ಎಲ್ಲೂರು: ತ್ಯಾಜ್ಯ ಘಟಕಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದ ತಂಡ ಭೇಟಿ
ಪಡುಬಿದ್ರೆ : ಎಲ್ಲೂರಿನಲ್ಲಿರುವ ತ್ಯಾಜ್ಯ ವಿಲೇವರಿ ಘಟಕದಲ್ಲಿ ಉಚ್ಚಿಲ ಮತ್ತು ಪಡುಬಿದ್ರಿಯಲ್ಲಿ ತ್ಯಾಜ್ಯ ವಿಲೇವರಿಗೆ ಅವಕಾಶ ನೀಡಬೇಕು ಹಾಗೂ ಘಟಕದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವರಿ ಆಗಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದ ನಿಯೋಗವೊಂದು ಭೇಟಿ ನೀಡಿ ಪರಿಶೀಲನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಗುಂಡಿಯಲ್ಲಿ ನಿರ್ಮಾಣಗೊಂಡಿರುವ ಕಾಪು ಪುರಸಭಾ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ವಿನಯ ಕುಮಾರ್ ಸೊರಕೆ ಸ್ಥಳೀಯರ ಅಹವಾಲುಗಳನ್ನು ಆಲಿಸಿ ನಿರ್ಗಮಿಸುವ ವೇಳೆ ಎಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭಾ ಶೆಟ್ಟಿ, ಹರೀಶ್ ಮೂಲ್ಯ, ದಯಾನಂದ ಶೆಟ್ಟಿ, ಕುಟ್ಟಿ ಶೆಟ್ಟಿ, ರೇಶ್ಮಾ ಶೆಟ್ಟಿ, ಶರ್ಮಿಳಾ ಶೆಟ್ಟಿ, ಶೇಖರ್ ಶೆಟ್ಟಿ ಸಹಿತ ಗ್ರಾಮಸ್ಥರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಗಮಿಸಿ ಸೊರಕೆ ಅವರೊಂದಿಗೆ ಮಾತಿಗಿಳಿದಿದ್ದರು.
ಈ ವೇಳೆ ಸ್ಥಳೀಯರಾದ ಹೇಮಂತ್ ಶೆಟ್ಟಿ ಮಧ್ಯೆ ಪ್ರವೇಶಿಸಿ ನಿಯೋಗದಲ್ಲಿದ್ದ ಕಾಂಗ್ರೆಸ್‍ನ ಮಹಿಳಾ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದು, ವಿನಯಕುಮಾರ್ ಸೊರಕೆ ಅದನ್ನು ತಡೆದರು. ಈ ವೇಳೆ ನೂಕಾಟ, ತಲ್ಲಾಟ ನಡೆಯಿತು. ಕೆಲಕಾಲ ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಹಾಗೂ ಸಿಬ್ಬಂದಿ ನಿಯಂತ್ರಿಸಲು ಹರಸಾಹಸ ಪಟ್ಟರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಸೊರಕೆ, ತಾನು ಕಾಪು ಪುರಸಭೆಯ ತ್ಯಾಜ್ಯ ವಿಲೇವಾರಿಗಾಗಿ ಇಂತಹಾ ಒಂದು ಘಟಕಕ್ಕೆ ಜಾಗ ನೀಡಿ ಎಂದು ಅಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೆ. ಆದರೆ ಎಲ್ಲೂರಲ್ಲೇ ನೀಡಿ ಎಂದು ತಾನಂದಿಲ್ಲ. ಕೋರ್ಟ್ ತಡೆಯಾಜ್ಞೆ, ತೆರವುಗಳ ಬಳಿಕ ಆರಂಭಗೊಂಡಿದ್ದ 5 ಕೋಟಿ ರೂ. ಗಳ ಈ ಘಟಕದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ಅಗತ್ಯವಿರುವ ಯಂತ್ರಗಳನ್ನು ಅಳವಡಿಸಬೇಕಿದೆ. ಆ ಮೂಲಕ ತಾಜ್ಯವನ್ನು ಗೊಬ್ಬರವನ್ನಾಗಿ ಮಾರ್ಪಡಿಸಿ ಸಂಪನ್ಮೂಲದ ಕ್ರೋಢೀಕರಣಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿತ್ತು.
ಇಲ್ಲಿನ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ, ಶಾಸಕರು, ಸಂಸದರ ಸಹಿತ ಜನಪ್ರತಿನಿಧಿಗಳು, ಕಾಪು ಪುರಸಭೆಯ ಅಧಿಕಾರಿ ವರ್ಗವೂ ಈ ನಿಟ್ಟಿನಲ್ಲಿ ನಿಷ್ಕ್ರಿಯವಾಗಿದೆ. ಆದ್ದರಿಂದ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಇದನ್ನು ಪ್ರತಿಭಟಿಸದೇ ಬೇರೆ ದಾರಿ ಇಲ್ಲ. ಎಲ್ಲೂರು ಘಟಕದಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಲಷ್ಟೇ ಇಂದು ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯಿತ್ ಮಾಜಿ ಸದಸ್ಯ ಯು. ಸಿ. ಶೇಖಬ್ಬ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಪು ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ನವೀನ್ ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ಜ್ಯೋತಿ ಮೆನನ್, ಸಂಜೀವಿ ಪೂಜಾರ್ತಿ, ಕರುಣಾಕರ ಪೂಜಾರಿ, ಅಮೀರ್ ಕಾಪು, ರಫೀಕ್ ದಿಯು, ಗಣೇಶ್ ಆಚಾರ್ಯ, ಯಶವಂತ ಪಲಿಮಾರು, ಸುಚರಿತಾ ಪಡುಬಿದ್ರಿ, ಸತೀಶ್ ದೇಜಾಡಿ, ಅಬ್ದುಲ್ ರಝಾಕ್ ಉಚ್ಚಿಲ, ರೇಣುಕಾ ಉಚ್ಚಿಲ, ಉಚ್ಚಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಗಣೇಶ್, ಕಾಪು ಪುರಸಭೆಯ ಸದಸ್ಯರಾದ ಫರ್ಝಾನಾ, ರಾಧಿಕಾ, ಶೋಭಾ ಬಂಗೇರ ಮತ್ತಿತರಿದ್ದರು.