಬ್ದುಸ್ಸಲಾಂ

‘‘ನನ್ನ ಮಗ ಮುಹಮ್ಮದ್ ರಾಫಿ 12 ವರ್ಷದ ಹಿಂದೆ ನಡೆದ ಮಂಗಳೂರು ವಿಮಾನ ದುರಂತ ದಲ್ಲಿ ಕೊನೆಯುಸಿರೆಳೆದ. ಮಗನ ಅಗಲಿಕೆಯ ಆ ನೋವು ನನಗೆ ಮಾತ್ರವಲ್ಲ, ನಮ್ಮ ಕುಟುಂಬದ ಯಾವೊಬ್ಬನ ಮನಸ್ಸಿನಿಂದಲೂ ಮಾಸಿಲ್ಲ. ಯಾಕೆಂದರೆ, ಮುಂಚಿನ ದಿನ ರಾತ್ರಿ ಆತ ಮನೆಗೆ ಕರೆ ಮಾಡಿ ಮರುದಿನ ಮುಂಜಾನೆ ಮಂಗಳೂರು ತಲುಪುವೆ. ನನ್ನ ಕೆಲವೊಂದು ಕನಸುಗಳಿವೆ. ಈ ಬಾರಿಯ ರಜೆಯಲ್ಲಿ ಅದನ್ನು ಈಡೇರಿಸಬೇಕಿದೆ ಎಂದಿದ್ದ. ನಾನು ಎಂದಿನಂತೆ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿದ್ದೆ. ಮರಳಿ ಬಂದಾಗ ದುರಂತದ ವಿಚಾರ ಬರಸಿಡಿಲಿನಂತೆ ಕಿವಿಗೆ ಅಪ್ಪಳಿಸಿತ್ತು’’ ಎಂದು ಕುಂಬಳೆ ಅರಿಕ್ಕಾಡಿಯ ಕಡವತ್ತಿಯ ಎಸ್.ಅಬ್ದುಸ್ಸಲಾಂ ಗದ್ಗತಿರಾದರು.

‘‘ನನಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು. ಇವರಲ್ಲಿ ಹಿರಿಯವ ನಾದ ಮುಹಮ್ಮದ್ ರಾಫಿ ಶಾರ್ಜಾದ ಬಟ್ಟೆ ಮಳಿಗೆಯೊಂದರರಲ್ಲಿ ದುಡಿಯುತ್ತಿದ್ದ. ಮೊದಲ ಬಾರಿಗೆ ನೂರಾರು ಕನಸಿನೊಂದಿಗೆ ಶಾರ್ಜಾಗೆ ಹೋಗಿದ್ದ ಆತ ಸುಮಾರು ಎರಡು ವರ್ಷ ಮೂರು ತಿಂಗಳು ಅಲ್ಲಿ ದುಡಿದಿದ್ದ. ಅವನು ಮನೆಗೆ ಆಧಾರ ಸ್ತಂಭವಾಗಿದ್ದ’’

‘‘ದುರಂತದ ಪರಿಹಾರಕ್ಕಾಗಿ ನಮ್ಮ ವಕೀಲರ ಜೊತೆ ದಿಲ್ಲಿಗೆ 14 ಬಾರಿ ಹೋಗಿದ್ದೆ. ಸತತ ಹೋರಾಟದ ಫಲವಾಗಿ 20 ಲಕ್ಷ ರೂ. ಸಿಕ್ಕಿತ್ತು. ಆ ಹಣದಿಂದ ನನ್ನ ಹಳೆಯ ಸಾಲ ತೀರಿಸಿದೆ. ಹಿರಿಯ ಮಗಳ ಮದುವೆ ಮಾಡಿಸಿದೆ. ಇನ್ನೊಬ್ಬಳು ಮಗಳ ಮದುವೆಗಾಗಿ ಮತ್ತೆ ಮನೆ ಯನ್ನೇ ಅಡವಿಟ್ಟು 5 ಲಕ್ಷ ರೂ. ಸಾಲ ಪಡೆದಿದ್ದೆ. ಈಗ ಈ ಮನೆಯ ಜಫ್ತಿಗಾಗಿ ನೋಟಿಸ್ ಬಂದಿದೆ. ಅತ್ತ ದುಡಿಯುವ ಮಗನೂ ಇಲ್ಲ. ಇತ್ತ ಮನೆಯೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ’’ ಎಂದು ಎಸ್. ಅಬ್ದುಸ್ಸಲಾಂ ಅಳಲು ತೋಡಿಕೊಂಡರು.

ಶರೀಫ್, ಫ್ರಾನ್ಸಿಸ್, ಈಶ್ವರ್ ನನ್ನನ್ನು ಆಸ್ಪತ್ರೆಗೆ ಸಾಗಿಸಲು ನೆರವಾದದ್ದನ್ನು ಮರೆಯಲಾಗದು: ಉಮರ್ ಫಾರೂಕ್ ಉಳ್ಳಾಲ

‘‘ಆ ವಿಮಾನ ದುರಂತ ಸಂಭವಿಸಿದಾಗ ನನಗೆ 25 ವರ್ಷ ಪ್ರಾಯ. ಇದೀಗ ಮದುವೆಯಾಗಿ ನಾಲ್ಕು ಮಕ್ಕಳ ತಂದೆ ಯಾಗಿದ್ದೇನೆ. ಆದರೆ ಪ್ರತೀ ಬಾರಿಯ ವಿಮಾನ ದುರಂತದ ಬಗ್ಗೆ ಯಾರಾದರೂ ಕೇಳಿದರೆ ಆ ಕ್ಷಣ ಕಣ್ಣೆದುರು ಬಂದು ನಿಲ್ಲು ತ್ತದೆ. ಅದರಲ್ಲೂ ವಿಮಾನದಿಂದ ನಾನು ಕೆಂಜಾರಿನ ಕಾಡಿಗೆ ಬಿದ್ದಾಗ ವಿಮಾನ ದುರಂತ ನಡೆದ ಬಗ್ಗೆ ಖಾತ್ರಿಯಾಗಿತ್ತು. ಎದ್ದು ನೋಡುವಷ್ಟರಲ್ಲಿ ನನ್ನ ಸುತ್ತಮುತ್ತ ನಾಲ್ಕೈದು ನಾಯಿ ಗಳಿದ್ದವು. ಗಾಯ, ನೋವಿದ್ದರೂ ನಾಯಿಯಿಂದ ರಕ್ಷಣೆ ಪಡೆಯಲು ನಾನು ಓಡಿ ಒಂದು ಮನೆಯಂಗಳ ತಲುಪಿದೆ. ದುರಂತ ನಡೆದುದನ್ನು ತಿಳಿಸಿದೆ. ತಕ್ಷಣ ಅಲ್ಲಿದ್ದ ಶರೀಫ್ ಎಂಬವರು ಬೈಕ್ ಸ್ಟಾರ್ಟ್ ಮಾಡಿದರು. ಫ್ರಾನ್ಸಿಸ್ ಎಂಬವರು ನನ್ನನ್ನು ಆ ಬೈಕ್‌ನಲ್ಲಿ ಕೂರಿಸಿ ಹಿಂಬದಿಯಲ್ಲಿ ಹಿಡಿದು ಸಹಕರಿಸಿದರು. ಹೆದ್ದಾರಿ ತಲುಪಿದ ಬಳಿಕ ಈಶ್ವರ್ ಎಂಬವರ ರಿಕ್ಷಾದಲ್ಲಿ ನನ್ನನ್ನು ಹತ್ತಿಸಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿದರು. ಸಕಾಲದಲ್ಲಿ ಅವರು ನನ್ನ ನೆರವಿಗೆ ಬಾರದೇ ಇರುತ್ತಿದ್ದರೆ...’’ ಹಾಗೆನ್ನುವಾಗಲೇ ಉಳ್ಳಾಲ ಕೋಡಿಯ ಉಮರ್ ಫಾರೂಕ್‌ರ ಕಣ್ಣಾಲಿಗಳು ತೇಲಿ ಬಂತು.

ಶನಿವಾರ ‘ವಾರ್ತಾಭಾರತಿ’ಯ ಕಚೇರಿಯಲ್ಲಿ 12 ವರ್ಷಗಳ ಹಿಂದಿನ ದುರಂತ ಘಟನೆಯನ್ನು ಮೆಲುಕು ಹಾಕಿದ ಅವರು, ‘‘ಅದೊಂದು ಕರಾಳ, ಕಹಿ ಅನುಭವ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ನಾನು ಶಾರ್ಜಾದಿಂದ ಹೊರಟು ಬಂದಿದ್ದೆ. ಲ್ಯಾಂಡ್ ಆಗುವ 10 ನಿಮಿಷ ಮುಂಚೆ ಆ ವಿಮಾನವು ಅಮಿತ ವೇಗದಲ್ಲಿತ್ತು. ದುರಂತದ ಮುನ್ಸೂಚನೆ ಸಿಕ್ಕಿದೊಡನೆ ‘ಶಹಾದತ್ ಕಲಿಮಾ’ ಹೇಳ ತೊಡಗಿದೆ. ಅದೃಷ್ಟವಶಾತ್ ನಾನು ವಿಮಾನದಿಂದ ಹಾರಿ ಬದುಕುಳಿದೆ’’.

‘‘ಸುಮಾರು 2 ತಿಂಗಳು ಆಸ್ಪತ್ರೆಯಲ್ಲಿದ್ದೆ. 8 ತಿಂಗಳು ಮನೆಯಲ್ಲೇ ವಿಶ್ರಾಂತಿ ಪಡೆದೆ. ದುರಂತಕ್ಕೆ ಮುನ್ನ ದುಬೈ ಯಲ್ಲಿದ್ದೆ. ಬಳಿಕ ಸೌದಿಯಲ್ಲಿ ಕೆಲಸ ಮಾಡುತ್ತಿದ್ದೆ, ಸದ್ಯ ನಾನು ಮಂಗಳೂರಿನಲ್ಲೇ ದುಡಿಯುತ್ತಿದ್ದೇನೆ’’.

‘‘ಆ ದುರಂತಕ್ಕೆ 12 ವರ್ಷಗಳೆ ಕಳೆದರೂ ದುರಂತಕ್ಕೆ ಸ್ಪಷ್ಟ ಕಾರಣ ಇನ್ನೂ ನಮಗೆ ಅಧಿಕೃತವಾಗಿ ತಿಳಿಸಿಲ್ಲ. ಸೂಕ್ತ ಪರಿಹಾರವೂ ಸಿಕ್ಕಿಲ್ಲ ಎಂದು ಉಮರ್ ಫಾರೂಕ್ ಅಸಮಾಧಾನ ವ್ಯಕ್ತಪಡಿಸಿದರು.

ವಿಮಾನ ಲ್ಯಾಂಡ್ ಆಗುವಾಗಲೆಲ್ಲಾ ಆ ನೆನಪು ಮರುಕಳಿಸುತ್ತಿದೆ: ಅಬ್ದುಲ್ಲಾ ಪುತ್ತೂರು

‘‘ನಾನು ಆ ದುರಂತದಿಂದ ಪಾರಾಗಿ ಬಂದದ್ದನ್ನು ಊಹಿಸಲೂ ಸಾಧ್ಯವಾ ಗುತ್ತಿಲ್ಲ. ದುರಂತ ಸಂಭವಿಸಿದ ಒಂದು ವರ್ಷದ ಬಳಿಕ ಮರಳಿ ದುಬೈಯಲ್ಲಿರುವ ಅದೇ ಕಂಪೆನಿ ಸೇರಿದ್ದೆ. ನಂತರ ಸಾಕಷ್ಟು ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದೇನೆ. ಪ್ರತೀ ಬಾರಿ ವಿಮಾನ ಲ್ಯಾಂಡ್ ಆಗುವಾಗಲೆಲ್ಲಾ ನನಗೆ ಆವತ್ತಿನ ಆ ನೆನಪು ಮರುಕಳಿಸುತ್ತಿದೆ. ಅದನ್ನು ಎಂದಿಗೂ ಮರೆಯಲಾಗದು’’ ಎಂದು ಸದ್ಯ ಯುಎಇಯ ಫುಜೈರಾ ದಲ್ಲಿರುವ ಅಬ್ದುಲ್ಲಾ ಪುತ್ತೂರು ನೆನಪಿಸಿ ಕೊಂಡರು.

‘‘ಆ ದಿನ ನಾನು ವಿಮಾನದ ಕಿಟಕಿಯ ಬದಿಯ ಸೀಟಿನಲ್ಲಿ ಕುಳಿತಿದ್ದೆ. ಇನ್ನೇನೋ ವಿಮಾನ ಲ್ಯಾಂಡ್ ಆಗುತ್ತಿದೆ ಅನ್ನುವಷ್ಟರಲ್ಲಿ ಅವಘಡದ ಮುನ್ಸೂಚನೆ ಸಿಕ್ಕಿತು. ಸಾಮಾನ್ಯ ವಾಗಿ ಲ್ಯಾಂಡ್ ಆಗುವ 5 ನಿಮಿಷ ಮುಂಚೆ ಸೀಟ್ ಬೆಲ್ಟ್ ತೆಗೆಸುತ್ತಾರೆ. ಆದರೆ ನಾನು ಸೀಟ್ ಬೆಲ್ಟ್ ಹಾಕಿಯೇ ಇದ್ದೆ. ಇದೇ ನನ್ನನ್ನು ಅಪಾಯದಿಂದ ಪಾರು ಮಾಡಿತು ಎನ್ನಬಹುದು. ಸೀಟ್ ಬೆಲ್ಟ್ ಇಲ್ಲದೇ ಇದ್ದಿದ್ದರೆ ನಾನು ಹೊತ್ತಿ ಉರಿಯುವ ಬೆಂಕಿಗೆ ಬೀಳುತ್ತಿದ್ದೆನೋ ಏನೋ? ಅಲ್ಲದೆ ಕಿಟಕಿಯ ಬದಿಯಲ್ಲೇ ನಾನಿದ್ದ ಕಾರಣ ಮತ್ತು ನಾನು ಕುಳಿತ ಭಾಗದಲ್ಲೇ ವಿಮಾನ ಎರಡು ತುಂಡಾಗಿದ್ದರಿಂದ ನಾನು ಕೆಳಗೆ ಹಾರಿದೆ. ಸುಮಾರು 15 ಆಳದ ತೋಡಿಗೆ ಬಿದ್ದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಸ್ತವ ಜಗತ್ತಿಗೆ ಮರಳಲು ಸುಮಾರು ಒಂದು ವರ್ಷ ಬೇಕಾಯಿತು’’ ಎಂದು ಅಬ್ದುಲ್ಲಾ ಪುತ್ತೂರು ಹೇಳಿದರು.

‘‘ನನ್ನ ಅಕ್ಕಪಕ್ಕ ಇದ್ದವರ ಜೊತೆ ತುಂಬಾ ಆತ್ಮೀಯತೆಯಿಂದ ಮಾತನಾಡುತ್ತಾ ಬಂದಿದ್ದೆ. ಆ ಪೈಕಿ ಹೆಚ್ಚಿನವರು ಸುಟ್ಟು ಕರಕಲಾಗಿದ್ದರು. ಅದನ್ನು ಈಗ ನೆನಪಿಸಲೂ ಸಾಧ್ಯವಾಗುತ್ತಿಲ್ಲ’’ ಎಂದು ಅವರು ದುಃಖಿತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News