ಉಷ್ಣ ಮಾರುತದಿಂದ ಮುಕ್ತಿ ಪಡೆಯಲಿರುವ ಉತ್ತರ ಭಾರತ: ಕೇರಳ,ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯ ನಿರೀಕ್ಷೆ

Update: 2022-05-22 16:42 GMT
PHOTO:REUTERS

ಹೊಸದಿಲ್ಲಿ,ಮೇ 22: ಮುಂದಿನ ನಾಲ್ಕು ದಿನಗಳ ಕಾಲ ವಾಯುವ್ಯ ಮತ್ತು ಪೂರ್ವ ಭಾರತದಲ್ಲಿ ಮಳೆ ಮುಂದುವರಿಯಲಿದ್ದು, ಸೋಮವಾರದ ವೇಳೆಗೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ತಿಳಿಸಿದೆ.ಈ ನಡುವೆ ರಾಯಲಸೀಮಾ ಮತ್ತು ನೆರೆಯ ಪ್ರದೇಶಗಳಲ್ಲಿ ಚಂಡಮಾರುತದ ಪರಿಚಲನೆಯಿದ್ದು,ಅದರ ಪ್ರಭಾವದಿಂದಾಗಿ ದಕ್ಷಿಣದ ಕೆಲವು ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಬಿಹಾರ,ಜಾರ್ಖಂಡ್,ಪ.ಬಂಗಾಳ ಮತ್ತು ಒಡಿಶಾದಂತಹ ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ ಐದು ದಿನಗಳಲ್ಲಿ ಅಲ್ಲಲ್ಲಿ ಗುಡುಗು-ಸಿಡಿಲು ಮತ್ತು ಬಿರುಗಾಳಿಯಿಂದ ಕೂಡಿದ ಚದುರಿದಂತೆ ವ್ಯಾಪಕ ಲಘು ಮತ್ತು ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಶನಿವಾರ ರಾಜ್ಯದ ಹಲವೆಡೆಗಳಲ್ಲಿ ಗರಿಷ್ಠ ತಾಪಮಾನವು 3ರಿಂದ 4 ಡಿ.ಸೆ.ಕುಸಿಯುವುದರೊಂದಿಗೆ ರಾಜಸ್ಥಾನವು ತೀವ್ರ ಧಗೆಯಿಂದ ಕೊಂಚ ನೆಮ್ಮದಿಯನ್ನು ಕಂಡಿದೆ.ಈ ನಡುವೆ ಕಳೆದ 24 ಗಂಟೆಗಳಿಂದ ಕೇರಳ,ಮಾಹೆ,ಮೇಘಾಲಯ ಮತ್ತು ತ್ರಿಪುರಾಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅರುಣಾಚಲ ಪ್ರದೇಶ,ಅಸ್ಸಾಂ,ಮೇಘಾಲಯ,ನಾಗಾಲ್ಯಾಂಡ್, ಮಣಿಪುರ,ಮಿಜೋರಾಮ,ತ್ರಿಪುರಾ,ಪ.ಬಂಗಾಳ ಮತ್ತು ಸಿಕ್ಕಿಂ ಸೇರಿದಂತೆ ಉತ್ತರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು-ಸಿಡಿಲಿನಿಂದ ಕೂಡಿದ ಲಘು,ಮಧ್ಯಮದಿಂದ ತೀವ್ರ ಮಳೆಯಾಗಲಿದೆ. ಬಳಿಕ ಮಳೆ ಕ್ಷೀಣಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.ಈಗಾಗಲೇ ಮಳೆಯಾಗುತ್ತಿರುವ ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು-ಸಿಡಿಲು ಮತ್ತು ಬಿರುಗಾಳಿಯಿಂದ ಕೂಡಿದ ಇನ್ನಷ್ಟು ಮಳೆಯಾಗುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿಯೂ ಹೆಚ್ಚಿನ ಮಳೆಯಾಗಲಿದೆ.

ತಮಿಳುನಾಡು,ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು-ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ. ಜಮ್ಮು-ಕಾಶ್ಮೀರ,ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿಯೂ ಸಾಕಷ್ಟು ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಕೇರಳದಲ್ಲಿ ಮಾಮೂಲಿನ ಜೂ.1ಕ್ಕಿಂತ ಐದು ದಿನ ಮೊದಲು,ಮೇ 27ರಂದು ಮೊದಲ ಮಳೆ ಸುರಿಯಲಿದೆ ಎಂದು ಐಎಂಡಿ ಈ ಹಿಂದೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News