ಅಫ್ಘಾನ್‌ ನ ಹಿಂದಿನ ಆಡಳಿತದೊಂದಿಗೆ ಭಾರತ ಬಾಂಧವ್ಯವನ್ನು ಉಳಿಸಿಕೊಳ್ಳಬಾರದು: ತಾಲಿಬಾನ್‌ ಮುಖಂಡ

Update: 2022-05-23 11:32 GMT
Photo: Twitter

ಹೊಸದಿಲ್ಲಿ: ಭಾರತವು ಕಾಬೂಲ್‌ನಲ್ಲಿರುವ ತಾಲಿಬಾನ್ ಸರ್ಕಾರದೊಂದಿಗೆ ರಾಷ್ಟ್ರೀಯ ಮತ್ತು ಪರಸ್ಪರ ಹಿತಾಸಕ್ತಿಯ ಆಧಾರದ ಮೇಲೆ ಸಂಬಂಧಗಳನ್ನು ಸ್ಥಾಪಿಸಬೇಕು ಮತ್ತು ಈ ಹಿಂದಿನ ಅಶ್ರಫ್ ಘನಿ ಸರ್ಕಾರದೊಂದಿಗಿನ ಎಲ್ಲಾ ಸಂಪರ್ಕಗಳನ್ನು ಕಡಿದುಕೊಳ್ಳಬೇಕು ಎಂದು ದೋಹಾದಲ್ಲಿನ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಮತ್ತು ಅಧಿಕೃತ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ.

ThePrintಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಭಾರತವು ಅಫ್ಘಾನಿಸ್ತಾನದ ಜನರೊಂದಿಗೆ ಆಳವಾದ ಸಂಬಂಧವನ್ನು ಹೊಂದಲು ಬಯಸಬೇಕು ಮತ್ತು ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಪುನಃ ತೆರೆಯಬೇಕು ಎಂದು ತಾಲಿಬಾನ್ ನಾಯಕ ಹೇಳಿದರು. ಭಾರತೀಯ ರಾಜತಾಂತ್ರಿಕರಿಗೆ ಸಂಪೂರ್ಣ ಭದ್ರತೆ ಒದಗಿಸಲು ತಾಲಿಬಾನ್ ಬದ್ಧವಾಗಿದೆ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

"ಕಾಬೂಲ್‌ನಲ್ಲಿ ಕೆಲಸ ಮಾಡುವ ಎಲ್ಲಾ ರಾಜತಾಂತ್ರಿಕರಿಗೆ ಭದ್ರತೆಯನ್ನು ಒದಗಿಸುವುದು ನಮ್ಮ ಬದ್ಧತೆ ಎಂದು ನಾವು ಇದನ್ನು ಮತ್ತೆ ಮತ್ತೆ ಘೋಷಿಸಿದ್ದೇವೆ. ಇದು ನಮ್ಮ ಜವಾಬ್ದಾರಿ ಮತ್ತು ನಾವು ಅದನ್ನು ಸಾಬೀತುಪಡಿಸಿದ್ದೇವೆ. ಕಾಬೂಲ್‌ನಲ್ಲಿ ಹಲವು ರಾಯಭಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸಂಪೂರ್ಣ ಭದ್ರತೆ ಒದಗಿಸಿದ್ದೇವೆ. ರಾಯಭಾರ ಕಚೇರಿಯನ್ನು ತೆರೆಯಲು ಬಯಸಿದರೆ ನಮ್ಮ ಪಟ್ಟಿಯಲ್ಲಿ ಭಾರವೂ ಒಳಪಡುತ್ತದೆ ” ಎಂದು ಶಾಹೀನ್ ThePrint ಗೆ ತಿಳಿಸಿದರು.

“ಅವರು (ಭಾರತ) ತಮ್ಮ ಅಪೂರ್ಣವಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಅಥವಾ ಹೊಸದನ್ನು ಪ್ರಾರಂಭಿಸಲು ಬಯಸಿದರೆ ಸ್ವಾಗತ. ಭಾರತವು ಹಿಂದಿನ ಸರಕಾರದೊಂದಿಗೆ ಸಂಬಂಧಗಳನ್ನು ಹೊಂದಿರಬಾರದು ಮತ್ತು ಅವರ ಎಲ್ಲಾ ಸಂಬಂಧಗಳು ಹಿಂದಿನ ಸರಕಾರದ ದೃಷ್ಟಿಕೋನಗಳನ್ನು ಆಧರಿಸಿ ಇರಬಾರದು. ಹಿಂದೆ ಸರಕಾರ ನಡೆಸಿದವರು ಈಗ ಪಾಶ್ಚಿಮಾತ್ಯ ದೇಶಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ, ಭಾರತ ಅಫ್ಘಾನಿಸ್ತಾನದ ಜನರೊಂದಿಗೆ ಸಂಬಂಧವನ್ನು ಹೊಂದಿರಬೇಕು. ಅವರು ಅಲ್ಲಿದ್ದರು, ಅವರು ಇದ್ದಾರೆ ಮತ್ತು ಅವರು ಇರುತ್ತಾರೆ. ಹಾಗಾಗಿ ಅದು ಅವರಿಗೆ ಒಳ್ಳೆಯದು. ನಾವು ಈಗ ಎರಡು ಸ್ವತಂತ್ರ ಸರ್ಕಾರಗಳು ಮತ್ತು ದೇಶಗಳಾಗಿದ್ದೇವೆ ಮತ್ತು ನಾವು ರಾಷ್ಟ್ರೀಯ ಹಿತಾಸಕ್ತಿಯ ಆಧಾರದ ಮೇಲೆ ಮತ್ತು ಸಮಾನತೆಯ ಆಧಾರದ ಮೇಲೆ ಸಂಬಂಧಗಳನ್ನು ಹೊಂದಿರಬೇಕು" ಎಂದು ಅವರು ಹೇಳಿದರು.

ಆಗಸ್ಟ್ 2021 ರಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಾಗ ಭಾರತವು ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತ್ತು. ಅದಕ್ಕೂ ಮೊದಲು, ಭಾರತವು ಮಝಾರ್-ಇ-ಶರೀಫ್, ಕಂದಹಾರ್, ಹೆರಾತ್ ಮತ್ತು ಜಲಾಲಾಬಾದ್‌ನಲ್ಲಿರುವ ತನ್ನ ಕಾನ್ಸುಲೇಟ್‌ಗಳನ್ನು ಮುಚ್ಚಿತ್ತು.

"ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಗೈಯಲು ವ್ಯವಸ್ಥೆಗಳನ್ನು ಶೀಘ್ರದಲ್ಲೇ ಕಲ್ಪಿಸುವುದಾಗಿಯೂ, ಅಫ್ಘಾನಿಸ್ತಾನದ ಮಣ್ಣು ಯಾವತ್ತೂ ಭಯೋತ್ಪಾದನೆಗೆ ಬಳಕೆಯಾಗಲು ನಾವು ಬಿಡುವುದಿಲ್ಲ" ಎಂದೂ  Theprint.in ಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್‌ ವಕ್ತಾರ ಹೇಳಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News