ಕೇಂದ್ರವು ರೈತರನ್ನು ಕ್ರೀಡಾಂಗಣದಲ್ಲಿ ಬಂಧಿಸಿ ಇರಿಸಲು ಬಯಸಿತ್ತು: ಅರವಿಂದ ಕೇಜ್ರಿವಾಲ್

Update: 2022-05-22 17:12 GMT

ಹೊಸದಿಲ್ಲಿ, ಮೇ 22: ನೂತನ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಗೆ ಪ್ರತಿಭಟನಾ ರ್ಯಾಲಿ ನಡೆಸುವ ರೈತರನ್ನು ಬಂಧಿಸಿ ಇರಿಸಲು ದಿಲ್ಲಿ ಕ್ರೀಡಾಂಗಣಗಳನ್ನು ತಾತ್ಕಾಲಿಕ ಕಾರಾಗೃಹವಾಗಿ ಪರಿವರ್ತಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಯಸಿತ್ತು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರವಿವಾರ ಹೇಳಿದ್ದಾರೆ. ಇಲ್ಲಿ ನಡೆದ ರೈತರಿಗೆ ಗೌರವ ನೀಡುವ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ‘‘ನಾನು ಕೂಡಾ ಆಂದೋಲನದಿಂದ ಹೊರ ಬಂದಿದ್ದೆ. ಅಣ್ಣಾ ಹಜಾರೆಯವರ ಆಂದೋಲನದಿಂದ. ಆಗ ನಮಗೆ ಕೂಡ ಇದೇ ರೀತಿ ಮಾಡಲಾಗಿತ್ತು. ಅವರು ನಮ್ಮನ್ನು ಕ್ರೀಡಾಂಗಣದಲ್ಲಿ ಇರಿಸಿದ್ದರು. ನಾನು ದಿನಗಟ್ಟಳೆ ಕ್ರೀಡಾಂಗಣದಲ್ಲೇ ಇದ್ದೆ. ಇದು ರೈತರ ಆಂದೋಲನವನ್ನು ಅಂತ್ಯಗೊಳಿಸುವ ತಂತ್ರ ಎಂದು ನಾನು ಅರ್ಥ ಮಾಡಿಕೊಂಡಿದ್ದೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

‘‘ಒಂದು ವೇಳೆ ದಿಲ್ಲಿ ಪ್ರವೇಶಿಸುವ ರೈತರನ್ನು ಕ್ರೀಡಾಂಗಣದಲ್ಲಿ ಬಂಧಿಸಿ ಇರಿಸಿದರೆ, ರೈತರ ಆಂದೋಲನ ಕ್ರೀಡಾಂಗಣಕ್ಕೆ ಮಾತ್ರ ಸೀಮಿತಗೊಳ್ಳುತ್ತದೆ. ಆದರೆ, ನಾವು ಹಾಗೆ ಮಾಡಲು ನಿರಾಕರಿಸಿದೆವು. ಕ್ರೀಡಾಂಗಣವನ್ನು ಕಾರಾಗೃಹವಾಗಿ ಪರಿವರ್ತಿಸಲಾರೆವು ಎಂದು ಹೇಳಿದ್ದೆವು. ಇದರಿಂದ ಅವರು (ಕೇಂದ್ರ) ತೀವ್ರ ಆಕ್ರೋಶಗೊಂಡಿದ್ದರು. ಆದರೆ, ನಾವು ರೈತರಿಗೆ ಬೆಂಬಲವಾಗಿ ನಿಂತೆವು’’ ಎಂದು ಕೇಜ್ರಿವಾಲ್ ಒತ್ತಿ ಹೇಳಿದರು. ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಲಾಂಗರ್, ಕುಡಿಯುವ ನೀರು ಹಾಗೂ ಶೌಚಾಲಯದ ಸೌಲಭ್ಯವನ್ನು ಒದಗಿಸುವ ಮೂಲಕ ದಿಲ್ಲಿ ಸರಕಾರ ನೆರವು ನೀಡಿತು ಎಂದು ಅವರು ತಿಳಿಸಿದ್ದಾರೆ. ನನ್ನ ರೈತ ಸಹೋದರರಿಗೆ ನೆರವು ನೀಡಲು ಸಾಧ್ಯವಾಯಿತು ಎಂಬುದು ನನಗೆ ಸಂತೋಷ ಉಂಟು ಮಾಡಿದೆ. ನಮ್ಮಿಂದ ಸಾಧ್ಯವಾದ ನೆರವನ್ನು ರೈತರಿಗೆ ನೀಡಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು. ವಿವಾದಾತ್ಮಕ ಕೃಷಿ ಕಾಯ್ದೆ (ಅನಂತರ ಈ ಕಾಯ್ದೆಯನ್ನು ಹಿಂಪಡೆಯಲಾಯಿತು) ವಿರುದ್ಧ ಕಳೆದ ವರ್ಷ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಲ್ಲಿ ಓರ್ವರಾದ ರಾಕೇಶ್ ಟೀಕಾಯತ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News